ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಬೋಧಿಸುವಾಗ ಪ್ರಿಯತಮನಾಗಿರುವುದರಿಂದ (“ಪ್ರಿಯೋ —ಸಿ’) ಸತ್ಯವನ್ನು ಹೇಳುತ್ತೇನೆ ಎಂದಿದ್ದಾನೆ. ಪ್ರೀತಿ ಇರುವಲ್ಲಿ ಸತ್ಯವೂ ಇರುತ್ತದೆ. ಪ್ರಾಣಿಯೇ ಇರಲಿ, ಮನುಷ್ಯರೇ ಇರಲಿ ಪ್ರೀತಿ ಇದ್ದಲ್ಲಿ ಕೆಲಸವೂ ಪರಿಣಾಮಕಾರಿಯಾಗಿರುತ್ತದೆ ಎನ್ನುವುದು ಅನುಭವವೇದ್ಯ. ಇಂತಹ ಸೂಕ್ಷ್ಮವಿಚಾರವನ್ನು ಶ್ರೀಕೃಷ್ಣ ಅರುಹಿದ್ದಾನೆ. ಆದ್ದರಿಂದಲೇ ಪ್ರೀತಿಪಾತ್ರರಿಗೇ ಉಪದೇಶ ಮಾಡಬೇಕೆಂದು ಹೇಳಿದ್ದು. ಮಕ್ಕಳಿಗೆ ತಿಳಿ ಹೇಳುವಾಗಲೂ ಪ್ರೀತಿಯ ಮಾಧ್ಯಮದಿಂದ ಹೇಳಬೇಕು.
ನಾವು ಹುಲಿ, ಸಿಂಹದ ಬಗೆಗೆ ಹೆದರುತ್ತೇವೆ, ಆದರೆ ಪ್ರೀತಿಯಿಂದ ಕಂಡ ಸರ್ಕಸ್‌ನವರು ಅವುಗಳ ಜತೆ ಆಟವಾಡುತ್ತಾರೆ. ಸರ್ಪ ಕಚ್ಚುವುದೂ ಶತ್ರು ಎಂಬ ಭಾವದಿಂದ. ಪ್ರೀತಿ ಖಾತ್ರಿಯಾದಾಗ ಶತ್ರುತ್ವ ಇಲ್ಲವಾಗುತ್ತದೆ. ಪ್ರೀತಿ ಎನ್ನುವುದು ನಾಟಕವಾಗಬಾರದು. ಶತ್ರು ಭಾವ ಬಂದರೆ ಸತ್ಯ ಹೇಳಿದರೂ ನಂಬುವುದಿಲ್ಲ. ಇದನ್ನೆ “ಆತ್ಮನಃ ಪ್ರಿಯತಮಂ’ ಎನ್ನುವ ಮೂಲಕ ಶ್ರೀಮದಾಚಾರ್ಯರು ಬೆಳಕು ಹರಿಸಿದ್ದಾರೆ.
ಅಧರ್ಮದ ನಿಗ್ರಹ ಕ್ಷತ್ರಿಯರಿಗೆ ವಿಶೇಷ ಕರ್ತವ್ಯ. ಉಳಿದವರಿಗೆ ಐಚ್ಛಿಕ. ಅಧರ್ಮಿಗಳು ಲೋಕದ ಎಲ್ಲರಿಗೂ ಕೆಡುಕರೇ ಆಗಿರುವುದರಿಂದ ಸ್ವ ವಿಹಿತ ಕರ್ತವ್ಯದವವರು ನಿಗ್ರಹ ಮಾಡಲೇಬೇಕೆಂಬ, ಉಳಿದವರು ಪೂರಕವಾಗಿರಬೇಕೆಂಬ ಆಗ್ರಹವಿದೆ. ಶ್ರೀಕೃಷ್ಣಾವತಾರದ ಈ ಉದ್ದೇಶವನ್ನು ಈಡೇರಿಸಲು ಶ್ರೀಕೃಷ್ಣಜನ್ಮಾಷ್ಟಮಿ ದಿನ ಸಂಕಲ್ಪಿಸೋಣ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811