Advertisement

ಉಡುಪಿ: ‘ಸ್ವಚ್ಛ ನಗರ’ದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ 

07:00 AM Jan 02, 2019 | Team Udayavani |

ಉಡುಪಿ: ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಸೇರಿದಂತೆ ಜನರ ಓಡಾಟ ಹೆಚ್ಚಾಗಿರುವ ಉಡುಪಿ ನಗರದ ಕೇಂದ್ರ ಭಾಗಗಳಲ್ಲಿಯೇ ಸಾರ್ವಜನಿಕ ಶೌಚಾಲಯಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಸಮಸ್ಯೆಗೆ ಮತ್ತೊಂದು  ಸೇರ್ಪಡೆ ಎಂಬಂತೆ ಇತ್ತೀಚೆಗೆ ನಗರದ ಸುವ್ಯವಸ್ಥಿತ ಶೌಚಾಲಯವೊಂದನ್ನು ಮುಚ್ಚಿ ಬೀಗ ಹಾಕಲಾಗಿದೆ!.

Advertisement

ಸರ್ವೀಸ್‌, ಸಿಟಿ ಬಸ್‌ ನಿಲ್ದಾಣ ಮತ್ತು ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್‌ ಪರಿಸರ ಹೊರತುಪಡಿಸಿದರೆ ನಗರದ ಎಲ್ಲಿಯೂ ಸಾರ್ವಜನಿಕ ಶೌಚಾಲಯವಿಲ್ಲ!. ನಗರಕ್ಕೆ ಬಂದವರು ಶೌಚಾಲಯವನ್ನು ಹುಡುಕಿಕೊಂಡು ಹೋಗಿ ಸುಸ್ತಾಗಬೇಕಾದ ಸ್ಥಿತಿ ಇದೆ.

ತಿಂಗಳುಗಳಿಂದ ಬೀಗ!
ಜನನಿಬಿಡ ಸ್ಥಳಗಳಲ್ಲೊಂದಾದ ಹಳೆ ತಾಲೂಕು ಕಚೇರಿ ಕಟ್ಟಡದ ಪಕ್ಕದಲ್ಲಿ ಹಲವು ವರ್ಷಗಳಿಂದ ಸುವ್ಯವಸ್ಥಿತವಾಗಿದ್ದ ಸಾರ್ವಜನಿಕ ಶೌಚಾಲಯವನ್ನು ಕಳೆದ ಹಲವಾರು ತಿಂಗಳುಗಳಿಂದ ಮುಚ್ಚಿ ಬೀಗ ಜಡಿಯಲಾಗಿದೆ. ಟಾಯ್ಲೆಟ್‌ ಹುಡುಕಿ ಬರುವ ಸಾರ್ವಜನಿಕರನ್ನು ಮುಚ್ಚಿದ ಬಾಗಿಲುಗಳು ಸ್ವಾಗತಿಸುತ್ತವೆ. ಹಾಗಾಗಿ ಸಾರ್ವಜನಿಕರು ಅಲ್ಲಿಯೇ ಪಕ್ಕದಲ್ಲಿ ಗಿಡಗಂಟಿಗಳ ನಡುವೆ ಮೂತ್ರ ವಿಸರ್ಜಿಸಿ ಹೋಗುವಂತಾಗಿದೆ. ಇಲ್ಲಿ ಶೌಚಾಲಯವನ್ನು ಮುಚ್ಚಲಾಗಿರುವುದು ಮಾತ್ರವಲ್ಲದೆ ಸಾರ್ವಜನಿಕರು ಬಯಲಲ್ಲೇ ವಿಸರ್ಜನೆ ಮಾಡಲಿ ಎಂದು ಗಿಡಗಂಟಿಗಳನ್ನು ಬೆಳೆಸಿ ಇಟ್ಟಂತಾಗಿದೆ!. ಇಲ್ಲಿ ತಾಲೂಕು ಕಚೇರಿ ಕಟ್ಟಡ ಇಲ್ಲಿ ಈಗ ಇಲ್ಲವಾದರೂ ಜನರ ಓಡಾಟ ಕಡಿಮೆಯಾಗಿಲ್ಲ. ಇಂದಿರಾ ಕ್ಯಾಂಟೀನ್‌ ಕೂಡ ಇಲ್ಲಿಯೇ ಪಕ್ಕದಲ್ಲಿದೆ. ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಎಲ್ಲಿ ಅವಕಾಶವಿದೆಯೋ ಅಲ್ಲಿಯೇ ಸಾರ್ವಜನಿಕರು ದೇಹಬಾಧೆ ತೀರಿಸಿಕೊಳ್ಳುವ ಸ್ಥಿತಿ ಉಂಟಾಗಿದೆ. ಇಲ್ಲಿನ ಶೌಚಾಲಯವನ್ನು ಖಾಸಗಿಯವರ ನಿರ್ವಹಣೆಗೆ ನೀಡಲಾಗಿತ್ತು. ಅವರು ನಿರ್ವಹಣೆಗೆ ಶುಲ್ಕ ಪಡೆಯುತ್ತಿದ್ದರು. ಆದರೆ ಈಗ ಬಾಗಿಲು ಹಾಕಿ ಹೋಗಿದ್ದಾರೆ. ನಗರಸಭೆಯವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಹಲವಾರು ಮಂದಿ ನಮ್ಮಲ್ಲಿ ಸಾರ್ವಜನಿಕ ಶೌಚಾಲಯ ಎಲ್ಲಿದೆ ಎಂದು ಕೇಳುತ್ತಾರೆ. ನಾವು ಎಲ್ಲಿಗೆ ಕೈ ತೋರಿಸುವುದೆಂದು ಗೊತ್ತಾಗುತ್ತಿಲ್ಲ. ಶ್ರೀಕೃಷ್ಣ ಮಠ ಪರಿಸರ ಮತ್ತು ಬಸ್‌ ನಿಲ್ದಾಣ ಹೊರತುಪಡಿಸಿದರೆ ಬೇರೆಲ್ಲಿಯೂ ಸಾರ್ವಜನಿಕ ಶೌಚಾಲಯವಿಲ್ಲ. ರಿಕ್ಷಾ ಚಾಲಕರು ಕೂಡ ಶೌಚಕ್ಕಾಗಿ ಪರದಾಡುವ ಸ್ಥಿತಿ ಇದೆ’ ಎನ್ನುತ್ತಾರೆ ಸ್ಥಳೀಯ ರಿಕ್ಷಾ ಚಾಲಕರು.

ಸರ್ವೀಸ್‌ ಮತ್ತು ಸಿಟಿ ಬಸ್‌ ನಿಲ್ದಾಣಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳು ಹೊರಗಿನಿಂದ ಬಂದವರಿಗೆ ಪಕ್ಕನೆ ಗಮನಕ್ಕೆ ಬರುವುದಿಲ್ಲ. ಅದನ್ನು ಕೂಡ ಹುಡುಕಿಕೊಂಡು ಹೋಗಬೇಕಾಗಿದೆ. ಕೆಲವರು ಬೋರ್ಡ್‌ ಹೈಸ್ಕೂಲ್‌ ಮುಂಭಾಗ ಸೇರಿದಂತೆ ಸಿಕ್ಕಿದ ಜಾಗಗಳಲ್ಲಿ ಶೌಚ ಮಾಡುತ್ತಾರೆ. ಕತ್ತಲಾಗುತ್ತಿದ್ದಂತೆಯೇ ಹಲವೆಡೆ ಫ‌ುಟ್‌ಪಾತ್‌ ಮೇಲೆಯೇ ಜನ ದೇಹಬಾಧೆ ತೀರಿಸಿಕೊಳ್ಳುವ ದೃಶ್ಯಗಳು ಸಾರ್ವಜನಿಕ ಮುಜುಗರಕ್ಕೂ ಕಾರಣವಾಗಿದೆ.

Advertisement

ನಿರ್ವಹಣೆ ಮಾಡೋರ್ಯಾರು?
‘ಹಳೆ ತಾಲೂಕು ಕಚೇರಿ ಬಳಿ ಇರುವ ಶೌಚಾಲಯವನ್ನು ನಿರ್ವಹಣೆ ಮಾಡುತ್ತಿದ್ದ ಖಾಸಗಿಯವರು ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಬಿಟ್ಟು ಹೋಗಿದ್ದಾರೆ. ಶೌಚಾಲಯಗಳಿಗೆ ನೀರಿನ ಕೊರತೆ ಇಲ್ಲ. ಬೇರೆ ಸಂಘ ಸಂಸ್ಥೆಯವರು/ ಕಂಪೆನಿಗಳು ನಿರ್ವಹಿಸುವುದಾದರೆ ಅವರಿಗೆ ವಹಿಸಿಕೊಡಲಾಗುವುದು ಎನ್ನುತ್ತಾರೆ ನಗರಸಭೆ ಅಧಿಕಾರಿಗಳು. 

3 ಕಡೆ 3 ಇ-ಟಾಯ್ಲೆಟ್‌ ಯೋಜನೆ
ಉಡುಪಿ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಕಾಣುವ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಆದರೆ ಸ್ಥಳಾವಕಾಶದ ಕೊರತೆ ಇದೆ. ಹಾಗಾಗಿ ಇಲೆಕ್ಟ್ರಾನಿಕ್‌ ಟಾಯ್ಲೆಟ್‌ಗಳನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಕಡಿಮೆ ಸ್ಥಳಾವಕಾಶ ಸಾಕು. ಕಾಯಿನ್‌ ಹಾಕಿ ಉಪಯೋಗಿಸುವ ವ್ಯವಸ್ಥೆ ಇರುತ್ತದೆ. ಸ್ವಯಂ ಆಗಿ ಸ್ವತ್ಛವೂ ಆಗುತ್ತದೆ. 20 ಲ.ರೂ. ವೆಚ್ಚದಲ್ಲಿ ನಗರದ ಮೂರು ಕಡೆ ಇಂತಹ ಟಾಯ್ಲೆಟ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.
-ರಾಘವೇಂದ್ರ,
ಪರಿಸರ ಎಂಜಿನಿಯರ್‌ ನಗರಸಭೆ 

ಸ್ವಚ್ಛ ನಗರಕ್ಕೆ ಕಪ್ಪು
ಚುಕ್ಕೆ ಉಡುಪಿ ಜಿ.ಪಂ. ಮತ್ತು ಉಡುಪಿ ನಗರಸಭೆ ಸ್ವತ್ಛತೆ, ಬಯಲುಶೌಚ ಮುಕ್ತಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಆದರೆ ನಗರದೊಳಗೆ ಸಾರ್ವಜನಿಕ ಶೌಚಾಲಯಗಳ ಕೊರತೆ ಇದೆ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಮಾಲಿನ್ಯವಾಗುತ್ತಿದೆ. ಇದು ಸ್ವಚ್ಛ  ನಗರವೆಂದು ಹೆಸರು ಪಡೆದ ಉಡುಪಿಗೊಂದು ಕಪ್ಪುಚುಕ್ಕೆ. ಮಧುಮೇಹ ರೋಗಿಗಳಿಗಂತೂ ಭಾರೀ ಸಮಸ್ಯೆಯಾಗಿದೆ. ಖಾಸಗಿಯವರು ಮಾಡದಿದ್ದರೆ ನಗರಸಭೆಯವರೇ ನಿರ್ವಹಿಸಲಿ. ನಗರಕ್ಕೆ ಹೊಂದಿಕೊಂಡಿರುವ ಹೆದ್ದಾರಿಗಳಲ್ಲೂ ಶೌಚಾಲಯದ ಅಗತ್ಯವಿದೆ.
-ಶೇಖರ ಅಮೀನ್‌,
ರಿಕ್ಷಾ ಚಾಲಕರು

 ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next