ಉಡುಪಿ: ಇಂದ್ರಾಳಿ ರೈಲು ನಿಲ್ದಾಣ 9 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿದ್ದು, ಮೊದಲ ಹಂತವಾಗಿ ಫ್ಲ್ಯಾಟ್‌ಫಾರಂ ಮೇಲ್ಛಾವಣಿ ಹಾಗೂ ಸ್ಕೈವಾಕ್ ಮೇಲ್ಛಾವಣಿ ನಿರ್ಮಿಸುವುದಾಗಿ ಕೊಂಕಣ ರೈಲು ನಿಗಮದ ಮುಖ್ಯಸ್ಥ ಹಾಗೂ ಎಂಡಿ ಸಂತೋಷ್ ಕುಮಾರ್ ಝಾ ಹೇಳಿದರು.
ರೈಲು ನಿಲ್ದಾಣದಲ್ಲಿ ಕನಿಷ್ಠ ಮೂಲಸೌಕರ್ಯ ಇಲ್ಲದಿರುವ ಬಗ್ಗೆ “ಉದಯವಾಣಿ’ ಸರಣಿ ವರದಿ ಪ್ರಕಟಿಸಿತ್ತು. ಬಳಿಕ ಶಾಸಕ ಯಶ್‌ಪಾಲ್ ಸುವರ್ಣ ಅವರು ಸ್ಥಳ ಪರಿಶೀಲಿಸಿಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಶುಕ್ರವಾರ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು ಝಾ, ಮೊದಲ ಹಂತದಲ್ಲಿ ಪ್ಲಾಟ್‌ಫಾರಂ ಶೆಲ್ಟರ್ ಹಾಗೂ ಸಫೇಸ್ ಸಿದ್ಧಪಡಿಸಲಿದ್ದೇವೆ. ಎಲ್ಲ ಪ್ಲಾಟ್‌ಫಾರಂಗೂ ಶೆಲ್ಟರ್ ಅಳವಡಿಸಲು ಸುಮಾರು 4.20 ಕೋ.ರೂ. ಅಗತ್ಯವಿದೆ. ಹೀಗಾಗಿ ಇದನ್ನು ಹಂತ ಹಂತವಾಗಿ ಮಾಡಲಿದ್ದೇವೆ. ವಿವಿಧ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಬೇಕಾದ ಮೂಲ ಸೌಕರ್ಯ ಒದಗಿಸುವುದಾಗಿ ತಿಳಿಸಿದರು.
ಉಡುಪಿ ರೈಲು ನಿಲ್ದಾಣದ ಸೌಕರ್ಯಗಳ ಅಭಿವೃದ್ಧಿಗೆ ಸುಮಾರು 9 ಕೋ.ರೂ. ಬೇಕು. ಈ ವರ್ಷ 2 ಕೋಟಿ ರೂ. ಮೀಸಲಿಟ್ಟಿದ್ದು, ಅಗತ್ಯವಿದ್ದಲ್ಲಿ ಇನ್ನಷ್ಟು ನಿಧಿಯನ್ನು ಒದಗಿಸಲಾಗುವುದು. ಪ್ರಯಾಣಿಕರ ಅನುಕೂಲಕ್ಕೆ ಎಸ್ಕಲೇಟರ್ ಅನ್ನು ನಿಲ್ದಾಣದ ಒಳ ಭಾಗಕ್ಕೆ ಸ್ಥಳಾಂತರಿಸಲಾಗುವುದು. ಹಾಗೆಯೇ ಲಿಫ್ಟ್ ವ್ಯವಸ್ಥೆ ಕಲ್ಪಿಸುವು ದಾಗಿ ಹೇಳಿದರು. ಕೊಂಕಣ ರೈಲ್ವೇ ಇತಿಹಾಸದಲ್ಲೇ ಕಳೆದ ಬಾರಿ 301 ಕೋ.ರೂ. ಲಾಭ ಗಳಿಸಿದೆ. ಈ ಬಾರಿ 1,200 ಕೋ.ರೂ. ಯೋಜನೆಗಳನ್ನು ಹಾಕಿಕೊಂಡಿದ್ದು, 200 ಕೋ.ರೂ. ಲಾಭದ ನಿರೀಕ್ಷೆ ಇದೆ. ಶೇ.100ರಷ್ಟು ಹಳಿ ವಿದ್ಯುದ್ದೀಕರಣ ಪೂರ್ಣ ಗೊಂಡಿದ್ದು, ವಾರ್ಷಿಕ 190 ಕೋ.ರೂ. ಉಳಿತಾಯವಾಗುತ್ತಿದೆ. ಹಳಿ ದ್ವಿಪಥ ಇತ್ಯಾದಿ ಪ್ರಸ್ತಾವ ಇದೆ ಎಂದು ಹೇಳಿದರು.
ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರು ಮಾತನಾಡಿ, ಉಡುಪಿ ರೈಲು ನಿಲ್ದಾಣ ಉನ್ನತೀಕರಣ ಹಾಗೂ ವಂದೇ ಭಾರತ್ ವಿಸ್ತರಣೆಗೆ ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿದೆ. ಕೊಂಕಣ ರೈಲು ವಿಭಾಗ ಆದ್ಯತೆ ಮೇರೆಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಹೇಳಿದರು.
ವಿಶ್ರಾಂತಿ ಕೊಠಡಿ ಉದ್ಘಾಟನೆ
ಇಂದ್ರಾಳಿ ನಿಲ್ದಾಣದಲ್ಲಿ ನೂತನ ವಿಶ್ರಾಂತಿ ಕೊಠಡಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಯ ವರು ಉದ್ಘಾಟಿಸಿ, ಭಾರತೀಯ ರೈಲ್ವೆ ಯೊಂದಿಗೆ ಕೊಂಕಣ ರೈಲು ವಿಲೀನಕ್ಕೂ ಪ್ರಯತ್ನಿಸುವುದಾಗಿ ತಿಳಿಸಿದರು. ಈ ವಿಶ್ರಾಂತಿ ಕೊಠಡಿಯಲ್ಲಿ 10 ಆಸನಗಳಿದ್ದು, ಅಗತ್ಯ ವ್ಯವಸ್ಥೆಗಳಿವೆ.