Advertisement
ಭತ್ತದ ತೆನೆಯನ್ನು ಮಾವಿನ ಎಲೆ, ಬಿದಿರು ಎಲೆಗಳಿಂದ ಸುತ್ತಿ ದಡ್ಡಲದ ತೊಗಟೆ ನಾರಿನಿಂದ ಕಟ್ಟಿದಾಗ ಅದು ಕೊರಳು ಆಗುತ್ತದೆ. ಅದನ್ನು ದೇವರ ಪೀಠ, ತೊಟ್ಟಿಲು, ಹಣದ ಪೆಟ್ಟಿಗೆ, ಅಟ್ಟ, ಬಾಗಿಲು, ಧಾನ್ಯ ಕಣಜ, ಮೊಸರು ಕಡೆಯುವ ಕಂಬ, ಬಾವಿಯ ಕಂಬ ಸೇರಿ ಎಲ್ಲ ಕಡೆ ಕಟ್ಟಲಾಗುತ್ತದೆ.
ಉತ್ತರ ಕನ್ನಡ ಭಾಗದಲ್ಲಿ ಸಂಕ್ರಮಣಕ್ಕೆ ಕದಿರು ಕಟ್ಟುತ್ತಾರೆ. ಕರಾವಳಿ ಭಾಗದಲ್ಲಿ ಈಗ ಬೆಳೆ ಬರುತ್ತಿರುವ ಕಾರಣ ಹೆಚ್ಚಾಗಿ ನವರಾತ್ರಿ ವೇಳೆ ಆಚರಣೆ ನಡೆಯುತ್ತದೆ. ಹೊಸ ಬೆಳೆಯನ್ನು ಮನೆಗೆ ತಂದು ಹೊಸಕ್ಕಿ ಊಟ ಮಾಡುವ ಸಂಪ್ರದಾಯ ಅದೇ ಭಕ್ತಿಯಿಂದ ಮುಂದುವರಿದರೆ ಉತ್ತಮ.
-ಡಾ| ಬಿ.ಗೋಪಾಲ ಆಚಾರ್ಯ, ನಿರ್ದೇಶಕರು, ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ
Related Articles
ಕೊರಳಿಗೆ ಬೇಕಾದ ತೆನೆ, ಮಾವಿನಎಲೆಗಳನ್ನು ಹಿಂದಿನ ದಿನವೇ ತಂದಿರಿಸುವುದು ಕ್ರಮ. ಗದ್ದೆಯಿಂದ ಪೈರನ್ನು ಕೊಯ್ದು ಬಾಳೆ ಎಲೆ ಹಾಸಿದ ಹರಿವಾಣದಲ್ಲಿ ಇಡಬೇಕು. ಯಜಮಾನ ಮುಂಡಾಸು ಕಟ್ಟಿದ ತಲೆಯಲ್ಲಿ ಅದನ್ನು ಹೊತ್ತು ಮನೆಗೆ ತರಬೇಕು. ಮನೆಯಲ್ಲಿ ತುಳಸಿ ಕಟ್ಟೆಯ ಬಳಿ ಅದಕ್ಕೆ ಪೂಜೆ ನಡೆಸಿ ಒಳಗೆ ತಂದು ಮರದ ಕುರ್ಚಿಯಲ್ಲಿ ಇರಿಸಬೇಕು. ಕುರ್ಚಿಯಲ್ಲಿ ಹರಿವೆ ಸೊಪ್ಪು, ಸೌತೆಕಾಯಿ, ಮುಳ್ಳುಸೌತೆ, ತೆಂಗಿನಕಾಯಿ ಸಹಿತ ಮನೆಯಲ್ಲಿ ಬೆಳೆದ ಪ್ರಮುಖ ಬೆಳೆಗಳನ್ನು ಅದರಲ್ಲಿಡಬೇಕು. ಮನೆಯ ಯಜಮಾನ ಕದಿರಿಗೆ ಪೂಜೆ ಮಾಡಿ ಬಳಿಕ ಕಟ್ಟುವ ಕೆಲಸ ನಡೆಯುತ್ತದೆ.
Advertisement
ಹೊಸತೆನೆ ಊಟ ಹೇಗಿರುತ್ತದೆ?
- ಸಂಪ್ರದಾಯದ ಪ್ರಕಾರ ಕದಿರು ಕಟ್ಟುವ ದಿನವೇ ಹೊಸಕ್ಕಿ ಊಟ ಮಾಡಬೇಕು ಎಂದಿದೆ. ಕೆಲವರು ಕದಿರು ಕಟ್ಟಿದ ಮರುದಿನ ಊಟ ಮಾಡುತ್ತಾರೆ..
- ಊಟ ಮಾಡುವ ಮುನ್ನ ಹಿರಿಯರ ಪಾದಕ್ಕೆ ನಮಸ್ಕರಿಸುವುದು ರೈತ ಕುಟುಂಬಗಳ ಸಂಪ್ರದಾಯ.
- ಊಟಕ್ಕೆ ಎಷ್ಟು ಖಾದ್ಯವೂ ಮಾಡಬಹುದು. ಆದರೆ, 3, 5, 7 ಹೀಗೆ ಬೆಸ ಸಂಖ್ಯೆಯಲ್ಲಿರಬೇಕು ಎಂಬ ನಿಯಮ ಇದೆ.
ಮನೆಗೆ ಹೊಸ ಜೀಕಳೆ - ಕದಿರು ತರುವ ದಿನ ಮನೆಯನ್ನು ಸ್ವತ್ಛಗೊಳಿಸಲಾಗುತ್ತದೆ. ಹಳೆಯ ಕದಿರುಗಳನ್ನು ತೆಗೆಯಲಾಗುತ್ತದೆ.
- ಮನೆಯ ಎದುರಿನ ಕಂಬಕ್ಕೆ ಪೂಜೆ ಸಲ್ಲಿಸುತ್ತಾರೆ. ಸೇಡಿ ಮಣ್ಣಿನ ಹುಡಿಯಿಂದ ಹೊಸ ಊಟ ತಯಾರಿಸುವ ಪಾತ್ರೆಗಳಿಗೆ ಹಾಗೂ ಮನೆಯ ವಿವಿಧ ಭಾಗಕ್ಕೆ ಬಣ್ಣ ಬಳಿಯಲಾಗುತ್ತದೆ.
- ಮನೆಯ ಪ್ರತಿ ವಸ್ತುವಿಗೂ ಕದಿರು ಕಟ್ಟುವುದರಿಂದ ಅಲ್ಲಿ ಹೊಸ ಜೀವಕಳೆ ಮೂಡುತ್ತದೆ.