Advertisement

Udupi; ಸರಕಾರಿ ಶಾಲೆಗಳಿಗೆ ಕ್ರೀಡಾ ಪರಿಕರವೂ ಬರುತ್ತಿಲ್ಲ

01:04 AM Mar 02, 2024 | Team Udayavani |

ಉಡುಪಿ: ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ವಾರಕ್ಕೆ ನಾಲ್ಕು ತರಗತಿ ದೈಹಿಕ ಶಿಕ್ಷಣ ತರಬೇತಿ (ಪಿಟಿ) ಸಂಬಂಧಿಸಿರುತ್ತದೆ ಮತ್ತು ಈ ವಿಷಯವಾಗಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಆದರೆ ಇದಕ್ಕೆ ಪೂರಕವಾಗಿ ಸರಕಾರಿ ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗೆ ಬೇಕಾದ ಪರಿಕರಗಳೇ ಸರಕಾರದಿಂದ ಬರುತ್ತಿಲ್ಲ.

Advertisement

ಸರಕಾರಿ ಶಾಲೆಗಳಲ್ಲಿ ಐದಾರು ವರ್ಷಗಳ ಹಿಂದೆ ಬಂದಿರುವ ಪರಿಕರಗಳನ್ನೇ ವಿದ್ಯಾರ್ಥಿಗಳು ಇಂದಿಗೂ ಬಳಸುತ್ತಿದ್ದಾರೆ. ಕ್ರೀಡಾ ಚಟುವಟಿಕೆಗಳಿಗೆ ಪೂಕವಾದ ಕ್ರಿಕೆಟ್‌ ಬ್ಯಾಟ್‌, ಬಾಲ್‌, ವಿಕೆಟ್‌, ವಾಲಿಬಾಲ್‌, ಥ್ರೋಬಾಲ್‌, ಫ‌ುಟ್‌ಬಾಲ್‌, ಶೆಟಲ್‌ ಬ್ಯಾಟ್‌, ರಿಂಗ್ಸ್‌, ನೆಟ್‌ಗಳು, ಕ್ಯಾರಂ ಬೋರ್ಡ್‌, ಚೆಸ್‌ ಬೋರ್ಡ್‌, ಡಂಬಲ್ಸ್‌, ರಿಲೇ ಸ್ಟಿಕ್‌, ಸ್ಕಿಪಿಂಗ್‌ ಸೆಟ್‌ ಹೀಗೆ ಯಾವುದೂ ಪೂರ್ಣ ಪ್ರಮಾಣದಲ್ಲಿ ಸರಕಾರಿ ಶಾಲೆಗಳಲ್ಲಿ ಇಲ್ಲ.

ಹೀಗಾಗಿ ವಿದ್ಯಾರ್ಥಿಗಳು ಪಿ.ಟಿ. ಅವಧಿಯಲ್ಲಿ ತಮಗೆ ಇಷ್ಟವಿರುವ ಆಟ/ ಚಟುವಟಿಕೆಯ ಬದಲಿಗೆ ಅನಿವಾರ್ಯವಾಗಿ ಕೆಲವೊಂದನ್ನು ಮಾತ್ರ ಮಾಡಬೇಕಾದ ಪರಿಸ್ಥಿತಿಯಿದೆ.

ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲ
ಅನೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಈ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕರಿದ್ದ ಶಾಲೆಗಳಲ್ಲಿ ಅವರು ನಿವೃತ್ತಿ/ ವರ್ಗಾವಣೆ ಅನಂತರದಲ್ಲಿ ಆ ಹುದ್ದೆಯೂ ಖಾಲಿ ಉಳಿದಿದೆ. ಸರಕಾರವೂ ಹೊಸದಾಗಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯನ್ನು ಮಾಡಿಲ್ಲ. ಪ್ರೌಢಶಾಲೆಗಳಿಗಾದರೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದ ಇದ್ದರೂ ನೇಮಕಾತಿ ಪ್ರಕ್ರಿಯೆ ಮಾತ್ರ ನಡೆದಿಲ್ಲ.

ದಾನಿಗಳ ಮೊರೆ
ಬಹುತೇಕ ಸರಕಾರಿ ಶಾಲೆಗಳು ಎಸ್‌ಡಿಎಂಸಿ ಹಾಗೂ ಹಳೇ ವಿದ್ಯಾರ್ಥಿ ಸಂಘಗಳ ಮೂಲಕ ದಾನಿಗಳನ್ನು ಸಂಪರ್ಕಿಸಿ ಅವರಿಂದ ಶಾಲೆಗೆ ಬೇಕಾದ ವಿವಿಧ ಸೌಲಭ್ಯಗಳ ಜತೆಗೆ ಕ್ರೀಡಾ ಪರಿಕರಗಳನ್ನು ವ್ಯವಸ್ಥೆ ಮಾಡಿಕೊಳ್ಳುತ್ತಿವೆ. ಸಂಸ್ಥೆಗಳ ಸಿಎಸ್‌ಆರ್‌ ನಿಧಿ, ಸ್ಥಳೀಯ ದಾನಿಗಳ ಮೂಲಕ ಕ್ರೀಡಾ ಪರಿಕರಕ್ಕೆ ಅನುದಾನ ವ್ಯವಸ್ಥೆ ಮಾಡಿಕೊಳ್ಳುವುದು ಎಲ್ಲ ಶಾಲೆಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರಕಾರವೇ ನಿರ್ದಿಷ್ಟ ಅನುದಾನ ಇದಕ್ಕಾಗಿ ಒದಗಿಸಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ.

Advertisement

ಕ್ರೀಡಾ ಚಟುವಟಿಕೆ ಕಡಿಮೆ
ಇತ್ತೀಚೆಗೆ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆ ತೀರ ಕಡಿಮೆಯಾಗುತ್ತಿದೆ. ರಾಜ್ಯ ಅಥವಾ ಜಿಲ್ಲೆಯಿಂದ ಬರುವ ಸೂಚನೆಯ ಅನುಸಾರವಾಗಿ ಪ್ರತಿಭಾ ಕಾರಂಜಿಗೆ ಮಕ್ಕಳನ್ನು ಸಜ್ಜುಗೊಳಿಸಲು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಒತ್ತು ನೀಡಲಾಗುತ್ತದೆ. ಭಾಷಣ, ಛದ್ಮವೇಷ, ಗಾಯನ ಇತ್ಯಾದಿ ಸ್ಪರ್ಧೆಗಳಿಗೆ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಕ್ರೀಡಾ ಚಟುವಟಿಕೆಗಳು ಕೇವಲ ಶಾಲೆಯ ವಾರ್ಷಿಕೋತ್ಸವಕ್ಕೆ ಸೀಮಿತವಾಗಿ ನಡೆಯುವಂತಿದೆ.

ಯೋಗವೂ ಇಲ್ಲ
ಶಾಲೆಗಳಲ್ಲಿ ಯೋಗ ತರಗತಿಗಳನ್ನು ನಡೆಸಬೇಕು. ನಿತ್ಯದ ಪ್ರಾರ್ಥನೆಯ ಅನಂತರದಲ್ಲಿ ಸ್ವಲ್ಪ ಸಮಯ ಧ್ಯಾನಕ್ಕೂ ಅವಕಾಶ ನೀಡಬೇಕು ಎಂಬ ಆಗ್ರಹ ಇತ್ತಾದರೂ ಈವರೆಗೂ ಯೋಗ ತರಗತಿ ಎಲ್ಲಿಯೂ ನಿರಂತರವಾಗಿ ನಡೆಯುತ್ತಿಲ್ಲ. ದೈಹಿಕ ಶಿಕ್ಷಣ ಶಿಕ್ಷಕರು ಇರುವ ಕಡೆಗಳಲ್ಲೂ ನಡೆಯುತ್ತಿಲ್ಲ. ಕೆಲವು ಸಂಸ್ಥೆಗಳು ರಜಾ ದಿನಗಳಲ್ಲಿ ಯೋಗ ತರಗತಿ ನಡೆಸುತ್ತಿರುವುದು ಕಂಡು ಬರುತ್ತಿದೆ.

ಸರಕಾರಿ ಶಾಲೆಗಳಿಗೆ ಕ್ರೀಡಾ ಪರಿಕರ ಖರೀದಿಗೆ ಈ ವರ್ಷ ಯಾವುದೇ ಅನುದಾನ ಹಂಚಿಕೆಯಾಗಿಲ್ಲ. ಕರ್ನಾಟಕ ಪಬ್ಲಿಕ್‌ ಶಾಲೆ ಹಾಗೂ ಪಿಎಂ ಶ್ರೀ ಶಾಲೆಗಳಿಗೆ ಅನುದಾನ ನೀಡಿದ್ದೇವೆ. ವಾರದಲ್ಲಿ ನಾಲ್ಕು ಪಿ.ಟಿ. ತರಗತಿ ಎಲ್ಲ ವಿದ್ಯಾರ್ಥಿಗಳು ಇದೆ ಮತ್ತು ಇತರ ಆಧಾರಲ್ಲಿ ಪರೀಕ್ಷೆಯನ್ನು ನಡೆಸುತ್ತೇವೆ. ಶಾಲೆಯ ಇತರೆ ಅನುದಾನದಲ್ಲಿ ಕ್ರೀಡಾ ಪರಿಕರ ಖರೀದಿಗೆ ಅವಕಾಶವಿದೆ.
– ಕೆ.ಗಣಪತಿ, ಡಿಡಿಪಿಐ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next