ಉಡುಪಿ: ಚಿಕ್ಕಮಗಳೂರಿನ ನ್ಯಾಯವಾದಿ ಪ್ರೀತಮ್ ಮೇಲೆ ಚಿಕ್ಕ ಮಗಳೂರು ನಗರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮತ್ತು ಇತರ ಪೊಲೀಸರು ನಡೆಸಿದ ಅಮಾನುಷ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮತ್ತು ಸಿಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ವಕೀಲರ ಸಂಘದ ಸದಸ್ಯರು ಮಂಗಳ ವಾರ ನ್ಯಾಯಾಲಯದ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಮಾತನಾಡಿ, ಪೊಲೀಸರು ತಮ್ಮ ಮೇಲಿನ ಆರೋಪ ಮುಚ್ಚಿಕೊಳ್ಳಲು ಯುವ ವಕೀಲನ ವಿರುದ್ಧ ಸುಳ್ಳು ಆರೋಪ ಹೊರಿಸಿ ಎಫ್ಐಆರ್ ದಾಖಲಿಸಿರುವುದು ಖಂಡನಾರ್ಹ. ವಕೀಲರ ಮೇಲೆ ಇಂತಹ ಘಟನೆಗಳು ನಡೆಯುತ್ತಿರುವುದು ಇದು ಮೊದಲಲ್ಲ. ಈ ಹಿಂದೆಯೂ ಹಲವಾರು ಬಾರಿ ನಡೆದಿವೆ. ವಕೀಲರನ್ನೇ ಕೇಂದ್ರೀಕರಿಸಿ ಕೊಂಡು ಹಲ್ಲೆ ನಡೆಸಲಾಗುತ್ತಿರುವುದು ಖಂಡನಾರ್ಹ. ಹಲ್ಲೆ ನಡೆಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಮತ್ತಷ್ಟು ತೀವ್ರರೀತಿಯಲ್ಲಿ ಪ್ರತಿಭಟಿಸ ಲಾಗುವುದು ಎಂದರು.
ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ಮಾತನಾಡಿ, ಇಂತಹ ಘಟನೆ ಗಳು ಮರುಕಳಿಸಬಾರದು. ವಕೀಲರು ಸಮಾಜದ ಆಗು-ಹೋಗುಗಳ ಬಗ್ಗೆ ತಿಳಿದುಕೊಂಡು ತಿದ್ದುವ ಕೆಲಸ ಮಾಡುತ್ತಿದ್ದಾರೆ. ವಿನಾಕಾರಣ ವಕೀಲ ರನ್ನು ಕೇಂದ್ರೀಕರಿಸಿಕೊಂಡು ಹಲ್ಲೆ ನಡೆಸುವುದು ಖಂಡನಾರ್ಹ. ಇಂತಹ ವರ್ತನೆ ಪೊಲೀಸರಿಗೆ ತರವಲ್ಲ ಎಂದರು.
ಹಿರಿಯ ನ್ಯಾಯವಾದಿ ಆನಂದ ಮಡಿವಾಳ ಮಾತನಾಡಿ,ಯುವ ನ್ಯಾಯವಾದಿಯ ಮೇಲೆ ಹಲ್ಲೆ ನಡೆಸಿದ ಪೊಲೀಸರ ಮೇಲೆ 307 ಸೆಕ್ಷನ್ ಇದ್ದರೂ ಬಂಧಿ ಸದೆ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ. ಕಾನೂನು ಗಾಳಿಗೆ ತೂರಿ ಹಲ್ಲೆ ನಡೆಸಲಾಗಿದೆ. ಟ್ರಾಫಿಕ್ ಉಲ್ಲಂಘನೆಗೆ ದಂಡ ವಿಧಿಸಲು ಆಯಾ ದರ್ಜೆಯ ಅಧಿಕಾರಿ ಇರಬೇಕು. ಆದರೆ ಸಾಮಾನ್ಯ ಪೊಲೀಸ್ ಈ ರೀತಿ ಕೀಳಾಗಿ ವರ್ತಿಸಿ ದ್ದಲ್ಲದೆ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದು, ವಕೀಲರಿಗೆ ಮಾಡಿದ ಅವಮಾನವಾಗಿದೆ. ವಕೀಲರ ಮೇಲಿನ ದೌರ್ಜನ್ಯ ತಡೆಗಾಗಿ ವಕೀಲರ ರಕ್ಷಣೆ ಕಾಯಿದೆಯನ್ನು ಶೀಘ್ರದಲ್ಲಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎ. ಸಂಜೀವ, ನ್ಯಾಯವಾದಿಗಳಾದ ಅಸಾದುಲ್ಲ, ಅಮೃತಕಲಾ, ಸೌಮ್ಯಾ, ಗಂಗಾಧರ ಎಚ್.ಎಂ., ಸಂತೋಷ್ ಮೂಡುಬೆಳ್ಳೆ, ಆರೂರು ಸುಕೇಶ್ ಶೆಟ್ಟಿ, ಶಿವಾನಂದ ಅಮೀನ್, ಸುಮಿತ್ ಹೆಗ್ಡೆ, ರವೀಂದ್ರ ಬೈಲೂರು ಸಹಿತ ಹಲವು ನ್ಯಾಯವಾದಿಗಳು ಭಾಗವಹಿಸಿದ್ದರು.