Advertisement

ಕರಾವಳಿ ಬೈಪಾಸ್‌: ವಾಹನ ಸವಾರರಿಗೆ ಹೈವೇ ದಾಟುವುದೇ ಸಾಹಸ

06:00 AM Jun 26, 2018 | Team Udayavani |

ಮಲ್ಪೆ: ರಾಷ್ಟ್ರೀಯ ಹೆದ್ದಾರಿ ಕರಾವಳಿ ಬೈಪಾಸ್‌ ಜಂಕ್ಷನ್‌ನಲ್ಲಿ ನಡೆಯುವ ಫ್ಲೈಓವರ್‌ ಕಾಮಗಾರಿ ನಿಧಾನಗತಿಯಲ್ಲಿ ಆಗುತ್ತಿರುವುದರಿಂದ ಮಲ್ಪೆ ಕಡೆಯ ವಾಹನ ಸವಾರರು ಹೈರಾಣಾಗಿದ್ದಾರೆ. 

Advertisement

ಕಿರಿದಾದ ಸರ್ವಿಸ್‌ ರಸ್ತೆಯಲ್ಲೇ ಎಲ್ಲ ವಾಹನಗಳೂ ಸಾಗುವುದಿಂದ ಟ್ರಾಫಿಕ್‌ ಜಾಮ್‌ ಇಲ್ಲಿನ ದಿನನಿತ್ಯದ ಗೋಳಾಗಿದೆ. ಇದೀಗ ಮಳೆಗಾಲದಲ್ಲಿ  ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಬಿದ್ದು ಮಳೆನೀರು ನಿಂತು ಇನ್ನಷ್ಟು ಸಮಸ್ಯೆಯನ್ನು ತಂದೊಡ್ಡುತ್ತಿದೆ.

ಮಲ್ಪೆ, ಉಡುಪಿ ನಗರ, ಮಂಗಳೂರು, ಕುಂದಾಪುರ ಈ ನಾಲ್ಕು ಪ್ರದೇಶಗಳಿಗೂ ಪ್ರಮುಖ ಸಂಪರ್ಕ ಕೇಂದ್ರವಾದ ಕರಾವಳಿ ಬೈಪಾಸ್‌ನಲ್ಲಿ ಫ್ಲೈಓವರ್‌ ಕಾಮಗಾರಿ 2015ರಲ್ಲಿ ಆರಂಭಗೊಂಡಿದ್ದು ಎರಡು ವರ್ಷ ಕಳೆದಿದೆ. ಆದರೆ ಇನ್ನೂ ಸಂಚಾರಕ್ಕೆ ಮುಕ್ತವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಟ್ರಾಫಿಕ್‌ ಕಿರಿಕ್‌ 
ಉಡುಪಿ, ಮಂಗಳೂರು, ಮಲ್ಪೆ, ಕುಂದಾಪುರ ಸಂಚಾರ ಕೇಂದ್ರೀಕರಿಸಿ ವಾಹನಗಳು ಇಲ್ಲಿ ಸಂಚರಿಸುವುದರಿಂದ ಟ್ರಾಫಿಕ್‌ ಸಮಸ್ಯೆ ಅಧಿಕವಾಗಿದೆ. ಬಹುತೇಕ ಬಸ್ಸುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಹತ್ತಿಸುವುದರಿಂದಲೂ ಸಮಸ್ಯೆ ಉಲ್ಬಣಿಸುತ್ತಿದ್ದಾರೆ.

ಕುಂದಾಪುರ ಕಡೆಗೆ ಹೋಗುವ ಬಸ್ಸುಗಳು ಈ ಜಂಕ್ಷನ್‌ನಲ್ಲೇ ಬಸ್ಸನ್ನು ನಿಲ್ಲಿಸುವುದರಿಂದ ಆದಿವುಡುಪಿ ಕಡೆಯಿಂದ ಬರುವ ವಾಹನಗಳಿಗೆ ಮುಂದೆ ಹೋಗಲಾಗದೆ ಟ್ರಾಫಿಕ್‌ ಜಾಮ್‌ ಸಮಸ್ಯೆಯಾಗುತ್ತಿದೆ. ಜತೆಗೆ ಕೆಲವೊಮ್ಮೆ ಇಲ್ಲಿ ಕೆಲವು ಅಪಘಾತಗಳೂ ಸಂಭವಿಸಿವೆ. 

Advertisement

ಸುತ್ತುಬಳಸಿ ಹೋಗಬೇಕು
ಬೈಪಾಸ್‌ ಪ್ರದೇಶದಲ್ಲಿ ಒಟ್ಟು 400 ಮೀಟರ್‌ ನಷ್ಟು ರಸ್ತೆ ಕಾಮಗಾರಿಗಾಗಿ ಬಳಸಿಕೊಂಡಿದ್ದು ಅದರಲ್ಲಿ 300 ಮೀಟರ್‌ ಅಳತೆಯಲ್ಲಿ ಫ್ಲೈಓವರ್‌ ನಿರ್ಮಾಣವಾಗಲಿದೆ. ಇದರಿಂದ ವಾಹನ ಸವಾರರು ಸುತ್ತು ಬಳಸಿ ಹೋಗಬೇಕಾಗಿದೆ. 
ಉಡುಪಿಯಿಂದ ಮಲ್ಪೆ ಕಡೆಗೆ ಸಾಗಬೇಕಿರುವ ವಾಹನ ಚಾಲಕರು, ದ್ವಿಚಕ್ರ ಸವಾರರು ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ 200 ಮೀಟರ್‌ ಸಾಗಿ ಪೆಟ್ರೊಲ್‌ ಬಂಕ್‌ ಸಮೀಪ ಬಲಕ್ಕೆ ತಿರುಗಿ ಮಲ್ಪೆಗೆ ಸಾಗಬೇಕಾಗುತ್ತದೆ. ಅದೇ ರೀತಿ ಮಲ್ಪೆಯಿಂದ ಉಡುಪಿ ಕಡೆಗೆ ಸಾಗಬೇಕಿದ್ದಲ್ಲಿ  ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ 200 ಮೀಟರ್‌ ಸಾಗಿ ಶಾರದಾ ಹೊಟೇಲ್‌ ಬಳಿ ಬಲಕ್ಕೆ ತಿರುವು ಪಡೆದು ಉಡುಪಿ ಕಡೆಗೆ ಸಾಗಬೇಕಾಗುತ್ತದೆ. ಈ ಮಧ್ಯೆ ಟ್ರಾಫಿಕ್‌ನಲ್ಲಿ ಸಿಲುಕುವುದು, ಹೊಂಡ ಇತ್ಯಾದಿಗಳ ಕಿರಿಕಿರಿಯಿಂದ ಸವಾರರು ಬೇಸತ್ತಿದ್ದಾರೆ.    

ಹೆದ್ದಾರಿಯಲ್ಲಿ  ಹೊಂಡಗಳು
ಮಲ್ಪೆಯಿಂದ ಉಡುಪಿ ಕಡೆ ಸಂಚರಿಸುವಾಗ ಬೈಪಾಸ್‌ನಿಂದ ಮುಂದೆ ಹೋಗಿ ಶಾರದಾ ಹೊಟೇಲ್‌ ಬಳಿ ಬಲಕ್ಕೆ ತಿರುವು ಪಡೆಯುವಾಗ ಹೆದ್ದಾರಿ ಬದಿಯಲ್ಲಿ  ಹೊಂಡ ಇರುವ ಕಾರಣ ವಾಹನ ಚಾಲಕರಿಗೆ  ಅರಿವಿಲ್ಲದೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.  ಅದೇ ರೀತಿ ಉಡುಪಿಯಿಂದ ಮಲ್ಪೆ ಕಡೆಗೆ ಸಾಗುವ ವಾಹನಗಳು ಬಲಕ್ಕೆ ತಿರುಗಿದಾಗ ರಿಕ್ಷಾ ಸ್ಟಾಂಡ್ ಬಳಿಕ ದೊಡ್ಡ ಹೊಂಡ ಸೃಷ್ಟಿಯಾಗಿದೆ.  ಹೆದ್ದಾರಿಯಲ್ಲೆ ಇಷ್ಟು ದೊಡ್ಡ ಹೊಂಡ ಸೃಷ್ಟಿಯಾಗಿದ್ದರೂ ಇಲಾಖೆಯ ಅಧಿಕಾರಿಗಳು ಮೌನವಾಗಿದ್ದಾರೆ.

ಶೀಘ್ರ ಕಾಮಗಾರಿ ಮುಗಿಸಲು ಸೂಚನೆ
ಹೆದ್ದಾರಿಯಲ್ಲಿ ಅಪಘಾತಗಳ ಸಾಧ್ಯತೆ, ಸಂಚಾರ ಅವ್ಯವಸ್ಥೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಜಿಲ್ಲಾಧಿಕಾರಿಗಳು ಮೊನ್ನೆ ನಡೆದ ಸಭೆಯಲ್ಲಿ ಹೆದ್ದಾರಿ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಮುಂದೆ ಹೆದ್ದಾರಿಯಲ್ಲಿ ಅಪಘಾತಗಳು ನಡೆದರೆ ಕಾಮಗಾರಿ ನಡೆಸುವ ಸಂಬಂಧಪಟ್ಟ ಸಂಸ್ಥೆಯೇ ಅದಕ್ಕೆ ಹೊಣೆಗಾರರಾಗುತ್ತಾರೆ.  ಈ ಬಗ್ಗೆ ಇಲಾಖೆ ವತಿಯಿಂದ ಅವರಿಗೆ ನೋಟಿಸನ್ನು ಜಾರಿ ಮಾಡಲಾಗುತ್ತಿದೆ.
– ಕುಮಾರಚಂದ್ರ, 
ಹೆಚ್ಚುವರಿ ಪೊಲೀಸ್‌ಅಧೀಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next