ದೇಹದ ಅಭಿಮಾನ ಪ್ರಯುಕ್ತ ದೇಹಕ್ಕೆ “ಅಹಂ ಮನುಷ್ಯಃ’ ಎಂಬ ಜ್ಞಾನ ಬಂದಿದೆ. ನಿಜವಾಗಿ ನೋಡಿದರೆ ನಾವು ಮನುಷ್ಯರೇ ಆಗಬೇಕಾಗಿಲ್ಲ. ಮನುಷ್ಯ ಶರೀರದಲ್ಲಿ ಕಾಗೆಯೂ, ನಾಯಿಯೂ, ಯಾವುದೇ ವೃಕ್ಷದ ಜೀವ ಇರಬಹುದು. ವೃಕ್ಷ ಜೀವಕ್ಕೆ ನಾನು ಮನುಷ್ಯ ಎಂದು ಭಾವನೆ ಬಂದರೆ ಭ್ರಮೆಯಾಗುತ್ತದೆ. ದೇಹದಲ್ಲಿರುವ ಮನುಷ್ಯತ್ವವನ್ನು ತನ್ನಲ್ಲಿದೆ ಎಂದು ಅದು ತಿಳಿದುಕೊಳ್ಳುತ್ತಿದೆ. ಮನಸ್ಸನ್ನೂ ನಾವು ಎಂದು ತಿಳಿಯುತ್ತೇವೆ. ಜ್ಞಾನ ಎನ್ನುವುದು ದೇಹದಲ್ಲಿಯೂ ಇರುವುದಲ್ಲ, ಮನಸ್ಸಿನಲ್ಲಿರುವುದೂ ಅಲ್ಲ, ಆತ್ಮನಲ್ಲಿಯೇ ಇರುವುದು. ಆತ್ಮನಿಗೆ ಮನುಷ್ಯತ್ವ ಎಂಬುದಿಲ್ಲ. “ನಾನು ಮನುಷ್ಯ’ ಎಂಬ ಭಾವನೆಗೆ ಆಶ್ರಯ ದೇಹವಲ್ಲ, ಆತ್ಮನೇ ಆಗಿದ್ದಾನೆ. ದೇಹದ ಅಭಿಮಾನ ಪ್ರಯುಕ್ತ ಆತ್ಮನಲ್ಲಿ ಮನುಷ್ಯ ಎಂಬ ಭಾವವಿದೆ. ಮನಸ್ಸಿನಲ್ಲಿರುವ ಎಲ್ಲ ಧರ್ಮವನ್ನು ತನ್ನಲ್ಲಿ ತಿಳಿದುಕೊಳ್ಳಲು ಅಭಿಮಾನವೇ ಕಾರಣ. ಮನಸ್ಸಿಗೆ ಬೇಸರವಾದರೆ “ನನಗೆ ಬೇಸರವಾಗಿದೆ’ ಎನ್ನುತ್ತೇವೆ. ಮನಸ್ಸಿಗೆ ಬೇಸರವಾದರೆ ದುಃಖ ಆಗುವುದು ನನಗೆ ಎಂದು ತಿಳಿದುಕೊಳ್ಳುತ್ತೇವೆ. “ಮನಸ್ಸು ನನ್ನದು’ ಎಂದು ತಿಳಿದಿರುವುದು (ಅಭಿಮಾನ) ಇದಕ್ಕೆ ಕಾರಣ. ಭೌತಿಕ ದುಃಖ, ಆತ್ಮಿಕ ದುಃಖ ಎಂಬೆರಡು ವಿಧಗಳಿವೆ. ಮನಸ್ಸಿನಲ್ಲಿ ತಾದಾತ್ಮé ಇರುವುದರಿಂದ “ನನ್ನ ದುಃಖ’ ಎನ್ನುತ್ತೇವೆ. “ನನ್ನ ಮನಸ್ಸಿಗೆ ಬೇಸರವಾಯಿತು’ ಎಂದಾಗ ನನಗೇನೂ ಬೇಸರವಾಗಲಿಲ್ಲ, ಮನಸ್ಸಿಗೆ ಬೇಸರವಾಯಿತು ಎಂದರ್ಥವಲ್ಲವೆ?
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811