ಧರ್ಮ, ಸೌಂದರ್ಯ, ಮಡಿ ಇತ್ಯಾದಿಗಳನ್ನು ಒಂದು ಚೌಕಟ್ಟಿನಲ್ಲಿ ನಿರ್ದೇಶಿಸಲಾಗದು. ಒಬ್ಬ ಕಳ್ಳ ಕಳ್ಳತನ ಮಾಡಲು ಬಂದು ಒಬ್ಬನನ್ನು ಕೊಂದು ಹೋದ. ಆಗ ಕಳ್ಳತನಕ್ಕಿಂತಲೂ ಕೊಂದದ್ದು ತಪ್ಪು ಎಂಬ ಭಾವ ಬರುತ್ತದೆ. ಕಳ್ಳತನ ಮಾಡಿ ಹೋಗಬಹುದಿತ್ತು, ಕೊಂದದ್ದು ಯಾಕೆ? ಇದುವೇ “ಚೋರಧರ್ಮ!’.
ಹೀಗೆ ರಾಜಧರ್ಮ, ಪತಿಧರ್ಮ, ಸ್ತ್ರೀಧರ್ಮ ಹೀಗೆ ನಾನಾ ಬಗೆಗಳಿವೆ. ಸೌಂದರ್ಯವನ್ನು ಸ್ಪಷ್ಟಪಡಿಸುವುದು ಹೇಗೆ? “ಮಡಿ’ಯೂ ಹೀಗೆ. ಉತ್ತರ ಭಾರತದ ದೇವಸ್ಥಾನಗಳಲ್ಲಿ ಕೋಟು ಹಾಕಿಕೊಂಡು ಪೂಜೆ ಮಾಡುತ್ತಾರೆ. ಆಯಾ ದೇಶ, ಕಾಲಕ್ಕೆ ಸರಿಯಾಗಿ, ಸಾಂದರ್ಭಿಕವಾಗಿ ನಮ್ಮ ಆತ್ಮಸಾಕ್ಷಿಗೆ ಅನುಸರಿಸಿ ಇವುಗಳನ್ನು ಅರ್ಥ ಮಾಡಿಕೊಳ್ಳಬೇಕೆ ವಿನಾ ಇದಮಿತ್ಥಂ ಎಂದು ಹೇಳಲಾಗದು.
“ಧರ್ಮಸ್ಯ ಚರಣಂ (ಆಚರಣಂ) ಶ್ರೇಯಃ…’ =ಧರ್ಮವನ್ನು ಆಚರಿಸಬೇಕು, ಸತ್ಯವನ್ನು ಹೇಳಬೇಕು’. ಯಾವುದು ಸತ್ಯ ಎಂದು ನಿರ್ಧರಿಸುವುದು ಕಷ್ಟ. ಅಂತಹ ಸಂದರ್ಭ ಆತ್ಮಸಾಕ್ಷಿಯನ್ನು ಇಟ್ಟುಕೊಳ್ಳಬೇಕು. ಯಾವ ಸಂದರ್ಭದಲ್ಲಿ ಹೇಗೆ ಧರ್ಮವನ್ನು ಆಚರಿಸಬೇಕೆಂಬುದಕ್ಕಾಗಿ, ಧರ್ಮದ ಸ್ವರೂಪವನ್ನು ತೋರಿಸುವುದು, ತಾನೇ ಭಗವಂತ ಎಂದು ತೋರಿಸುವುದು ಇವೆರಡು ಉದ್ದೇಶಗಳಿಗಾಗಿ ಭಗವಂತ ಅವತರಿಸಿದ. ಆದ್ದರಿಂದಲೇ ವಿದುರನೀತಿಯಂತಹ ನೀತಿಗಳು ಬಂದಿರುವುದು. ನೀತಿಗಳೆಂದರೆ ಗೈಡ್ಲೈನ್ಸ್. ಇಂತಿಂತಹ ಸಂದರ್ಭ ಹೀಗೀಗೆ ಎಂದು ಮಾರ್ಗದರ್ಶನ ಕೊಡಬಹುದಷ್ಟೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811