Advertisement

ಸ್ವವಿಕಾಸಕ್ಕಾಗಿ ದೇವರಿಗೆ ವೈಭವ: ಪೇಜಾವರ ಶ್ರೀ

09:37 AM Jun 01, 2019 | Team Udayavani |

ಉಡುಪಿ: ದೇವರಿಗೆ ಸಂಪತ್ತುಗಳಾವುವೂ ಬೇಡ. ಆತನನ್ನು ನಿತ್ಯತೃಪ್ತ ಎಂದು ಭಕ್ತಪ್ರಹ್ಲಾದನೇ ಪುರಾಣದಲ್ಲಿ ಬಣ್ಣಿಸಿದ್ದಾನೆ. ಆದರೆ ನಾವು, ನಮ್ಮ ಆತ್ಮವಿಕಾಸಕ್ಕಾಗಿ ಭಗವಂತನನ್ನು ವೈಭವದಿಂದ ಪೂಜಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದರು.

Advertisement

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ಸುವರ್ಣ ಗೋಪುರ ಸಮರ್ಪಣೋತ್ಸವದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಅವರು, ಭಗವಂತ ನಿತ್ಯತೃಪ್ತನಾದ ಕಾರಣ ದೇವರಿಗೆ ನಾವು ಕೊಟ್ಟದ್ದರ ಬಗ್ಗೆ ಅಹಂಭಾವವನ್ನೂ ತಾಳಬಾರದು ಎಂದರು.

ದೇಹವನ್ನು ಅಲಂಕರಿಸಿ ಕನ್ನಡಿಯಲ್ಲಿ ನೋಡಿದರೆ ಅಲಂಕೃತವಾಗಿಯೇ ಕಾಣುತ್ತದೆ. ದೇಹದ ಬದಲು ಕನ್ನಡಿಯನ್ನು ಅಲಂಕರಿಸಿದರೆ ನಿಷ್ಪ್ರಯೋಜಕ. ಭಗವಂತ ಬಿಂಬಸ್ವರೂಪಿಯಾಗಿದ್ದು, ನಾವು ಪ್ರತಿಬಿಂಬಸ್ವರೂಪರು. ಆದ್ದ
ರಿಂದ ಭಗವಂತನನ್ನು ವೈಭವಪೂರ್ಣ ವಾಗಿ ಕಾಣಬೇಕು ಎಂದರು.

ಶ್ರೀಕೃಷ್ಣ ಚಿಣ್ಣ. ಆತನ ಗರ್ಭ ಗುಡಿಗೆ ಚಿನ್ನದ ಗೋಪುರವನ್ನು ನಿರ್ಮಿಸುವುದಕ್ಕೆ ಬಹಳ ಧೈರ್ಯ, ಭಗವತ್ಪ್ರೇಮ ಬೇಕು. ಭಕ್ತರಾದ ನಾವು ಹೃದಯಗರ್ಭದಲ್ಲಿ ದೇವರನ್ನು ಪ್ರಕಟಿಸುತ್ತೇವಾದ ಕಾರಣ ನಾವು ಮಾತಾ ಪಿತೃಗಳಂತೆ. ಇಂತಹ ಗುಣಗಳು ಪಲಿಮಾರು ಶ್ರೀಗಳಲ್ಲಿ ಇರುವುದರಿಂದ ಅವರು ದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡು ಸಫ‌ಲವಾಗಿಸಿದ್ದಾರೆ ಎಂದು ಪೇಜಾವರ ಶ್ರೀಗಳು ಬಣ್ಣಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಶ್ರೀಮದಾನಂದತೀರ್ಥ ಭಗವತ್ಪಾದರೇ ಸುವರ್ಣಮಯರು. ಅವರ ಸನ್ನಿಧಾನದಲ್ಲಿರುವ ಶ್ರೀ ಪಲಿಮಾರು ಸ್ವಾಮೀಜಿಯವರು ಶ್ರೀಕೃಷ್ಣನಿಗೆ ಸುವರ್ಣ ಗೋಪುರ ಸಮರ್ಪಿಸುವುದು ಸಮುಚಿತ ವಾದುದು ಎಂದರು.

Advertisement

ಭಗವದ್ಭಕ್ತರ ಸಹಕಾರದಿಂದ ಸುವರ್ಣ ಗೋಪುರದ ಸಮರ್ಪಣೆ ನಡೆಯುತ್ತಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು. ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠದ ಶ್ರೀವಿದ್ಯಾ ರಾಜೇಶ್ವರತೀರ್ಥ ಶ್ರೀಪಾದರು ಶುಭಕೋರಿದರು. ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ ಸ್ವಾಗತಿಸಿ ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಮೊಮ್ಮಗನ ಉಪಸ್ಥಿತಿ, ಪಿತಾಮಹನ ಸ್ಮರಣೆ
ಉದ್ಘಾಟನಾ ಸಮಾರಂಭಕ್ಕೆ ರಾಮೇಶ್ವರದ ರಾಮನಾಥಪುರ ಮನ್ನಾರ್‌ ಆದಿ ಮಹಾಸಂಸ್ಥಾನದ ಕುಮಾರನ್‌ ಸೇತುಪತಿ ಮಹಾರಾಜರು ಆಗಮಿಸಿದಾಗ, ಅವರ ಅಜ್ಜನ ಸ್ಮರಣೆಯನ್ನು ಪೇಜಾವರ ಶ್ರೀಗಳು ನಡೆಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿಯವರು ಮದ್ರಾಸ್‌
ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಕರಾವಳಿ ಪ್ರದೇಶ ಮದ್ರಾಸ್‌ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಆಗ ಈಗಿನ ಅರಸರ ಅಜ್ಜ ಷಣ್ಮುಖ ರಾಜೇಶ್ವರ ಸೇತುಪತಿಯವರು ರಾಜಗೋಪಾಲಾಚಾರಿಯವರ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಹೀಗಾಗಿ ಅವರ ಸೇವೆ ಈ ಪ್ರದೇಶಕ್ಕೂ ಸಂದಿತ್ತು. ರಾಮಸೇತುವಿನಿಂದಾಗಿ ಸೇತುಪತಿ ಎಂದು ಹೆಸರು ಬಂದಿದೆ. ಯಾರು ಏನೇ ಮಾಡಿದರೂ ರಾಮಸೇತುವನ್ನು ಕೆಡವಲಾಗಲಿಲ್ಲ ಎಂದು ಪೇಜಾವರ ಶ್ರೀಗಳು ಬೆಟ್ಟು ಮಾಡಿದರು. ಕುಮಾರನ್‌ ಸೇತುಪತಿಯವರು ರಾಮೇಶ್ವರದ ಕೋಟಿತೀರ್ಥ ಮತ್ತು ರಾಮೇಶ್ವರದ ಶಂಖವನ್ನು ಸ್ವಾಮೀಜಿಯವರಿಗೆ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next