ರಾಜ್ಯಾಡಳಿತ ದುರ್ಯೋಧನನ ಕೈಯಲ್ಲಿತ್ತು. ಆತನೇ ಯುದ್ಧವನ್ನು ಪ್ರಚೋದಿಸುವುದು ಅಗತ್ಯವಿರಲಿಲ್ಲ. “ನಾನು ರಾಜ್ಯವನ್ನು ಕೊಡುವುದಿಲ್ಲ. ನೀವು ಬೇಕಾದರೆ ತೆಗೆದುಕೊಳ್ಳಿ’ ಎಂದು ಕುಳಿತಿದ್ದರೆ ಪಾಂಡವರೇ ಮೊದಲು ಯುದ್ಧ ಮಾಡಬೇಕಿತ್ತು. ಈಗ ದುರ್ಯೋಧನನೇ ಯುದ್ಧವನ್ನು ಮೊದಲು ಆರಂಭಿಸಿದ್ದು. ಈ ಆಯಾಮದಲ್ಲಿ ದುರ್ಯೋಧನನೊಬ್ಬ “ಪೆದ್ದ’. ಅಪರಾಧ ಪ್ರಕರಣಗಳಲ್ಲಿ ಪ್ರಥಮ ಕ್ರಿಯೆ ಮಹಾಪರಾಧವೇ ಹೊರತು ಪ್ರತಿಕ್ರಿಯೆ ಮಹಾಪರಾಧವಲ್ಲ. “ಅಣುಬಾಂಬನ್ನು ನಾವಾಗಿ ಮೊದಲು ಪ್ರಯೋಗಿಸುವುದಿಲ್ಲ’ ಎಂಬುದು ಭಾರತದ ನೀತಿ.
ಬೇರೆಯವರು ಬಾಂಬು ಹಾಕಿದ ಬಳಿಕ ನಾವು ಹಾಕಿದರೆ ತಪ್ಪಿಲ್ಲ. ಕೌರವರ ಕಡೆಯಿಂದ ಮೊದಲು ಶಂಖನಾದ ಮಾಡಿದ ಬಳಿಕ ಪಾಂಡವರ ಕಡೆಯಿಂದ ಕೃಷ್ಣಾರ್ಜುನರು ಜತೆಯಾಗಿ ಶಂಖನಾದ ಮಾಡಿದರು.
“ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಥಿತೌ| ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ|| (ಗೀತೆ 1-14). ಇಲ್ಲಿ ಮಾಧವ ಪಾಂಡವಶ್ಚೈವ ಎಂದು ಉಲ್ಲೇಖಿಸಿದ್ದಾರೆ. ಇದೇಕೆ? ಶಂಖಾಭಿಮಾನಿ ದೇವತೆ ಲಕ್ಷ್ಮೀ ದೇವಿ. ಹೀಗಾಗಿ ಲಕ್ಷ್ಮೀಪತಿ ಜ್ಞಾಪಕವಾಗಿ ಮಾಧವ ಎಂದು ಹೇಳಿದ್ದಾರೆ. ಇವರಿಬ್ಬರು ಪಾಂಡವರ ಕಡೆಯ ವಕ್ತಾರರು. ಹೀಗಾಗಿ ಇವರಿಬ್ಬರಿಂದ ಶಂಖ ಮೊಳಗಿತು. ಈ ಎಲ್ಲ ಹಿನ್ನೆಲೆಗಳನ್ನು ಅಧ್ಯಯನ ನಡೆಸಿದರೆ ಪಾಂಡವರಲ್ಲಿ ಏಕಾಭಿಪ್ರಾಯವಿರುವುದೂ, ಕೌರವರಲ್ಲಿ ಏಕಾಭಿಪ್ರಾಯವಿಲ್ಲದಿರುವುದೂ ಕಂಡುಬರುತ್ತದೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811