ಅರ್ಜುನನ ಅಹಂಕಾರ ನಿಜವಾದದ್ದು ಅಲ್ಲ. ಏಕೆಂದರೆ ಮುಂದೆ ಆತ ಶರಣಾಗುತ್ತಾನೆ. ಸ್ವಭಾವತಃ ಅಹಂಕಾರಿಯಾಗಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಆದರೆ ಈಗಿನ ಅಹಂಕಾರ ಏತರದು? ಅದು ಅಸುರಾವೇಶದ ಅಹಂಕಾರ. ಪರಿಸ್ಥಿತಿಗೆ ಅನುಗುಣವಾಗಿ ಬರುವ ಅಹಂಕಾರ = ಆವೇಶದ ಆಹಂಕಾರ. ಇಲ್ಲಿ ಕೌಂತೇಯ ಎಂದು ಅರ್ಜುನನಿಗೆ ಹೇಳುವುದಿದೆ. ಪ್ರತಿ ಸಂದರ್ಭ ಇಂತಹ ಶಬ್ದಗಳನ್ನು ಬಳಸುವಾಗ ಸನ್ನಿವೇಶಕ್ಕೆ ತಕ್ಕುದಾಗಿ ಹೇಳುತ್ತಾರೆ. ಕುಂತಿಯ ಕೃಪೆ ಬಹಳ ಮುಖ್ಯ. ಆಕೆಗೆ ಮೂರು ಮಕ್ಕಳಾಯಿತು. ಇನ್ನೂ ಎರಡು ಮಂತ್ರಗಳಿದ್ದವು. ಆಗ ಮಾದ್ರಿ ತನಗೂ ಮಕ್ಕಳಾಗಬೇಕೆಂದುಕೊಳ್ಳುತ್ತಾಳೆ.
ಸವತಿ ಮಾತ್ಸರ್ಯವನ್ನು ಲೋಕದಲ್ಲಿ ನಾವು ನೋಡುತ್ತೇವೆ. ಆದರೆ ಕುಂತಿ ಅದಕ್ಕೆ ಹೊರತಾಗಿ ಕಾಣುತ್ತಾಳೆ. ಮಾದ್ರಿ ಮಕ್ಕಳಿಲ್ಲದೆ ಇರಬಾರದು, ಕೊರಗಬಾರದು ಎಂದು ಮಕ್ಕಳಾಗುವಂತೆ ಮಂತ್ರವನ್ನು ಕೊಡುತ್ತಾಳೆ. ಕುಂತಿಯ ಔದಾರ್ಯದ ಹಿನ್ನೆಲೆಯಲ್ಲಿ ಅರ್ಜುನನನ್ನು ಕೌಂತೇಯ ಎಂದು ಕರೆಯುತ್ತಾರೆ.
ಅರ್ಜುನ ಮೋಹದ ಕಾರಣ ತನ್ನ ಬಂಧುಗಳನ್ನು ಕಂಡು ಅವರನ್ನೆಲ್ಲ ಕೊಲ್ಲಬೇಕಲ್ಲ ಎಂದು ಹೆದರಿಕೆಯಿಂದ ಬೆವರುತ್ತಾನೆ, “ಗಾಂಢೀವ ಕೈಜಾರುತ್ತಿದೆ’ ಎಂದು ನಡುಗುತ್ತಾನೆ. ತುಟಿಗಳು ತೊದಲುವುದು, ಬೆವರುವುದು ಇವೆಲ್ಲ ಭಯದ ಸೂಚಕಗಳು= ಇಂಡಿಕೇಟರ್. ರೋಮಾಂಚನವಾಗುವುದು ಕೇವಲ ಆಶ್ಚರ್ಯದಿಂದಲೇ ಆಗಬೇಕೆಂದಿಲ್ಲ. ಭಯದಿಂದಲೂ ಆಗುತ್ತದೆ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811