ಉಡುಪಿ: ದೇಶದಲ್ಲಿ ಏಕರೂಪ ತೆರಿಗೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಈ ತೆರಿಗೆ ಬಗ್ಗೆ ಅನೇಕರಲ್ಲಿ ಗೊಂದಲಗಳಿದ್ದು, ವಿಶೇಷವಾಗಿ ಗುತ್ತಿಗೆದಾರರು ಜಿಎಸ್‌ಟಿ ಕುರಿತು ಹೆಚ್ಚಿನ ಮಾಹಿತಿ ಹೊಂದುವುದು ಅವಶ್ಯ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಂ.ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಅಂಬಲಪಾಡಿ ಶ್ಯಾಮಿಲಿ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆದಾರರಿಗೆ ಶುಕ್ರವಾರ ಹಮ್ಮಿಕೊಳ್ಳಲಾದ ಜಿಎಸ್‌ಟಿ ಕುರಿತು ಮಾಹಿತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಲೆಕ್ಕಪರಿಶೋಧಕ ಕಿರಣ್ ಕುಮಾರ್ ಎಚ್. ಅವರು ಸರಕು ಮತ್ತು ಸೇವಾ ತೆರಿಗೆ ನೋಂದಣಿ ಮಾಡಿಸಿಕೊಳ್ಳುವ ಬಗ್ಗೆ, ಅದರಿಂದಾಗುವ ಅನುಕೂಲ, ತೆರಿಗೆ ಪಾವತಿ, ಹಿಂದಿದ್ದ ತೆರಿಗೆ ಮತ್ತು ತೆರಿಗೆ ರೂಪಕಗಳ ವ್ಯತ್ಯಾಸ, ಜಿಎಸ್‌ಟಿ ಸಮಗ್ರ ರೂಪದ ಬಗ್ಗೆ ಸೂಕ್ತ ಮಾಹಿತಿ ನೀಡಿದರು.
ಪ್ರಯೋಜನ
ಸಂಘದ ಪ್ರ. ಕಾರ್ಯದರ್ಶಿ ಅಣ್ಣಯ್ಯ ನಾಯಕ್ ಪಟ್ಲ ಅವರು ಮಾತನಾಡಿ, ದೇಶದ ಜನರ ಹಿತದೃಷ್ಟಿಯಿಂದ ಆರ್ಥಿಕತೆ ಅಭಿವೃದ್ಧಿಪಡಿಸುವ ನೆಲೆಯಲ್ಲಿ ದೇಶವ್ಯಾಪಿ ಏಕರೂಪ ತೆರಿಗೆ ವ್ಯವಸ್ಥೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದ್ದು, ಇದರಿಂದಾಗಿ ಅನೇಕರಿಗೆ ಪ್ರಯೋಜನವಾಗಿದೆ. ಇಂತಹ ಕಾರ್ಯಾಗಾರಗಳು ಗೊಂದಲಗಳ ಪರಿಹಾರಕ್ಕೆ ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಪಿಡಬ್ಲೂéಡಿ ಗುತ್ತಿಗೆದಾರರು, ಜಿ.ಪಂ. ಗುತ್ತಿಗೆದಾರರು, ನಗರಸಭೆ ಗುತ್ತಿಗೆದಾರರು, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಗುತ್ತಿಗೆದಾರರು, ಕೇಂದ್ರದಗುತ್ತಿಗೆದಾರರು, ವಿದ್ಯುತ್ ಗುತ್ತಿಗೆದಾರರು, ಸರಕಾರದ ಇನ್ನಿತರ ಇಲಾಖೆಗಳಲ್ಲಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಮೊದಲಾದವರು ಭಾಗವಹಿಸಿದ್ದರು.