ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮೊದಲ ಎರಡು ದಿನಗಳ ಲಕ್ಷ ದೀಪೋತ್ಸವ ಶನಿವಾರ, ರವಿವಾರ ಸಂಪನ್ನಗೊಂಡಿತು. ಲಕ್ಷದೀಪಗಳ ಬೆಳಕಿನಲ್ಲಿ ತೆಪ್ಪೋತ್ಸವ ಮತ್ತು ರಥೋತ್ಸವಗಳನ್ನು ಕಾಣುವ ಭಾಗ್ಯ ನ. 13ರ ವರೆಗೆ ಭಕ್ತರಿಗೆ ಸಿಗಲಿದೆ. ಮೊದಲ ಮೂರು ದಿನ ವಾಡಿಕೆಯ ದೀಪೋತ್ಸವವಾದರೆ ಕೊನೆಯ ಎರಡು ದಿನ ಸೇವಾರ್ಥಿಗಳ ದೀಪೋತ್ಸವ ನಡೆಯಲಿದೆ.
ಸಾರ್ವಜನಿಕರಿಗೆ ದೇವರ ದರ್ಶನ ಮಾಡಿಸಲು ರಥೋತ್ಸವದ ಕಲ್ಪನೆ ಬಂತೆಂಬ ವಾದವಿದೆ. ಅದೇ ರೀತಿ ಮೊದಲ ದಿನ ಹೋಗಿ ನೋಡಲು ಆಗದವರಿಗಾಗಿಯೋ ಎಂಬಂತೆ ಮೂರು ದಿನಗಳ ಉತ್ಸವದ ವಾಡಿಕೆ ಬಂದಿರಬಹುದು. ಈಗ ಸೇವಾರ್ಥಿಗಳ ಕಾರಣದಿಂದ ಮತ್ತೂ ವಿಸ್ತರಣೆಯಾಗುತ್ತಿದೆ.
ತೆಪ್ಪೋತ್ಸವ ಮುಗಿದು ರಥಬೀದಿಗೆ ಉತ್ಸವ ಬರುವಾಗ ರಥಬೀದಿಯಲ್ಲಿ ನೆಟ್ಟ ದಳಿಗಳಲ್ಲಿ ಇರಿಸಿದ ಮಣ್ಣಿನ ಹಣತೆಗಳಿಗೆ ದೀಪಗಳನ್ನು ಹಚ್ಚಲು ಭಕ್ತರು ಆರಂಭಿಸುತ್ತಾರೆ. ಕೆಲವು ಬಾರಿ ನಿಗದಿತ ಸಮಯಕ್ಕೆ ಮುನ್ನವೇ ಹಚ್ಚುವ ಕಾರಣ ಉತ್ಸವ ಪೂರ್ಣಗೊಳ್ಳುವ ಮೊದಲೇ ನಂದಿ ಹೋಗುವ ಸಾಧ್ಯತೆಯೂ ಇರುತ್ತದೆ.
ಶನಿವಾರ ವಿಶೇಷ ಆಕರ್ಷಣೆಯಾಗಿ ತೆಪ್ಪೋತ್ಸವ ನಡೆಯುವಾಗ ಮಧ್ವಸರೋವರದ ಸುತ್ತಲೂ ಸುಶ್ರಾವ್ಯ ಭಜನೆಗಳನ್ನು ಭಜನ ಮಂಡಳಿಗಳ ಸದಸ್ಯರು ನಡೆಸಿಕೊಟ್ಟರೆ, ರಥಬೀದಿಯಲ್ಲಿ ರಥೋತ್ಸವ ಸಾಗು ವಾಗ ಜಿಲ್ಲೆಯ ಭಜನ ಮಂಡಳಿಗಳ ಸದಸ್ಯರು ಕುಣಿತದ ಭಜನ ಸೇವೆಯನ್ನು ನಡೆಸಿಕೊಟ್ಟರು. ಈ ಬಾರಿ ತೆಪ್ಪೋತ್ಸವ ನಡೆಯುವಾಗ ವೇದ ಪಾರಾಯಣ ಆಯೋಜಿಸಲಾಗಿದೆ.
ತೆಪ್ಪದಲ್ಲಿ ದೇವರ ವಿಗ್ರಹವಿರಿಸಿಕೊಂಡು ಮೂರು ಸುತ್ತು ಬರುತ್ತಾರೆ. ಶನಿವಾರ ಋಗ್ವೇದವನ್ನು ಪಾರಾಯಣ ಮಾಡಿದರೆ ರವಿವಾರ ಯಜುರ್ವೇದವನ್ನು ಪಾರಾಯಣ ಮಾಡಿದರು. ಸೋಮವಾರ ಸಾಮವೇದ, ಮಂಗಳವಾರ ಅಥರ್ವವೇದವನ್ನು, ಅನಂತರ ಮತ್ತೆ ಋಗ್ವೇದ ಪಾರಾಯಣ ಮಾಡಿಸುವ ವ್ಯವಸ್ಥೆಯನ್ನು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಕಲ್ಪಿಸಿದ್ದಾರೆ.