ಉಡುಪಿ: ವಿದ್ಯುತ್ ಸಂಪರ್ಕ ಕಡಿತಗೊಂಡು ನಾಲ್ಕು ಮಂದಿ ಲಿಫ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡು, ಅರ್ಧ ಗಂಟೆಗಳ ಕಾಲ ಪರದಾಡಿದ ಆತಂಕಕಾರಿ ಘಟನೆ ಗುರುವಾರ (ಜೂನ್ 6) ಬೆಳಿಗ್ಗೆ 10.30 ರ ಸುಮಾರಿಗೆ ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಕಚೇರಿ ಕಟ್ಟಡ ಸಂಕೀರ್ಣದಲ್ಲಿ ನಡೆದಿದೆ.
ಜನರೇಟರಿಗೆ ಇಂಧನ ಇಲ್ಲದೆ, ತುರ್ತು ನಿರ್ಗಮನ ವ್ಯವಸ್ಥೆಯು ಇಲ್ಲದೆ ಜನತೆ ತಾಲೂಕು ಆಡಳಿತಕ್ಕೆ ಹಿಡಿ ಶಾಪ ಹಾಕುವಂತಾಗಿದೆ.
ಸರಕಾರಿ ಕೆಲಸ ಕಾರ್ಯಗಳಿಗೆಂದು ಬರುವ ಜನತೆ ಬೆಳಿಗ್ಗೆನಿಂದ ಸಾಯಂಕಾಲದವರೆಗೆ ಲಿಫ್ಟ್ ವ್ಯವಸ್ಥೆಯನ್ನು ಬಳಸುತ್ತಿದ್ದು, ಆಕಸ್ಮಿಕವಾಗಿ ಏನಾದರೂ ತಾಂತ್ರಿಕ ತೊಂದರೆ ಅಥವಾ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಲಿಫ್ಟ್ ನ ಒಳಗಿದ್ದವರು ತೊಂದರೆಗೆ ಒಳಗಾಗುವಂತಾಗಿದೆ.
ಲಿಫ್ಟನ ನಿರ್ವಹಣೆಯನ್ನು ಸರಿಯಾಗಿ ನಡೆಸದೆ, ಲಿಫ್ಟ್ ನ ಮೇಲುಸ್ತುವಾರಿಯ ಜವಾಬ್ದಾರಿ ಸರಿಯಾಗಿ ನಿರ್ವಹಿಸದೆ ಇರುವುದೇ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ ಎಂದು ಜನರು ಮಾತನಾಡಿ ಕೊಳ್ಳುತ್ತಿದ್ದಾರೆ.
ಈ ಬಗ್ಗೆ ಉಡುಪಿ ತಾಲೂಕು ತಹಶೀಲ್ದಾರ್ ರವರು ಕೂಡಲೇ ಲಿಫ್ಟ್ ನಿರ್ವಹಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮುಂದೆ ಎಂದೂ ಇಂತಹ ದುರ್ಘಟನೆ ನಡೆಯದ ಹಾಗೆ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ ಎಂದು ತೊಂದರೆಗಳಾದ ಮೂಡಬಿದ್ರೆಯ ವಿಶ್ವಕುಮಾರ್ ಭಟ್ ಅವರು ಉಡುಪಿ ತಹಶೀಲ್ದಾರ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.