Advertisement

ಆಭರಣ ವಿನ್ಯಾಸ ಕಲಿಕೆಗೆ ಇಲ್ಲೇ ಇದೆ ಅವಕಾಶ

06:00 AM Jun 29, 2018 | |

ಉಡುಪಿ: ಚಿನ್ನಾಭರಣ ವಿನ್ಯಾಸ ಕಲಿತು ಉದ್ಯೋಗ ಮಾಡಬೇಕು ಎನ್ನುವವರಿಗೆ ಈಗ ಉಡುಪಿಯಲ್ಲೇ ಅವಕಾಶ ಲಭ್ಯ. ಚಿನ್ನಾಭರಣ ವಿನ್ಯಾಸವನ್ನು ಕಲಿಯಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಒಳಪಟ್ಟ ಜೆಮ್ಸ್‌ ಆ್ಯಂಡ್‌ ಜುವೆಲರಿ ಪ್ರಮೋಶನ್‌ ಕೌನ್ಸಿಲ್‌ (ಜಿಜೆಇಪಿಸಿ)ನ ಅಂಗ ಸಂಸ್ಥೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಜೆಮ್ಸ್‌ ಆ್ಯಂಡ್‌ ಜುವೆಲರಿ ಈಗ ಇಲ್ಲೇ ಕಾರ್ಯಾರಂಭ ಮಾಡಿದೆ.ಇಲ್ಲಿನ ಕರಾವಳಿ ಬೈಪಾಸ್‌ ಬಳಿಯ ಕೆನರಾ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಆರಂಭವಾಗಿದೆ. 

Advertisement

ಉದ್ಘಾಟನೆ ಮುನ್ನವೇ ತರಬೇತಿ 
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಮುತುವರ್ಜಿಯಲ್ಲಿ ಉಡುಪಿಯಲ್ಲಿ ಆರಂಭಗೊಂಡ ಈ ಸಂಸ್ಥೆ ಮಾ. 29ರಂದು ಉದ್ಘಾಟನೆಗೊಳ್ಳಬೇಕಿತ್ತು. ಆದರೆ ಚುನಾವಣಾ ನೀತಿ ಸಂಹಿತೆಯಿಂದಾಗಿ ಉದ್ಘಾಟನೆ ಗೊಳ್ಳದೆ ತರಬೇತಿ ಆರಂಭಿಸಿದೆ. ಈಗಾಗಲೇ 1 ಬ್ಯಾಚ್‌ ತರಬೇತಿ ಪೂರೈಸಿದ್ದು, ಇನ್ನೊಂದು ಬ್ಯಾಚ್‌ಗೆ ತರಬೇತಿ ನಡೆಯುತ್ತಿದೆ.


ವಿದ್ಯಾರ್ಥಿಗಳು ತಯಾರಿಸಿದ ಆಭರಣದ ವಿವಿಧ ಮಾದರಿಗಳು.

ಅಪರೂಪದ ಕೋರ್ಸ್‌
ಇಲ್ಲಿ ಕ್ಯಾಡ್‌ ಬೇಸ್ಡ್ ತರಬೇತಿಗೆ ಉತ್ಕೃಷ್ಟ ಮಟ್ಟದ ಮ್ಯಾಟ್ರಿಕ್ಸ್‌ ಸಾಫ್ಟ್ವೇರ್‌ ಬಳಸಲಾಗುತ್ತಿದೆ. ಈ ಕೋರ್ಸ್‌ ಬೆಂಗಳೂರು ಹೊರತು ಪಡಿಸಿದರೆ ಉಡುಪಿಯಲ್ಲಿ ಮಾತ್ರ ಇದೆ. ಇಲ್ಲಿರುವ ಕಾಮನ್‌ ಫೆಸಿಲಿಟಿ ಸೆಂಟರ್‌ (ಸಿಎಫ್ಸಿ) ನಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆದವರು, ಜುವೆಲರಿ ಮಳಿಗೆಯವರು, ಕುಶಲಕರ್ಮಿ ಗಳು  ಅತ್ಯಾಧುನಿಕ ಯಂತ್ರೋಕರಣಗಳನ್ನು ಬಳಸಿಕೊಳ್ಳಲೂ ಅವಕಾಶವಿದೆ. ಜತೆಗೆ ಇಲ್ಲಿ ಚಿನ್ನದ ಶುದ್ಧತೆಯನ್ನು ಶೋಧಿಸುವ  18 ಲ.ರೂ.ಗೂ ಹೆಚ್ಚಿನ ಮೌಲ್ಯದ ಗೋಲ್ಡ್‌ ಟೆಸ್ಟಿಂಗ್‌ ಮೆಷಿನ್‌ (ಗೋಲ್ಡ್‌ ಎನಲೈಸರ್‌)ಇದೆ.

ತರಬೇತಿಗೆ ವಿದೇಶಿ ಯಂತ್ರೋಪಕರಣಗಳು  
ಲೋಹವನ್ನು  ಸರಿಗೆ, ತಗಡನ್ನಾಗಿ ಪರಿವರ್ತಿಸುವ ವೈರ್‌ ಶೀಟ್‌ ರೋಲಿಂಗ್‌ ಮಿಲ್‌, ಆಭರಣ ಪಾಲಿಶಿಂಗ್‌ನ ಪಿಟ್ಟಿಂಗ್‌ ಮೆಷಿನ್‌, ಆಭರಣ ತಯಾರಿಕೆಯ ಬೆಂಚ್‌ಗಳು, ಎನಾಮಲ್‌ ಪರ್ನೆಲ್‌, ಡಿ-ವ್ಯಾಕ್ಸರ್‌, ಪೆನ್‌ ಪ್ಲೇಟಿಂಗ್‌ (ರೋಡಿಯಂ ಪ್ಲೇಟಿಂಗ್‌), ಆಭರಣ ಸ್ವತ್ಛತೆಯ ಅಲ್ಟ್ರಾ ಸೋನಿಕ್‌ ಕ್ಲೀನರ್‌, ಸ್ಟೀಮ್‌ ಕ್ಲೀನರ್‌, ಮ್ಯಾಗ್ನಟಿಕ್‌ ಪಾಲಿಶರ್‌, ಸಾಣೆ ಹಿಡಿಯುವ ಲ್ಯಾಪಿಂಗ್‌ ಮೆಷಿನ್‌, ಶಾರ್ಟ್‌ ಮೇಕಿಂಗ್‌ ಮೆಷಿನ್‌, ಇಂಡಕ್ಷನ್‌ ಮೆಲ್ಟರ್‌, ಕಾಸ್ಟಿಂಗ್‌ ಯುನಿಟ್‌ನಲ್ಲಿ ವೆಲ್ಕನೈಸರ್‌, ವ್ಯಾಕ್ಸ್‌ ಇಂಜೆಕ್ಟರ್‌, ಬರ್ನ್-ಔಟ್‌ ಮೆಷಿನ್‌, ತ್ರಿ-ಇನ್‌-ವನ್‌ ಕಾಸ್ಟಿಂಗ್‌ ಮೆಷಿನ್‌ ಸೇರಿದಂತೆ ಹಲವು ಅತ್ಯಾಧುನಿಕ ವಿದೇಶಿ ಯಂತ್ರೋಪರಕರಣಗಳು ಇಲ್ಲಿವೆ. 

ಯಾವೆಲ್ಲ ಕೋರ್ಸ್‌ಗಳು?
ಪ್ರಸ್ತುತ ಇಲ್ಲಿ 2 ತಿಂಗಳ ವಿನ್ಯಾಸದ ಕುರಿತ 4 ಕೋರ್ಸ್‌ಗಳಿವೆ. 
ಜುವೆಲರಿ ಡಿಸೈನ್‌-ಮಾನ್ಯುವಲ್‌
ಜುವೆಲರಿ ಡಿಸೈನ್‌-ಕ್ಯಾಡ್‌ ಬೇಸ್ಡ್
ಜುವೆಲರಿ ಮ್ಯಾನುಫ್ಯಾಕ್ಚರಿಂಗ್‌-ಕಾಸ್ಟಿಂಗ್‌ 
ಜುವೆಲರಿ ಮೇಕಿಂಗ್‌-ಬೆಂಚ್‌ ವರ್ಕ್‌

Advertisement

ಸುಸಜ್ಜಿತ ಸಂಸ್ಥೆ
ಸಂಸ್ಥೆಯಲ್ಲಿ ಪ್ರಸ್ತುತ 3 ಮಂದಿ ನುರಿತ ತರಬೇತಿದಾರರಿದ್ದು, 10 ಮಂದಿ ವಿದ್ಯಾರ್ಥಿಗಳಿಗೆ ತರಬೇತಿಗೆ ಅವಕಾಶವಿದೆ. ಪ್ರಸ್ತುತ ಕೇರಳ, ಪ.ಬಂಗಾಲ, ಮಂಗಳೂರು, ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಿಜಿ ಮೂಲಕ ವಸತಿ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಆಭರಣ ತಯಾರಿಕೆಗೆ ಸಂಬಂಧಿಸಿ ಟೂಲ್ಸ್‌ಕಿಟ್‌ ನೀಡಲಾಗುತ್ತಿದೆ. ಗ್ರಂಥಾಲಯ, ಮ್ಯಾನುವಲ್‌ ಡಿಸೈನಿಂಗ್‌ ಲ್ಯಾಬ್‌/ಕ್ಲಾಸ್‌, ಕ್ಯಾಡ್‌ ಲ್ಯಾಬ್‌, ಸುಸಜ್ಜಿತ ತರಗತಿ ಕೋಣೆಗಳು ಸೇರಿದಂತೆ 3,400 ಚ.ಅಡಿ. ವಿಸ್ತೀರ್ಣದಲ್ಲಿ ಸಂಸ್ಥೆ ಕಾರ್ಯಾಚರಿಸುತ್ತಿದೆ.
– ಶಿವರಾಮ ಆಚಾರ್ಯ
ಎಚ್‌ಒಡಿ, ಸೀನಿಯರ್‌ ಮ್ಯಾನೇಜರ್‌, ಐಐಜಿಜೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next