Advertisement

ಆಡಳಿತ ವೈಫ‌ಲ್ಯದಿಂದ ಜನಪ್ರತಿನಿಧಿಗಳಿಗೆ ಛೀಮಾರಿ: ಸದಸ್ಯರ ಆಕ್ರೋಶ

08:45 PM Nov 27, 2019 | mahesh |

ಉಡುಪಿ: ಜಿ.ಪಂ. ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫ‌ಲರಾಗುತ್ತಿರುವುದರಿಂದ ಚುನಾಯಿತ ಜನಪ್ರತಿನಿಧಿಗಳು ಜನರಿಂದ ಛೀಮಾರಿ ಅನುಭವಿಸುವಂತಾಗಿದೆ ಎಂದು ಜಿ.ಪಂ. ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಉಡುಪಿ ಜಿ.ಪಂ.ನ 18ನೇ ಸಾಮಾನ್ಯ ಸಭೆಯು ರಜತಾದ್ರಿಯ ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಜಿ.ಪಂ.ನ ಅಜೆಂಡಾದಲ್ಲಿರುವ ಯಾವ ಕೆಲಸ ಕಾರ್ಯಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಗ್ರಾಮಸಭೆ, ಮಕ್ಕಳ ಗ್ರಾಮಸಭೆಗಳಿಗೆ ಅಧಿಕಾರಿ ಗಳು ಬರುತ್ತಿಲ್ಲ. ಕೇವಲ ನೆಪಕ್ಕಷ್ಟೇ ಸಭೆಗಳನ್ನು ನಡೆಸಲಾಗುತ್ತಿದೆ. ಸಮಸ್ಯೆಗಳ ಬಗೆಗಿನ ಚರ್ಚೆಗೆ ಉತ್ತರ ನೀಡಿ ಪರಿಹಾರ ಕಂಡುಕೊಳ್ಳುವವರು ಯಾರೂ ಇಲ್ಲ ಅಂತಾದರೆ ಸಭೆಗಳು ಅನಗತ್ಯ. ಎಲ್ಲ ಸಭೆಗಳಲ್ಲೂ ಅಧಿಕಾರಿಗಳ ಭಾಗವಹಿಸುವಿಕೆಯನ್ನು ಕಡ್ಡಾಯ ಮಾಡಿದರಷ್ಟೇ ಸ್ಪಷ್ಟವಾದ ನಿರ್ಧಾರ ಗಳನ್ನು ತೆಗೆದುಕೊಳ್ಳಲು ಸಾಧ್ಯವಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು.

ಜನರ ಸಮಸ್ಯೆಗಿಂತ ಅಧಿಕಾರಿಗಳ ಸಮಸ್ಯೆಯೇ ಅಧಿಕ!
ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ, ಹಲವು ಸಭೆಗಳಲ್ಲಿ ಪ್ರಸ್ತಾಪ ಮಾಡಿದರೂ ಅನೇಕ ಬಡವರಿಗೆ ಬಿಪಿಎಲ್‌ ರೇಶನ್‌ ಕಾರ್ಡ್‌ ವಿತರಣೆಯಾಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಸಹಾಯಕ ನಿರ್ದೇಶಕ, ಜಿಲ್ಲೆಯಲ್ಲಿ ಒಟ್ಟು 11866 ಅರ್ಜಿ ವಿಲೇವಾರಿ ಮಾಡಲಾಗಿದ್ದು, 3449 ಅರ್ಜಿ ಬಾಕಿ ಇದೆ. ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 175ಕ್ಕೂ ಅಧಿಕ ಹೊಸ ಅರ್ಜಿ ಮತ್ತು ತಿದ್ದುಪಡಿ ಅರ್ಜಿಗಳು ಸೇರಿಕೊಳ್ಳುತ್ತಿದ್ದು, ಸರ್ವರ್‌ ಸಮಸ್ಯೆ ಮತ್ತು ಸಿಬಂದಿ ಕೊರತೆಯಿಂದ 75 ಅರ್ಜಿ ಮಾತ್ರ ವಿಲೇವಾರಿ ಮಾಡಲು ಸಾಧ್ಯವಾಗುತ್ತಿದೆ. ಅರ್ಜಿಗಳ ಶೀಘ್ರ ವಿಲೇವಾರಿಗೆ ಸಿಬಂದಿ ಕೊರತೆ ಇದೆ. ಪ್ರಸ್ತುತ ಫ‌ುಡ್‌ ಇನ್‌ಸ್ಪೆಕ್ಟರ್‌ ಅವರೇ ಡೇಟಾ ಆಪರೇಟರ್‌ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಇದಕ್ಕೆ ಜನಾರ್ದನ ತೋನ್ಸೆ ಪ್ರತಿಕ್ರಿಯಿಸಿ ಬಡವರ ಸಮಸ್ಯೆಗಳಿಗಿಂತ ಅಧಿಕಾರಿಗಳ ಸಮಸ್ಯೆಯೇ ಹೆಚ್ಚಾಗಿದೆ. ಈ ಸಮಸ್ಯೆಗಾದರೂ ಪರಿಹಾರ ಒದಗಿಸುವಂತೆ ಆಗ್ರಹಿಸಿದರು. ಸದಸ್ಯೆ ಗೀತಾಂಜಲಿ ಸುವರ್ಣ ಆರೋಗ್ಯ ಸಮಸ್ಯೆ ಇರುವ ಕುಟುಂಬಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಬಿಪಿಎಲ್‌ ಕಾರ್ಡ್‌ ವಿತರಿಸುವಂತೆ ಮನವಿ ಮಾಡಿದರು.

ಹಕ್ಕುಪತ್ರ ಲಭಿಸಿಲ್ಲ
ಸದಸ್ಯೆ ರೇಷ್ಮಾ ಉದಯ ಶೆಟ್ಟಿಯವರು ಮಾತನಾಡಿ, ನಂದಿಕೂರಿನಲ್ಲಿ 4 ವರ್ಷಗಳಿಂದ ಸರಕಾರಿ ಜಾಗದಲ್ಲಿ ವಾಸಿಸುತ್ತಿರುವ ಲೀಲಾಮೂಲ್ಯ ಎಂಬವರು ಹಕ್ಕುಪತ್ರ ಪಡೆಯಲು 94ಸಿ ನಮೂನೆಯಲ್ಲಿ ಅರ್ಜಿ ಹಾಕಿದ್ದಾರೆ. ಇದಕ್ಕೆ ಕಾರ್ಯನಿರ್ವಹಣಾಧಿಕಾರಿಯವರು 2017ಕ್ಕೆ ಹಕ್ಕುಪತ್ರ ನೀಡಬಹುದು ಎಂದು ತಿಳಿಸಿದ್ದರು. ಆದರೆ ಈವರೆಗೂ ಅವರಿಗೆ ಹಕ್ಕುಪತ್ರ ಲಭಿಸಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಇದು ಪಂಚಾಯತ್‌ ಮಟ್ಟದ ವಿಚಾರವಾಗಿರುವುದರಿಂದ ಅಲ್ಲಿಯೇ ಬಗೆಹರಿಸುವಂತೆ ತಿಳಿಸಿದರು.

ಆಧಾರ್‌ ಕಾರ್ಡ್‌ ಗೊಂದಲ
ಜಿಲ್ಲೆಯಲ್ಲಿ ಶೇ. 2ರಷ್ಟು ಮಂದಿ ಆಧಾರ್‌ ಕಾರ್ಡ್‌ ಹೆಬ್ಬೆಟ್ಟು ಇತರ ಕಡೆ ಬಳಕೆ ಸಂದರ್ಭದಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ವಿಶೇಷವಾಗಿ ಗೇರುಬೀಜ ಕಾರ್ಖಾನೆ ಕಾರ್ಮಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿ.ಪಂ.ನಿಂದ ಗ್ರಾ.ಪಂ.ಗೆ ಮಾಹಿತಿ ನೀಡಿ ಸ್ಥಳೀಯ ಕಾರ್ಖಾನೆಯ ಸಿಬಂದಿಗೆ ಅರಿವು ಮೂಡಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್‌ ಹೆಗ್ಡೆ ಮಾರಾಳಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಧಾರ್‌ ಕೇಂದ್ರದ ಅಧಿಕಾರಿ, ಬೆರಳಚ್ಚು ಅಥವಾ ಒಟಿಪಿ ಇಲ್ಲದಿದ್ದರೆ “ಎ’ ದರ್ಜೆಯ ಗಜೆಟೆಡ್‌ ಅಧಿಕಾರಿಯ ಪ್ರಮಾಣ ಪತ್ರದ ಆಧಾರದ ಮೇಲೆ ಬದಲಾವಣೆ ಮಾಡಲು ಅವಕಾಶ ಇದೆ. ಜಿಲ್ಲೆಯ “ಎ’ ದರ್ಜೆ ಅಧಿಕಾರಿಗಳ ವಿವರವನ್ನು ಯುಐಡಿಎಐಗೆ ಕಳುಹಿಸಿಕೊಡಲಾಗಿದೆ. ಸ್ವಲ್ಪ ಸಮಯದಲ್ಲಿ ನಿಯಮ ಜಾರಿಯಾಗಬಹುದು ಎಂದು ತಿಳಿಸಿದರು.

Advertisement

ಮಜೂರು ಗ್ರಾಮವನ್ನು ಪ್ರಾಧಿಕಾರಕ್ಕೆ ಸೇರಿಸಲು ಆಕ್ಷೇಪ
ಸದಸ್ಯೆ ಶಿಲ್ಪಾ ಜಿ.ಸುವರ್ಣ ಮಾತನಾಡಿ, ಮಜೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಮಜೂರು ಗ್ರಾಮವನ್ನು ಪ್ರಾಧಿಕಾರಕ್ಕೆ ಸೇರಿಸಿರುವುದರಿಂದ ಗ್ರಾಮಸ್ಥರ ದೂರು, ಆಕ್ಷೇಪಗಳಿವೆ. ಈ ಬಗ್ಗೆ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗಿದೆ. ಇದನ್ನು ಪ್ರಾಧಿಕಾರದಿಂದ ಕೈಬಿಡಬೇಕು ಎಂಬ ಬಗ್ಗೆ 15 ದಿನಗಳ ಮೊದಲು ನಡೆದ ಅಧ್ಯಕ್ಷರ ಸಭೆಯಲ್ಲಿ ಮನವಿ ಮಾಡಲಾಗಿತ್ತು. ಹೇರೂರು, ಪಾದೂರು ಗ್ರಾಮವನ್ನು ಪ್ರಾಧಿಕಾರಕ್ಕೆ ಸೇರಿಸಬೇಕು ಎಂಬ ನಿರ್ಣಯ ಮಾಡಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದರು. ಈ ಬಗ್ಗೆ ಪರಿಶೀಲಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಪುತ್ರನ್‌, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್‌ ಶೆಟ್ಟಿ, ಪ್ರಭಾರ ಯೋಜನಾಧಿಕಾರಿ ಗುರುದತ್‌, ಉಪಕಾರ್ಯದರ್ಶಿ ಕಿರಣ್‌ ಪಡೆಕರ್‌ ಉಪಸ್ಥಿತರಿದ್ದರು.

ಅಧಿಕಾರಿಗಳಲ್ಲಿ ಮಾಹಿತಿ ಕೊರತೆ
ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ, ಹಾವಂಜೆ ಅಂಗನವಾಡಿಯ ಹೆಸರಿನಲ್ಲಿಯೇ ಆರ್‌ಟಿಸಿ ಬರುವ ಹಾಗೆ ನೋಡಿಕೊಳ್ಳಬೇಕು. ಹಾವಂಜೆ ವ್ಯಾಪ್ತಿಯಲ್ಲಿ ಎಷ್ಟು ಅಂಗನವಾಡಿ ಕೇಂದ್ರಗಳಿವೆ ಎಂಬ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಬಳಿ ಉತ್ತರವಿರಲಿಲ್ಲ. ಇದಕ್ಕೆ ಗರಂ ಆದ ಜಿ.ಪಂ.ಅಧ್ಯಕ್ಷ ದಿನಕರ ಬಾಬು ಹಲವಾರು ಸಭೆಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಅಧಿಕಾರಿಗಳಲ್ಲಿಯೇ ಮಾಹಿತಿ ಇಲ್ಲ ಅಂತಾದರೆ ಸಾರ್ವಜನಿಕರ ಏನು ಮಾಡಬಹುದು ಎಂದರು. ಇದಕ್ಕೆ ಸ್ಪಷ್ಟ ಉತ್ತರ ನೀಡುವಂತೆ ಎಲ್ಲ ಸದಸ್ಯರು ಪಟ್ಟುಹಿಡಿದರು. ಜಿಲ್ಲೆಯಲ್ಲಿ ತಪ್ಪು ಮಾಡುವ ಅಧಿಕಾರಿಗಳನ್ನು ಶಿಕ್ಷಿಸುವ, ಪ್ರಶ್ನಿಸುವ ಕೆಲಸ ಆಗುತ್ತಿಲ್ಲ. ಈ ಕಾರಣಕ್ಕಾಗಿಯೇ ಕೆಲಸಕಾರ್ಯಗಳು ವಿಳಂಬವಾಗುತ್ತಿವೆ ಎಂದು ಸದಸ್ಯರು ಆರೋಪಿಸಿದರು. ಈ ಬಗ್ಗೆ ಜಿ.ಪಂ.ಸಿಇಒ ಪ್ರೀತಿ ಗೆಹಲೋಟ್ ಮಾತನಾಡಿ, ಅಧಿಕಾರಿಗಳ ವೈಫ‌ಲ್ಯ ಇದ್ದಲ್ಲಿ ಕ್ರಮ ಜರಗಿಸುವ ಬಗ್ಗೆ ಗಮನಹರಿಸಲಾಗುವುದು ಎಂದರು.

ಮಹಿಳಾ ವಾರ್ಡನ್‌ಗಳನ್ನು ನೇಮಿಸಲು ಆಗ್ರಹ
ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಾಲಕಿಯ ವಸತಿ ನಿಲಯಗಳಿಗೆ ಪುರುಷ ವಾರ್ಡನ್‌ಗಳನ್ನು ನೇಮಿಸಲಾಗಿದೆ. ಕಳೆದ ಬಾರಿ ಇಲ್ಲಿ ಚರ್ಚೆ ಮಾಡಿದ ಬಳಿಕ ಒಬ್ಬ ಮಹಿಳಾ ವಾರ್ಡನ್‌ಗೆ 4-5 ವಿದ್ಯಾರ್ಥಿನಿ ನಿಲಯಗಳ ಜವಾಬ್ದಾರಿ ವಹಿಸಲಾಗಿದೆ. ಅವರು ಹೇಗೆ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಜಿಲ್ಲೆಯಲ್ಲಿ ಒಟ್ಟು 22 ವಿದ್ಯಾರ್ಥಿನಿಲಯಗಳಿದ್ದು, 12 ಬಾಲಕರ ಹಾಗೂ 10 ಬಾಲಕಿಯರ ಹಾಸ್ಟೆಲ್‌ಗ‌ಳಿವೆ. ಮಹಿಳಾ ವಾರ್ಡನ್‌ ಕೊರತೆಯಿಂದ ಕೆಲವೆಡೆ ದ್ವಿತೀಯ ದರ್ಜೆ ಸಹಾಯಕ ಪುರುಷರನ್ನು ಪ್ರಭಾರ ನೆಲೆಯಲ್ಲಿ ನೇಮಿಸಲಾಗಿದೆ ಎಂದರು. ವಿದ್ಯಾರ್ಥಿನಿಯರ ನಿಲಯಕ್ಕೆ ಮಹಿಳೆಯರೇ ವಾರ್ಡನ್‌ ಇರಬೇಕು ಎಂದು ಅನೇಕ ಸದಸ್ಯರು ಆಗ್ರಹಿಸಿದರು. ಮಹಿಳಾ ವಾರ್ಡನ್‌ ನೇಮಕಕ್ಕೆ ಸರಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next