Advertisement
ಮಂಗಳವಾರ ಜರಗಿದ ಜಿ.ಪಂ.ನ ಮುಂದುವರಿದ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಜ್ಯೋತಿ ಎಂ. ಅವರು “ಕೆಲವು ಶಾಲೆಗಳಲ್ಲಿ ಹಳೆಯ ದಾಸ್ತಾನಿನ ಬೇಳೆಗಳನ್ನು ಬಳಸಲಾಗುತ್ತಿದೆ. ಒಡೆದ ಪ್ಯಾಕೆಟ್ ಹಾಲುಪುಡಿ ಸರಬರಾಜಾಗುತ್ತಿದೆ. ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿಲ್ಲ’ ಎಂದು ದೂರಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರು “ನಾನು ಕೂಡ ಹಲವು ಶಾಲೆಗಳಿಗೆ ತೆರಳಿ ಪರಿಶೀಲಿಸಿದ್ದೇನೆ. ಹೆಚ್ಚಿನ ಕಡೆಗಳಲ್ಲಿ ಬೇಳೆ ಮತ್ತು ಹಾಲಿನ ಪುಡಿ ಹಾಳಾಗಿರುವುದು ಗಮನಕ್ಕೆಬಂದಿದೆ’ ಎಂದರು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಹಾಗೂ ಇತರ ಹಲವು ಸದಸ್ಯರು ಇದಕ್ಕೆ ದನಿಗೂಡಿಸಿದರು.
“ಹೆಜಮಾಡಿಯಲ್ಲಿ ಟೋಲ್‌ಗೇಟ್ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿಯೇ ಇರಬಹುದು. ಆದರೆ ಟೋಲ್ ವಸೂಲಿ ಮಾಡುತ್ತಿರುವುದು ಗ್ರಾ.ಪಂ. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ. ಟೋಲ್ ಸೋರಿಕೆಯಾಗುತ್ತದೆ ಎಂಬ ಕಾರಣ ನೀಡಿ ಇನ್ನೊಂದು ಟೋಲ್‌ಗೇಟ್ ಅಳವಡಿಸಿ ಸ್ಥಳೀಯರಿಂದಲೂ ಹಣ ವಸೂಲಿ ಸರಿಯಲ್ಲ. ಹೆಜಮಾಡಿಗೆ ಹತ್ತಿರದ ಮೂಲ್ಕಿಯವರು ಹೆಜಮಾಡಿ ಭಾಗಕ್ಕೆ ದೇವಸ್ಥಾನ, ಶಾಲೆಗೆಂದು ವಾಹನದಲ್ಲಿ (ಕೆಎ 19) ಬರುತ್ತಾರೆ. ಅವರಿಂದಲೂ ಸುಂಕ ವಸೂಲಿ ಮಾಡಲಾಗುತ್ತಿದೆ. ಸ್ಥಳೀಯ (ಕೆಎ 20) ವಾಹನಕ್ಕೆ ಟೋಲ್
ವಿನಾಯಿತಿ ಇರುವಂತೆ ಕೆಎ19 ವಾಹನಗಳಿಗೂ ರಿಯಾಯಿತಿ ನೀಡಬೇಕು. ಅವೈಜ್ಞಾನಿಕವಾಗಿ ಟೋಲ್‌ಗೇಟ್ ನಿರ್ಮಿಸಿರುವುದರಿಂದ ಸ್ಥಳೀಯರಿಗೆ ಸಮಸ್ಯೆಯಾಗಿದೆ’ ಎಂದು ರೇಷ್ಮಾ ಉದಯ ಶೆಟ್ಟಿ ಹೇಳಿದರು. ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ ದನಿಗೂಡಿಸಿದರು. ಕೆಎ 19 ವಾಹನಗಳಿಗೂ ಒಳರಸ್ತೆಯ ಟೋಲ್‌ಗೇಟ್‌ನಲ್ಲಿ ವಿನಾಯಿತಿ ನೀಡಬೇಕೆಂದು ಜಿ.ಪಂ.ನಲ್ಲಿ ನಿರ್ಣಯ ಕೈಗೊಳ್ಳಲಾಯಿತು.
Related Articles
Advertisement
ಜಿಂಕೆಗೆ ಫ್ಲೈ ಓವರ್ ನಿರ್ಮಿಸಿ !ಹಾವಂಜೆ ಗ್ರಾ.ಪಂ. ವ್ಯಾಪ್ತಿಯ ಮುಖ್ಯ ರಸ್ತೆಗೆ ತಾಗಿಕೊಂಡಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆಗಳ ಓಡಾಟದಿಂದ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಇಲ್ಲಿ ಬೇಲಿ ನಿರ್ಮಿಸಬೇಕೆಂದು ಒತ್ತಾಯಿಸಿದ್ದೇನೆ. ಆದರೆ ಅರಣ್ಯ ಇಲಾಖೆಯವರು ಬೇಲಿ ನಿರ್ಮಿಸಿದರೆ ವನ್ಯಜೀವಿಗಳ ಓಡಾಟಕ್ಕೆ ತೊಂದರೆಯಾಗುತ್ತದೆ ಎಂದು ಉತ್ತರಿಸಿದ್ದಾರೆ. ಹಾಗಾದರೆ ಜಿಂಕೆಗಳ ಓಡಾಟಕ್ಕೆ ಪ್ರತ್ಯೇಕವಾಗಿ ಫ್ಲೈಓವರ್ ನಿರ್ಮಿಸಲಿ ಎಂದು ಜನಾರ್ದನ ತೋನ್ಸೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.