ಸುಖ, ದುಃಖಗಳಲ್ಲಿಯೂ ಜಡ ಮತ್ತು ಚೇತನ ಎಂಬೆರಡು ವಿಧಗಳಿವೆ. ಊಟ ಮಾಡುವಾಗ ಸುಖವಾಗುತ್ತದೆ. ಅದು ಜಡದಿಂದ ಉಂಟಾದ ಸುಖ. ಅನುಭವ ಆಗುವುದು ಚೇತನಕ್ಕೆ. ಜಡಭೂತ ಸುಖವು ಅಭಿಮಾನದಿಂದಾಗಿ ಆತ್ಮನಿಗೆ ಆಗುತ್ತದೆ. ಮನಸ್ಸಿನಲ್ಲಿಯೂ ಸುಖ ದುಃಖಗಳು ಜಡಾತ್ಮಕವಾಗಿದೆ. ಆದರೆ ಅಭಿಮಾನಪ್ರಯುಕ್ತ ಆತ್ಮನಿಗೆ ಆಗುತ್ತದೆ. ನಿದ್ದೆ ಮಾಡಿ ಎದ್ದಾಗ “ಫ್ರೆಶ್ ಆಗಿದ್ದೇವೆ’ ಎನ್ನುವುದಿದೆ. ಫ್ರೆಶ್ ಆದದ್ದು ಮನಸ್ಸಿಗೆ, ಸುಖವಾಗುವುದು ಆತ್ಮನಿಗೆ. ಫ್ರೆಶ್ ಎನ್ನುವುದು ಜಡಭೂತ. ಅನುಭವಿಸುವುದು ಆತ್ಮ. “ನನ್ನ ಮನಸ್ಸು’ ಎಂದು ತಿಳಿಯುವುದು ಇದಕ್ಕೆ ಕಾರಣ. ನಮ್ಮ ಮಕ್ಕಳಿಗೆ ಬಹುಮಾನ ಬಂದರೆ ಖುಷಿಯಾಗುತ್ತದೆ. ಉಳಿದ ಮಕ್ಕಳಿಗೆ ಬಹುಮಾನ ಬಂದರೆ ಹಾಗೆನಿಸುವುದಿಲ್ಲ. ಬಹುಮಾನದಿಂದ ಖುಷಿಯಾದದ್ದಲ್ಲ, “ಈ ಮಕ್ಕಳು ನನ್ನವರು’ ಎಂಬ ಅಭಿಮಾನವೇ ಕಾರಣ.
ಬಹುಮಾನದಿಂದಲೇ ಖುಷಿಯಾಗುವುದಾದರೆ ಎಲ್ಲ ಮಕ್ಕಳಿಗೆ ಬಹುಮಾನ ಬಂದರೂ ಖುಷಿಯಾಗಬೇಕಿತ್ತು. ಸುಖವಾಗಲೀ ದುಃಖವಾಗಲೀ ಕಾರಣ ಅಭಿಮಾನವೇ. ಹಾಗೆಯೇ ದೇಹದಲ್ಲಿರುವ ಚೇತನಕ್ಕೆ ಸುಖದುಃಖವಾಗಲು ಕಾರಣ ನನ್ನ ದೇಹ ಎಂಬ ಅಭಿಮಾನ. ನನ್ನ ದೇಹ ಎಂಬ ಅಭಿಮಾನ ಬಿಟ್ಟರೆ ದುಃಖ ಆಗದು. ಸುಖಕ್ಕೂ ಅದುವೇ ಕಾರಣ. ಇದು ಭೌತಿಕ ಸುಖಕ್ಕೆ ಮಾತ್ರ, ಆತ್ಮಿಕ ಸುಖಕ್ಕೆ ಅಲ್ಲ. ದೇಹಾಭಿಮಾನ, ಮನಸ್ಸಿನ ಅಭಿಮಾನ, ನಾನು ಎಂಬುದನ್ನು ಬಿಟ್ಟು ಬಿಡು ಎಂದು ಶ್ರೀಕೃಷ್ಣ ಹೇಳುತ್ತಾನೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811