ಅಮೃತಮಥನ ಕಾಲದಲ್ಲಿ ಸುರಾಸುರರು ಜತೆಗೂಡಿ ಕಡೆದರೂ ಅಮೃತವನ್ನು ದೇವತೆಗಳಿಗೆ ಮಾತ್ರ ಕೊಟ್ಟದ್ದು ಎಷ್ಟು ಸರಿ ಎಂದು ಪ್ರಶ್ನಿಸುವವರಿದ್ದಾರೆ. ಅಮೃತ ಬಂದ ತತ್‌ಕ್ಷಣ ಅಮೃತಕಲಶವನ್ನು ಮೊದಲು ಎತ್ತಿಕೊಂಡು ಓಡಿಹೋದವರು ಅಸುರರು. ಅವರು ಮೊದಲೇ ಹಂಚಿಕೊಳ್ಳೋಣ ಎಂದು ಹೇಳಬಹುದಿತ್ತು.
ಹಾಗೆ ಯಾರಿಗೂ ಹೇಳದೆ ಕಳ್ಳತನ ಮಾಡಲು ಯತ್ನಿಸಿದರು. ಭಗವಂತ ಮೋಹಿನಿ ರೂಪದಲ್ಲಿ ಬಂದು ಏಕೆ ದೇವತೆಗಳಿಗೆ ಅಮೃತವನ್ನು ಕೊಡಿಸಬೇಕಿತ್ತು ಎಂದೂ ಪ್ರಶ್ನಿಸುತ್ತಾರೆ. ಮೇರು ಪರ್ವತವನ್ನು ಕಡೆಗೋಲಾಗಿ ಸುರಾಸುರರು ಕಡೆಯುತ್ತಿರುವಾಗ ಕೆಳಗೆ ಕೂರ್ಮರೂಪದಲ್ಲಿದ್ದು ರಕ್ಷಿಸಿದ್ದೇ ಭಗವಂತ. ಇಲ್ಲಿಯೂ ಅಮೃತಕಲಶದ ಮಾಲಕತ್ವ ಯಾರಿಗೆ ಸೇರಿದ್ದಾಯಿತು? ಭಗವಂತನಿಗೇ. ಆತನಿಗೆ ಸೇರಿದ ಅಮೃತವನ್ನು ಆತ ದೇವತೆಗಳಿಗೆ ಹಂಚಿದ, ತಪ್ಪೇನು? ಒಟ್ಟಾರೆ ಧರ್ಮದ ಅರ್ಥವೆಂದರೆ ಸಮಷ್ಟಿ ಹಿತ, ನನ್ನದಲ್ಲ ಎಂಬುದು.
ಆದ್ದರಿಂದಲೇ ಧರ್ಮ ಎನ್ನುವುದು religion ಗೆ ಸಮನಾಗದು, ಧಾರಕತ್ವ ಎಂಬ ಭಾವ ರಿಲಿಜಿಯನ್ ಶಬ್ದದಲ್ಲಿ ಬರುವುದಿಲ್ಲ. ಧರ್ಮಕ್ಕೆ ಅನೇಕ ವ್ಯಾಪ್ತಿ ಇದೆ. ಕರ್ಮವೂ ಇಷ್ಟೇ. ಧರ್ಮಕ್ಕೆ ಪುಣ್ಯ ಎಂಬರ್ಥವೂ ಇದೆ. “ಸರ್ವಧರ್ಮಾನ್ ಪರಿತ್ಯಜ್ಯ’ ಎನ್ನುವಾಗ “ಪುಣ್ಯ’, “ಫಲ’ ಎಂಬ ಅರ್ಥದಲ್ಲಿ ಬಳಸಲಾಗಿದೆ. ಭಿಕ್ಷುಕರು ಯಾಚಿಸುವಾಗ “ಧರ್ಮ ಮಾಡಿ’ ಎನ್ನುವುದು “ಧರ್ಮ ಮಾಡಿ ಪುಣ್ಯ ಕಟ್ಟಿಕೊಳ್ಳಿ’ ಎಂಬರ್ಥದಲ್ಲಿ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811