Advertisement

ಉಡುಪಿ ಶ್ರೀಕೃಷ್ಣನ ಗರ್ಭಗುಡಿಗೆ ಚಿನ್ನದ ಗೋಪುರ: ಪಲಿಮಾರು ಶ್ರೀ 

12:37 PM Dec 29, 2017 | Team Udayavani |

ಮಂಗಳೂರು: ಉಡುಪಿ ಶ್ರೀಕೃಷ್ಣನ ಪೂಜಾ ಪರ್ಯಾಯದ ಕಾಲದಲ್ಲಿ ಶ್ರೀ ಕೃಷ್ಣನ ಗರ್ಭಗುಡಿಗೆ ಸುಮಾರು 32 ಕೋ.ರೂ. ವೆಚ್ಚದಲ್ಲಿ ಚಿನ್ನದ ಗೋಪುರ ವನ್ನು ನಿರ್ಮಿಸುವ ಸಂಕಲ್ಪ ಮಾಡಲಾಗಿದೆ ಎಂದು ಭಾವೀ ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Advertisement

ಮಂಗಳೂರು ಕದ್ರಿ ಮಲ್ಲಿಕಾ ಬಡಾವಣೆಯಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಅವರ ನಿವಾಸದಲ್ಲಿ ತುಲಾಭಾರ ಸೇವೆ ಸ್ವೀಕರಿಸಿದ ಬಳಿಕ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರಾವಳಿ ಶೈಲಿಯಲ್ಲಿರುವ ಶ್ರೀಕೃಷ್ಣನ ಗರ್ಭಗುಡಿಗೆ ತಿರುಪತಿ ವೆಂಕಟೇಶನ ಗರ್ಭಗೋಪುರದ ಪ್ರತಿಬಿಂಬ ವನ್ನು ಮೂಡಿಸುವ ಇಚ್ಛೆಯಿದೆ. ಇದಕ್ಕಾಗಿ ಪ್ರತೀ ಚದರ ಅಡಿಗೆ 40 ಗ್ರಾಂ ಚಿನ್ನದ ಅಗತ್ಯವಿದ್ದು, 2,500 ಚದರ ಅಡಿಗೆ 100 ಕೆಜಿ ಚಿನ್ನದ ಅಗತ್ಯವಿದೆ ಎಂದರು.

ತುಳಸೀ ಧಾಮ
ಹಸಿರಿನ ಬಗ್ಗೆ ಹಾಗೂ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಶ್ರೀಕೃಷ್ಣನಿಗೆ ಪರ್ಯಾಯ ಕಾಲದಲ್ಲಿ ಪ್ರತಿನಿತ್ಯ ಲಕ್ಷ  ತುಳಸಿ ಅರ್ಚನೆ ಮಾಡುವ ಯೋಜನೆ ಹೊಂದಿದ್ದು, ಇದಕ್ಕಾಗಿ ತುಳಸಿಯನ್ನು ಬೆಳೆಸಲು ಭಕ್ತರಿಗೆ ಮನವಿ ಸಲ್ಲಿಸಲಾಗಿದೆ. ತುಳಸಿಯನ್ನು ವಿಪುಲವಾಗಿ ಬೆಳೆಸುವುದರಿಂದ ವಾತಾವರಣ ಶುದ್ಧಗೊಳ್ಳುತ್ತದೆ. ಹಸಿರಿನ ಬಗ್ಗೆ ಜಾಗೃತಿಯೂ ಹುಟ್ಟುತ್ತವೆ. ಹೀಗಾಗಿ ತುಳಸಿ ಗಿಡ ಬೆಳೆಯುವಂತೆ ನಾವು ಮನವಿ ಸಲ್ಲಿಸುತ್ತಿದ್ದೇವೆ. ಜತೆಗೆ ಪೆರಂಪಳ್ಳಿಯಲ್ಲಿ 10 ಎಕ್ರೆ ಜಾಗದಲ್ಲಿ ತುಳಸಿ ಧಾಮ ನಿರ್ಮಿಸಲು ನಮಗೆ ಅವಕಾಶ ದೊರೆತಿದೆ. ಈ ಮೂಲಕ ಪ್ರತೀ ದಿನ ಲಕ್ಷ ತುಳಸೀ ಅರ್ಚನೆಯನ್ನು ಮಾಡಲು ಉಡುಪಿ ಮಠದಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದರು.

ಅಖಂಡ ನಾಮ ಸಂಕೀರ್ತನೆ
ಪ್ರತೀ ದಿನ ಶ್ರೀ ಉಡುಪಿ ಮಠದ ದೇವರ ಮುಂಭಾಗ  ತಾಳತಟ್ಟಿ ಅಖಂಡ ನಾಮ ಸಂಕೀರ್ತನೆಗೆ ಉದ್ದೇಶಿಸಲಾಗಿದೆ. ದಿನಕ್ಕೆ 6 ಭಜನ ಮಂಡಳಿಯಂತೆ 2 ವರ್ಷಈ ಸೇವೆ ನಡೆಯಲಿದೆ. ಇದರಲ್ಲಿ ಬೇರೆ ಬೇರೆ ನಾಮ ಸಂಕೀರ್ತನೆ ತಂಡ, ಭಜನ ತಂಡಗಳು ಭಾಗವಹಿಸಲಿವೆ. ಇದರಿಂದಾಗಿ ದೇವಸ್ಥಾನದ ಪಾವಿತ್ರ್ಯ ವೃದ್ಧಿ ಹಾಗೂ ಸಮಾಜದಲ್ಲಿ ಜಾಗೃತಿ ಉಂಟಾಗಲು ಸಾಧ್ಯ ಎಂದರು.

ತುಳು ಲಿಪಿಯಲ್ಲಿ ಲಭ್ಯವಿರುವ ಮಹಾಭಾರತದ ಕೃತಿಯನ್ನು ಪ್ರಥಮ ಬಾರಿಗೆ ಶ್ಲೋಕಾರ್ಥವನ್ನು ಪ್ರತ್ಯೇಕವಾಗಿ ದೇವನಾಗರಿ ಲಿಪಿಗೆ ಪರಿವರ್ತಿಸಿ ಕನ್ನಡಭಾಷೆಗೆ ತರ್ಜುಮೆ ಮಾಡಿಸುವ ಯೋಜನೆಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಮಹಾಭಾರತದ 18 ಪರ್ವಗಳು 40 ಸಂಪುಟಗಳಲ್ಲಿ ಮುಂದಿನ ಪರ್ಯಾಯ ಅವಧಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಜತೆಗೆ ಮಠದ ಶಾಖೆಗಳಲ್ಲಿ ಅವಕಾಶಗಳಿರುವಲ್ಲಿ ಗೋಶಾಲೆಗಳನ್ನು ನಿರ್ಮಿಸಿ ದೇಶೀಯ ಗೋಸಂತತಿ ರಕ್ಷಣೆ ಹಾಗೂ ಪ್ರಗತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಸೇರಿ ದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದರು.

Advertisement

ಸಾವಿರ ಕೋಟಿ ಶ್ರೀ ರಾಮ ನಾಮ ಯಜ್ಞ
ಏಕಾಗ್ರತೆಯ ಸಾಧನೆಗಾಗಿ ಸಾವಿರ ಕೋಟಿ ಶ್ರೀರಾಮ ನಾಮ ಲೇಖನ ಯಜ್ಞವನ್ನು ಆಯೋಜಿಸಲಾಗಿದೆ. ಇದರಲ್ಲಿ ಸಮಸ್ತ ಆಸ್ತಿಕ ಜನರೂ ಭಾಗವಹಿಸಬಹುದು. 1 ಪುಸ್ತಕದಲ್ಲಿ 10,000ದಷ್ಟು ಶ್ರೀ ರಾಮ ನಾಮ ಬರೆಯಲು ಅವಕಾಶವಿದೆ. ಸಾವಿರ ಕೋಟಿಯಾದ ಮೇಲೆ ಈ ಪುಸ್ತಕವನ್ನು ಹರಿದ್ವಾರದ ಗಂಗಾತೀರದ ಬಡೇಹನುಮಾನ್‌ ದೇವಸ್ಥಾನದಲ್ಲಿ ಪೂಜೆಗೆ ಇಡಲಾಗುವುದು ಎಂದು ಪಲಿಮಾರು ಶ್ರೀಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next