Advertisement

Udupi: ಪರ್ಯಾಯೋತ್ಸವಕ್ಕೆ ಬರುವ ಅತಿಥಿಗಳಿಗೆ ಮನೆಗಳಲ್ಲಿ ಆತಿಥ್ಯ

10:46 AM Jan 04, 2024 | Team Udayavani |

ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ದೇಶ, ವಿದೇಶಗಳಿಂದ ಪರ್ಯಾಯೋತ್ಸವಕ್ಕೆ ಆಗಮಿಸುವ ಭಕ್ತರು ವಸತಿ ವ್ಯವಸ್ಥೆಗಾಗಿ ಶ್ರೀಮಠಕ್ಕೆ ದೂರವಾಣಿ ಮೂಲಕ ತಿಳಿಸುವುದು ನಡೆಯುತ್ತಿದೆ.

Advertisement

ವಸತಿ ವ್ಯವಸ್ಥೆಯ ದೃಷ್ಟಿಯಿಂದಲೇ ಪ್ರತ್ಯೇಕ ವಿಭಾಗವನ್ನು ಶ್ರೀ ಮಠದಲ್ಲಿ ತೆರೆಯಲಾಗಿದೆ. ಶ್ರೀ ಕೃಷ್ಣಮಠ ಪರಿಸರದ ವಸತಿ ಗೃಹ ಸೇರಿದಂತೆ ನಗರ ವ್ಯಾಪ್ತಿಯ ಪ್ರಮುಖ ವಸತಿ ಗೃಹಗಳನ್ನು ಈ ನಿಟ್ಟಿನಲ್ಲಿ ಸಂಪರ್ಕಿಸುವ ಜತೆಗೆ ಪರ್ಯಾಯದ ದಿನದಂದು ಅದರ ಆವಶ್ಯಕತೆ ಇರುವ ಬಗ್ಗೆಯೂ ಮಾಲಕರಿಗೆ ಈಗಾಗಲೇ ಮನದಟ್ಟು ಮಾಡಲಾಗಿದೆ.

ಅದಾಗ್ಯೂ ವಸತಿ ವ್ಯವಸ್ಥೆಗೆ ಅಗತ್ಯವಿರುವಷ್ಟು ವಸತಿ ಗೃಹಗಳು ನಗರ ವ್ಯಾಪ್ತಿಯಲ್ಲಿ ಸಿಗುವುದು ಕಷ್ಟ. ಸಾಗರೋಪಾದಿಯಲ್ಲಿ ಭಕ್ತರು ಪರ್ಯಾಯೋತ್ಸವಕ್ಕೆ ಬರುವ ನಿರೀಕ್ಷೆಯಿದೆ. ಇದರಲ್ಲಿ ಹೊರ ರಾಜ್ಯದ ಭಕ್ತರ ಸಂಖ್ಯೆಯೂ ಹೆಚ್ಚಿರಲಿದೆ. ಹೀಗಾಗಿ ಪರ್ಯಾಯಕ್ಕೆ ಬರುವ ಹೊರ ರಾಜ್ಯ ಅತಿಥಿಗಳಿಗೆ ನಗರದ ಮನೆಗಳಲ್ಲಿ ಆತಿಥ್ಯಕ್ಕೆ ಬೇಕಾದ ಸಿದ್ಧತೆ ಗಳನ್ನು ನಡೆಸಲಾಗುತ್ತಿದೆ.

ಅತಿಥಿಗಳಿಗೆ ಮನೆಯಲ್ಲಿ ಆತಿಥ್ಯ ನೀಡಲು ಇಚ್ಛಿಸುವವರು ಪುತ್ತಿಗೆ ಮಠವನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯೂ ಶುರುವಾಗಿದೆ. ಈಗಾಗಲೇ ನಗರದ 15ಕ್ಕೂ ಅಧಿಕ ಮಂದಿ ತಮ್ಮ ಮನೆಯಲ್ಲಿ ಅತಿಥಿಗಳಿಗೆ ಆತಿಥ್ಯ ನೀಡುವ ಬಗ್ಗೆ ಶ್ರೀಮಠಕ್ಕೆ ಮಾಹಿತಿ ನೀಡಿದ್ದಾರೆ ಎಂದು ವಸತಿ ವ್ಯವಸ್ಥೆಯನ್ನು ನೋಡಿಕೊಳ್ಳುವ ಸತೀಶ್‌ ಕುಮಾರ್‌ ಅವರು ತಿಳಿಸಿದರು.

ಶ್ರೀ ಮಠದಿಂದ ಸೂಕ್ತ ವಿವರ
ವಿದೇಶದಿಂದ ಬರುವ ಅತಿಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಉತ್ತರ
ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ, ದಿಲ್ಲಿ ಸಹಿತವಾಗಿ ದೇಶದ ವಿವಿಧ ರಾಜ್ಯಗಳಿಂದ ಬರುವ ಭಕ್ತರಿಗೆ ನಗರದ
ಮನೆಗಳಲ್ಲಿ ಆತಿಥ್ಯಕ್ಕೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಶ್ರೀಮಠದಿಂದ ಕರೆ ನೀಡಿದ್ದೇವೆ. ಕೆಲವರು ಬಂದು ಮಾಹಿತಿ
ನೀಡಿ ಹೋಗಿದ್ದಾರೆ. ಮನೆಗಳಲ್ಲಿ ಆತಿಥ್ಯ ಪಡೆಯುವ ಅತಿಥಿಗಳು ಹಾಗೂ ಆತಿಥ್ಯ ನೀಡಲಿರುವವರಿಗೂ ಶ್ರೀ ಮಠದಿಂದ
ಸೂಕ್ತ ವಿವರ ಕೊಡಲಿದ್ದೇವೆ.

Advertisement

ಈಗಾಗಲೇ ಅನೇಕರು ಬೇರೆ ಬೇರೆ ರಾಜ್ಯಗಳಿಂದ ಕರೆ ಮಾಡಿ ವಸತಿಗಾಗಿ ಮುಂಗಡ ಕಾದಿರಿಸಿಕೊಳ್ಳುತ್ತಿದ್ದಾರೆ. ಅಂತವರಿಗೆ ಮೊದಲ ಆದ್ಯತೆ ನೀಡುತ್ತೇವೆ. ಅನೇಕರು ಒಂದು ದಿನಕ್ಕೆ ಮಾತ್ರ ಕೇಳುತ್ತಿದ್ದಾರೆ. ಇನ್ನು ಕೆಲವರು ಎರಡು ಮೂರು ದಿನಗಳಿಗೆ ವಸತಿ ವ್ಯವಸ್ಥೆ ಕೇಳುತ್ತಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮನೆ ಮನೆ ಆತಿಥ್ಯಕ್ಕೆ ಆದ್ಯತೆ ಕೊಡುತ್ತಿದ್ದೇವೆ ಎಂದರು.

ಉತ್ಸವ ಅಥವಾ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಮನೆ ಮನೆಗಳಲ್ಲಿ ವಾಸ್ತವ್ಯ ನೀಡುವುದು ಉಡುಪಿಗೆ ಹೊಸತಲ್ಲ. ಈ ಹಿಂದೆ ವಿಶ್ವಹಿಂದೂ ಪರಿಷತ್‌ ವತಿಯಿಂದ 1969ರಲ್ಲಿ ಉಡುಪಿಯಲ್ಲಿ ನಡೆದ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗದಿಂದ ಬಂದಿರುವ ಗಣ್ಯರಿಗೆ ಹಾಗೂ ಪ್ರಮುಖರಿಗೆ ಮನೆ ಮನೆಗಳಲ್ಲಿ ಆತಿಥ್ಯ ನೀಡಲಾಗಿತ್ತು. ಆಗ ಮನೆ ಮನೆ ಆತಿಥ್ಯದ ಕರೆಗೆ ಅನೇಕರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರು. ಅದೇ ಮಾದರಿಯಲ್ಲಿ ಪುತ್ತಿಗೆ ಶ್ರೀಗಳ ಪರ್ಯಾಯಕ್ಕೆ ಬರುವ ಅತಿಥಿಗಳ ವಸತಿ ವ್ಯವಸ್ಥೆಗೆ ಮನೆ ಮನೆಗಳಲ್ಲಿ ಆತಿಥ್ಯಕ್ಕೆ ಕರೆ ನೀಡಲಾಗಿದೆ. ನಗರದ ನಿವಾಸಿಗಳಿಂದ ಖಂಡಿತವಾಗಿಯೂ ಉತ್ತಮ ಸ್ಪಂದನೆ ವ್ಯಕ್ತವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next