Advertisement

Udupi: ಕಲ್ಸಂಕ ಜಂಕ್ಷನ್‌; ಹಗಲು-ರಾತ್ರಿ ಟ್ರಾಫಿಕ್‌ ಕಿರಿಕಿರಿ

01:53 PM Dec 24, 2024 | Team Udayavani |

ಉಡುಪಿ: ಕಳೆದ ಮೂರ್‍ನಾಲ್ಕು ದಿನಗಳಿಂದ ನಗರ ವಿವಿಧೆಡೆ ಟ್ರಾಫಿಕ್‌ ಸಮಸ್ಯೆ ವಿಪರೀತವಾಗಿದೆ. ಕಲ್ಸಂಕ ಜಂಕ್ಷನ್‌ನಲ್ಲಂತೂ ಟ್ರಾಫಿಕ್‌ ಗೋಳು ಹೇಳತೀರದಷ್ಟಿದೆ. ಇಲ್ಲಿ ತಾಸುಗಟ್ಟಲೆ ವಾಹನಗಳು ಸರಧಇ ಸಾಲಿನಲ್ಲಿ ನಿಂತಿರುತಿದ್ದು, ಟ್ರಾಫಿಕ್‌ ಕಿರಿಕಿರಿಯಿಂದ ಸವಾರರು, ಸಾರ್ವಜನಿಕರು ತತ್ತರಿಸಿ ಹೋಗಿದ್ದು, ಪೊಲೀಸರು ಕಂಗಲಾಗಿದ್ದಾರೆ.

Advertisement

ದಿಢೀರ್‌ ಟ್ರಾಫಿಕ್‌ ಹೆಚ್ಚಲು ಕಾರಣವೇನು?
ನಗರದಲ್ಲಿ ದಾಖಲೆ ಸಂಖ್ಯೆಯ ವಾಹನಗಳು ಕಂಡುಬಂದಿದೆ. ಕ್ರಿಸ್ಮಸ್‌ ರಜೆ, ಅಯ್ಯಪ್ಪ ಭಕ್ತರು, ಪ್ರವಾಸ ನಿಮಿತ್ತ ವಿವಿಧ ಜಿಲ್ಲೆಗಳಿಂದ ಶಾಲಾ ಮಕ್ಕಳು ಪ್ರವಾಸಕ್ಕೆಂದು ಬಂದ ಹಿನ್ನಲೆಯಲ್ಲಿ ನಗರದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಹಾಗೂ ವಾಹನ ಸಂದಣಿಯಿದೆ. ಜತೆಗೆ ವರ್ಷಾಂತ್ಯದ ದಿನಗಳಲ್ಲಿ ಹೆಚ್ಚಿನ ಉದ್ಯೋಗಿಗಳು ರಜೆ ಪಡೆದು ತಿರುಗಾಟಕ್ಕೆಂದು ಬಂದಿದ್ದು ಈ ಕಾರಣದಿಂದಲೂ ಟ್ರಾಫಿಕ್‌ ಸಮಸ್ಯೆ ತಲೆದೋರಿದೆ.

ಪುಣ್ಯ ಕ್ಷೇತ್ರಗಳಿಗೆ ಭೇಟಿ
ಕಲ್ಸಂಕ ಜಂಕ್ಷನ್‌ನಲ್ಲಿ ಸಾಮಾನ್ಯ ದಿನಗಳಲ್ಲಿಯೇ ಟ್ರಾಫಿಕ್‌ ಸಮಸ್ಯೆ ಇರುತ್ತದೆ. ಆದೀಗ ಅಧಿಕವಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಶಾಲಾ ಮಕ್ಕಳ ಸಹಿತ ಪ್ರವಾಸಿಗರು ಬಸ್‌, ಖಾಸಗಿ ವಾಹನಗಳಲ್ಲಿ ಪುಣ್ಯ ಕ್ಷೇತ್ರ ದರ್ಶನಕ್ಕೆಂದು ಕರಾವಳಿಯ ವಿವಿಧ ದೇಗುಲ, ಪ್ರವಾಸಿ ಕ್ಷೇತ್ರಗಳಿಗೆ ಭೇಟಿ ನೀಡುತಿದ್ದು. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶಿಸಿ, ಶ್ರೀ ಕೃಷ್ಣ ದರ್ಶನ ಪಡೆದು ಶಾಲಾ ವಿದ್ಯಾರ್ಥಿಗಳು ಮಣಿಪಾಲದ ಪ್ಲಾನಿಟೋರಿಯಂ ಸಹಿತ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ತಲೆದೋರಿದೆ. ಜತೆಗೆ ಮುರುಡೇಶ್ವರದಲ್ಲಿ ಪ್ರವಾಸಿಗರಿಗೆ ಬೀಚ್‌ಗೆ ತೆರಳಲು ನಿಷೇಧ ಹೇರಿದ್ದರಿಂದ ಮಲ್ಪೆ, ಸಹಿತ ಈ ಭಾಗದ ಬೀಚ್‌ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತಿದ್ದು ಹೆದ್ದಾರಿ ಮೂಲಕ ನಗರೊಳಗೆ ಸಾಗುವ ಕಲ್ಸಂಕ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.

ಹಗಲು-ರಾತ್ರಿ ಹೊತ್ತು ಸುಸ್ತು
ಜಂಕ್ಷನ್‌ನಲ್ಲಿ ಹಗಲ ರಾತ್ರಿ ಹೊತ್ತು ಟ್ರಾಫಿಕ್‌ ಜಾಮ್‌ ಆಗುತ್ತಿರುವುದರಿಂದ ಕಿ.ಮೀ. ದೂರದ ವರೆಗೆ ವಾಹನಗಳು ರಸ್ತೆಯಲ್ಲೆ ತಾಸು ಗಟ್ಟಲೆ ನಿಂತು ಕಾಯಬೇಕಿದೆ. ವಾಹನಗಳಿಂದ ಗಿಜಿಗಿಡುವ ಈ ಪ್ರದೇಶದಲ್ಲಿ ಟ್ರಾಫಿಕ್‌ ನಿಯಂತ್ರಣ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ.

ನಗರದ ವಿವಿಧ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿರುವುದರಿಂದ ವಿರಳ ಸಂಖ್ಯೆಯಲ್ಲಿರುವ ಟ್ರಾಫಿಕ್‌ ಪೊಲೀಸರನ್ನು ಅಲ್ಲಲ್ಲೇ ನಿಯೋಜಿಸಲಾಗಿದೆ. ಇದರಿಂದ ಟ್ರಾಫಿಕ್‌ ಜಾಮ್‌ ಸಮಸ್ಯೆ ಬಗೆಹರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Advertisement

ಫ‌ುಟ್‌ಪಾತ್‌ನಲ್ಲಿ ಪಾರ್ಕಿಂಗ್‌
ಬಹಳಷ್ಟು ವಾಣಿಜ್ಯ ಸಂಕಿರ್ಣಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ಫ‌ುಟ್‌ಪಾತ್‌ ನಲ್ಲಿ ಕಾರು-ಬೈಕ್‌ಗಳು ಪಾರ್ಕ್‌ ಮಾಡುತ್ತಿದ್ದು ಇದರಿಂದಾಗಿ ಪಾದಚಾರಿಗಳು, ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಕಲ್ಸಂಕ ಜಂಕ್ಷನ್‌ನ ಆಸುಪಾಸಿನಲ್ಲಿ ಮಳಿಗೆಗಳು ತಲೆ ಎತ್ತಿದ್ದು ಟ್ರಾಫಿಕ್‌ ಒತ್ತಡವನ್ನು ಇದು ಹೆಚ್ಚಿಸಿದೆ. ರಾಷ್ಟ್ರೀಯ ಪ್ರಾಧಿಕಾರ ಎಚ್ಚೆತ್ತು ಇಲ್ಲಿ ರಸ್ತೆ ವಿಸ್ತರಣೆ ಮಾಡುವುದು ಕೂಡ ಅನಿವಾರ್ಯವಾಗಿದೆ.

ಡಿಸೆಂಬರ್‌ನಲ್ಲಿ ಅತ್ಯಧಿಕ ಸಂದಣಿ
ಶ್ರೀ ಕೃಷ್ಣ ಮಠ, ಮಲ್ಪೆ ಬೀಚ್‌ಗೆ ಆಗಮಿಸುವ ವಾಹನಗಳು ಈ ಜಂಕ್ಷನ್‌ ಮೂಲಕ ಹಾದು ಹೋಗುವ ಕಾರಣ ಇಲ್ಲಿ ಟ್ರಾಫಿಕ್‌ ದಟ್ಟಣೆ ಹೆಚ್ಚಿದೆ. ಡಿಸೆಂಬರ್‌ ತಿಂಗಳು, ಕೃಷ್ಣ ಮಠದಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿರುವುದರಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ವಾಹನ ದಟ್ಟಣೆಗೆ ಕಾರಣವಾಗಿದೆ.

ಸುಗಮ ಸಂಚಾರಕ್ಕೆ ಪ್ರಯತ್ನ
ವರ್ಷಾಂತ್ಯದಲ್ಲಿ ವಾಹನ ಸಂದಣಿ ಅಧಿಕವಿರುವುದು ಸರ್ವೇ ಸಾಮಾನ್ಯ. ಪ್ರವಾಸಿಗರು, ಅಯ್ಯಪ್ಪ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರಿಂದ ಟ್ರಾಫಿಕ್‌ ಸಮಸ್ಯೆಯಾಗಿದೆ. ಇರುವ ಸಿಬಂದಿ ವಿವಿಧ ಜಂಕ್ಷನ್‌ಗಳಿಗೆ ನಿಯೋಜಿಸಿ, ಸುಗಮ ಸಂಚಾರಕ್ಕೆ ಪ್ರಯತ್ನಿಸುತ್ತಿದ್ದೇವೆ. ಕಾರು-ದ್ವಿಚಕ್ರ ವಾಹನ ಹೊಂದಿರುವ ಸ್ಥಳೀಯರು ಸಾಧ್ಯವಾದಷ್ಟು ವಾರದ ಮಟ್ಟಿಗೆ ಅನಿವಾರ್ಯ ಸಂದರ್ಭ ಕಾರು ಹೊರತುಪಡಿಸಿ, ದ್ವಿಚಕ್ರ ವಾಹನಗಳಲ್ಲಿ ಓಡಾಡುವುದು ಉತ್ತಮ.
– ಪ್ರಕಾಶ್‌ ಕಾಡಬೆಟ್ಟು, ಪೊಲೀಸ್‌ ಠಾಣಾಧಿಕಾರಿ, ನಗರ ಸಂಚಾರಿ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next