Advertisement

Udupi ಅಕ್ರಮ ಸಕ್ರಮ: ಪುರಸ್ಕರಿಸಿದ ಅರ್ಜಿಗಳಿಗಿಂತ ತಿರಸ್ಕೃತವೇ ಹೆಚ್ಚು

11:38 PM Sep 02, 2023 | Team Udayavani |

ಉಡುಪಿ: ಜಿಲ್ಲೆಯಲ್ಲಿ ಸರಕಾರಿ ಜಾಗದಲ್ಲಿ ದಶಕಗಳಿಂದ ಕೃಷಿ ಅಥವಾ ನಿವೇಶನ/ ಮನೆ ಇರುವ ಪ್ರದೇಶದ ಹಕ್ಕುಪತ್ರಕ್ಕಾಗಿ ಅಕ್ರಮ ಸಕ್ರಮ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ತಿರಸ್ಕೃತಗೊಂಡಿರುವುದೇ ಹೆಚ್ಚು.

Advertisement

ಕಾಲಂ 94ಸಿ ಅಡಿಯಲ್ಲಿ ಗ್ರಾಮೀಣ ಭಾಗದಲ್ಲಿ ಸರಕಾರಿ ಭೂಮಿಯಲ್ಲಿ ವಾಸವಿದ್ದು ಸರಕಾರದ ನಿಯಮಾನುಸಾರವಾಗಿ ಸಕ್ರಮಕ್ಕಾಗಿ 38,506 ಮಂದಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 9,722 ಅರ್ಜಿಯನ್ನು ಮಂಜೂರು ಮಾಡಲಾಗಿದೆ. 24,264 ಅರ್ಜಿ ತಿರಸ್ಕೃತಗೊಂಡಿದೆ.

ಮಂಜೂರಾಗಿರುವ 9,722 ಅರ್ಜಿಗಳಲ್ಲಿ 9,607 ಅರ್ಜಿದಾರರಿಗೆ ಹಕ್ಕುಪತ್ರವನ್ನು ವಿತರಿಸಲಾಗಿದೆ. 115 ಅರ್ಜಿದಾರರಿಗೆ ಹಕ್ಕು ಪತ್ರ ವಿತರಣೆ ಬಾಕಿಯಿದೆ ಹಾಗೂ 4,520 ಅರ್ಜಿ ವಿಲೇವಾರಿಗೆ ಬಾಕಿಯಿದೆ. 94ಸಿಸಿ ಅಡಿಯಲ್ಲಿ 9 ಸೆಂಟ್ಸ್‌ ವರೆಗೂ ಸಕ್ರಮಗೊಳಿಸಿ ಹಕ್ಕುಪತ್ರ ನೀಡಲು ಅವಕಾಶವಿದೆ.

ಕಾಲಂ 94ಸಿಸಿ ಅಡಿಯಲ್ಲಿ ನಗರ ಪ್ರದೇಶದಲ್ಲಿ ಸರಕಾರಿ ಭೂಮಿಯಲ್ಲಿ ವಾಸವಿದ್ದು ಸರಕಾರದ ನಿಯಮಾನುಸಾರವಾಗಿ ಸಕ್ರಮಕ್ಕಾಗಿ 11,045 ಮಂದಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 6,825 ಅರ್ಜಿ ತಿರಸ್ಕೃತಗೊಂಡಿದೆ. ಮಂಜೂರಾಗಿರುವ 3,003 ಅರ್ಜಿಯಲ್ಲಿ 2,903 ಅರ್ಜಿದಾರರಿಗೆ ಹಕ್ಕುಪತ್ರ ವಿತರಿಸಿದ್ದು, 100 ಮಂದಿ ಹಕ್ಕು ಪತ್ರ ವಿತರಣೆ ಬಾಕಿಯಿದೆ ಹಾಗೂ 1,217 ಅರ್ಜಿ ವಿಲೇವಾರಿಯಾಗದೇ ಉಳಿದಿದೆ.

94ಸಿಸಿ ಅಡಿಯಲ್ಲಿ 2.4 ಸೆಂಟ್ಸ್‌ ಹಾಗೂ 600 ಚದರ ಅಡಿ ಭೂಮಿ ಸಕ್ರಮಗೊಳಿಸಿ ಹಕ್ಕು ಪತ್ರ ವಿತರಿಸಲು ಅವಕಾಶವಿದೆ.

Advertisement

ಕೃಷಿಭೂಮಿ ಅರ್ಜಿ ಸಾಕಷ್ಟು ಬಾಕಿ
ಹಾಗೆಯೇ 94(ಎ) ನಮೂನೆ-50, 94(ಬಿ) ನಮೂನೆ-53 ಹಾಗೂ 94ಎ(4) ನಮೂನೆ 57ರ ಅಡಿಯಲ್ಲಿ 1,71,084 ಅರ್ಜಿ ಸಲ್ಲಿಕೆಯಾಗಿದ್ದು, 25,210 ಅರ್ಜಿ ಮಂಜೂರಾಗಿ, 74416 ಅರ್ಜಿ ತಿರಸ್ಕೃತಗೊಂಡಿದೆ. 71,458 ಅರ್ಜಿ ವಿಲೇವಾರಿಗೆ ಬಾಕಿಯಿದೆ. ಈ ಮೂರು ಅರ್ಜಿ ನಮೂನೆಗಳು 1987ರ ಹಿಂದೆ ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು, ಅನಂತರದಲ್ಲಿ ಅಕ್ರಮ ಸಕ್ರಮದಡಿ ಕೃಷಿ ಭೂಮಿ ಹಕ್ಕುಪತ್ರಕ್ಕೆ ಮನವಿ ಸಲ್ಲಿಸಿರುವುದು ಹಾಗೂ 2002/2005ರ ಹಿಂದೆ ಸರಕಾರಿ ಕೃಷಿ ಭೂಮಿಯಾಗಿದ್ದು ಅಕ್ರಮ ಸಕ್ರಮದಡಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವುದಾಗಿದೆ.

ತಿರಸ್ಕಾರಕ್ಕೆ ಕಾರಣ
ಸರಕಾರಿ ಭೂಮಿಯಲ್ಲಿ ನಿರ್ದಿಷ್ಟ ಕಾಲಮಿತಿಗೂ ಹೆಚ್ಚು ಅವಧಿಯಿಂದ ವಾಸವಾಗಿರುವವರು ಅಥವಾ ಕೃಷಿ ಮಾಡುತ್ತಾ ಬಂದಿರುವವರಿಗೆ ಜಮೀನಿನ ಹಕ್ಕು ಪತ್ರ ನೀಡಲು ಅಕ್ರಮ ಸಕ್ರಮ ಯೋಜನೆಯಡಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ಹಿಂದೆ ಸರಕಾರಿ ಕೃಷಿ ಭೂಮಿಯಾಗಿದ್ದು, ಈಗ ಕೃಷಿ ಮಾಡದೇ ಇದ್ದರೆ ಅಂತಹ ಸಂದರ್ಭದಲ್ಲಿ ಅರ್ಜಿ ಪುರಸ್ಕೃತಗೊಳ್ಳುವುದಿಲ್ಲ. ಹಾಗೆಯೇ ಡೀಮ್ಡ್ ಫಾರೆಸ್ಟ್‌ ಪ್ರದೇಶದಲ್ಲಿರುವ ಅರ್ಜಿಗಳು ಪುರಸ್ಕೃತಗೊಳ್ಳುವುದಿಲ್ಲ. ಸರಕಾರದಿಂದ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ಭೂಮಿ ಒತ್ತುವರಿ ಮಾಡಿಕೊಂಡಿದ್ದಲ್ಲಿ ಅಂತಹ ಜಮೀನು ಅಕ್ರಮ ಸಕ್ರಮದಡಿ ಹಕ್ಕುಪತ್ರ ಪಡೆಯಲು ಬರುವುದಿಲ್ಲ. ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್‌ ಸಮಸ್ಯೆಯಿಂದ ಬಹುಪಾಲು ಅರ್ಜಿ ತಿರಸ್ಕೃತಗೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next