ವೇದಗಳನ್ನು ಅರಿಯದವರಿಗೂ ವೇದಜ್ಞಾನವನ್ನು ಮಹಾಭಾರತದಲ್ಲಿ ಸಿಗುವಂತೆ ಮಾಡಿದ್ದು, ಎಲ್ಲರೂ ಭಗವಂತನ ಪದತಲದ ಸೇವೆಯನ್ನು ಸಲ್ಲಿಸಬಹುದಾದ ಮಾರ್ಗವನ್ನು ತೋರಿಸಿದ್ದು ವೇದವ್ಯಾಸರು ಮಾಡಿದ ಬಹುದೊಡ್ಡ ಲೋಕೋಪಕಾರಕತ್ವ. ದೇವತೆಗಳು ಪ್ರಾರ್ಥಿಸುವಾಗ ಮನುಷ್ಯರ ಉದ್ಧಾರಕ್ಕಾಗಿ ಎಂಬ ಬೇಡಿಕೆ ಸಲ್ಲಿಸಿದ್ದರೂ ಸರ್ವಪ್ರಾಣಿಗಳಿಗೂ ಒಳಿತಾಗುವ ಗುರಿ ಅವತಾರದ ಮೂಲದಲ್ಲಿದೆ. ಕೆಲವು ಪ್ರಾಣಿಗಳು ಸ್ವಭಾವತಃ ಪ್ರಾಣಿಗಳಲ್ಲ.
ಉದಾಹರಣೆ ಹೇಳುವುದಾದರೆ ಜಡಭರತರು ಜಿಂಕೆಯಾದದ್ದು. ಇದು ಭಗವಂತನಿಗೆ ಸರ್ವಜೀವಿಗಳ ಮೇಲಿರುವ ವಾತ್ಸಲ್ಯವನ್ನು ತೋರಿಸುತ್ತದೆ. 84 ಲಕ್ಷ ಜೀವರಾಶಿಗಳಲ್ಲಿ ಕೊನೆಯ ಸ್ತರದ ಜೀವ “ತೃಣ’ದ್ದು. ಅದಕ್ಕಾಗಿಯೇ “ತೃಣಸಮಾನ’ ಎಂಬ ಮಾತು ಬಂದದ್ದು. ಕೇವಲ ಇಷ್ಟೇ ಅಲ್ಲ ಭಗವದವತಾರದಲ್ಲಿ ಬ್ರಹ್ಮರುದ್ರಾದಿ ದೇವತೆಗಳ ಲಕ್ಷ್ಯವೂ ಇದೆ. ಕೇವಲ ಮನುಷ್ಯರ ಮಟ್ಟಿಗಾಗಿದ್ದರೆ ಬ್ರಹ್ಮದೇವರು ಅವತಾರವೆತ್ತಿದ್ದರೆ ಸಾಕಿತ್ತು.
ಬ್ರಹ್ಮನಿಗೂ ಅಗತ್ಯವಾದ್ದರಿಂದ ಭಗವಂತನೇ ಬರಬೇಕಾಗಿತ್ತು. ಈ ಅಂಶ “ನಾರಾಯಣಾಷ್ಟಾಕ್ಷರಕಲ್ಪ’ದಲ್ಲಿದೆ ಎಂಬ ಪ್ರಮಾಣವನ್ನು ಶ್ರೀಮದಾಚಾರ್ಯರು ತೋರಿಸಿದ್ದಾರೆ. ಜೀವರಾಶಿಗಳಲ್ಲಿ ಕೊನೆಯದಾದ “ತೃಣ’ದಿಂದ ತೊಡಗಿ, ಹಿರಿಯನಾದ ಬ್ರಹ್ಮನ ವರೆಗೆ ಗಮನವಿರಿಸಿಕೊಂಡು ವೇದವ್ಯಾಸರ ಅವತಾರವಾಯಿತು. ಯತಿಗಳಾಗಲೀ, ಗೃಹಸ್ಥರಾಗಲೀ ಅಗಲಿದವರಿಗೆ ತರ್ಪಣ ಕೊಡುವಾಗ “ಆಬ್ರಹ್ಮಸ್ತಂಬಪರ್ಯಂತಂ ದೇವರ್ಷಿಪಿತೃಮಾನವಾಃ|’ ಎಂದು ಹೇಳುವುದಿದೆ. ತೃಣದಿಂದ ತೊಡಗಿ ಬ್ರಹ್ಮನವರೆಗೆ ಸಕಲ ಜೀವಿಗಳಿಗೆ ತೃಪ್ತಿಯಾಗುವಂತೆ ಹಾರೈಸುವ ಉದಾತ್ತ ಚಿಂತನೆಯ ಮಂತ್ರವಿದು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811