Advertisement

Udupi: ಇನ್ನೂ ಘೋಷಣೆಯಾಗದ ಗಾಂಧಿ ಗ್ರಾಮ ಪುರಸ್ಕಾರ

06:17 PM Oct 23, 2024 | Team Udayavani |

ಉಡುಪಿ: ಪ್ರತೀ ವರ್ಷ ಗಾಂಧಿ ಜಯಂತಿ ಪ್ರಯುಕ್ತ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರವನ್ನು ಈ ಬಾರಿ ವಿವಿಧ ಕಾರಣಗಳಿಂದ ಗ್ರಾ.ಪಂ.ಗಳಿಗೆ ಇನ್ನೂ ಘೋಷಿಸಿಲ್ಲ. ಗಾಂಧಿ ಜಯಂತಿ ಮುಗಿದು 20 ದಿನವಾದರೂ ಗಾಂಧಿ ಗ್ರಾಮ ಪುರಸ್ಕಾರ ಗ್ರಾ.ಪಂ.ಗಳಿಗೆ ಸಿಕ್ಕಿಲ್ಲ.

Advertisement

ಸರಕಾರದ ಈ ವಿಳಂಬ ನಿರ್ಧಾರದಿಂದ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತಿರುವ ಗ್ರಾ.ಪಂ.ಗಳು ನಿರಾಶೆ ಗೊಂಡಿವೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯು ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಗಾಂಧಿ ಗ್ರಾಮ ಪುರಸ್ಕಾರವು ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಸ್ವತ್ಛತೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಸರಬರಾಜು ಮುಂತಾದ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಗ್ರಾಮ ಪಂಚಾಯತ್‌ಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ ಐದು ಲಕ್ಷ ರೂ. ನಗದನ್ನು ಒಳಗೊಂಡಿರುತ್ತದೆ. ಗಾಂಧಿ ಗ್ರಾಮ ಪುರಸ್ಕಾರವು ಗ್ರಾ.ಪಂ.ಗಳಿಗೆ ಪ್ರೇರಣೆಯ ಸಂಕೇತವಾಗಿದೆ. ಈ ಪುರಸ್ಕಾರದ ವಿಳಂಬವು ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ನಿಟ್ಟಿನಲ್ಲಿ ಸರಕಾರವು ಬಗ್ಗೆ ಗಮನ ಹರಿಸಿ, ಶೀಘ್ರ ಕ್ರಮವಹಿಸಬೇಕು. ತಾಲೂಕು ಮಟ್ಟದ ಸಮಿತಿಗಳು ಎಲ್ಲ ಗ್ರಾ.ಪಂ.ಗಳಿಗೆ ಭೇಟಿ ನೀಡಿ ವರದಿ ತಯಾರಿಸಿ ಜಿಲ್ಲಾ ಮಟ್ಟದ ಸಮಿತಿ ಪರಿಶೀಲಿಸುತ್ತದೆ. ಜಿಲ್ಲಾ ಮಟ್ಟದ ಸಮಿತಿ ಅಂತಿಮವಾಗಿ ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡಿದೆ.

ಉಡುಪಿ ತಾಲೂಕಿನಲ್ಲಿ 80 ಬಡಗಬೆಟ್ಟು(359), ತೆಂಕ ನಿಡಿಯೂರು(254), ಕೆಮ್ಮಣ್ಣು (250), ಕಲ್ಯಾಣಪುರ(205), ಅಂಬಲಪಾಡಿ (194), ಕಾಪು ತಾಲೂಕಿನಲ್ಲಿ ಬಡಾ (256.50), ಬೆಳ್ಳೆ (231), ಮಜೂರು (215.50), ಕೋಟೆ (210.50), ಇನ್ನಂಜೆ (206.50), ಕುರ್ಕಾಲು (189), ಬ್ರಹ್ಮಾವರ ತಾಲೂಕಿನಲ್ಲಿ ಕಾಡೂರು (418), ಕೋಟತಟ್ಟು (364), ಆರೂರು (358), ಆವರ್ಸೆ (336), ಕೋಡಿ (222), ಕುಂದಾಪುರ ತಾಲೂಕಿನಲ್ಲಿ ತಲ್ಲೂರು (256.50), ಶಂಕರ್‌ನಾರಾಯಣ (192), ಕೊರ್ಗಿ (163), ಹಕ್ಲಾಡಿ (152), ಬೆಳೂರು (112), ಬೈಂದೂರು ತಾಲೂಕಿನಲ್ಲಿ ನಾಡ (253), ಕಿರಿಮಂಜೇಶ್ವರ (224), ಜಡ್ಕಲ್‌ (216), ನಾವುಂದ (194), ಕೆರ್ಗಾಲು (191), ಕಾರ್ಕಳ ಪಳ್ಳಿ (375), ಸಾಣೂರು(242), ಕುಕ್ಕುಂದೂರು (208), ಮಿಯಾರು(185.50), ನಲ್ಲೂರು(100), ಹೆಬ್ರಿ ಮುದ್ರಾಡಿ (361.50), ಮಡಾಮಕ್ಕಿ (360), ನಾಡಾ³ಲು (320), ವರಂಗ (250), ಕುಚ್ಚಾರು (198) ಗ್ರಾಮ ಪಂಚಾಯತ್‌ಗಳು ಅಂಕಗಳಿಸಿವೆ.

ವಿಳಂಬಕ್ಕೇನು ಕಾರಣ ?
ರಾಜ್ಯದ ವಿವಿಧ ಭಾಗದಲ್ಲಿ ವಿಧಾನಸಭೆ, ವಿಧಾನ ಪರಿಷತ್‌, ಗ್ರಾ. ಪಂ. ಉಪ ಚುನಾವಣೆ ಪ್ರಕ್ರಿಯೆ ಕೆಲವು ಕಡೆಗಳಲ್ಲಿ ನಡೆಯುತ್ತಿರುವುದರಿಂದ ನೀತಿ ಸಂಹಿತೆ ಉಲ್ಲಂಘನೆ ಅಡ್ಡಿಯಾದ ಹಿನ್ನೆಲೆಯಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪ್ರಕ್ರಿಯೆ ವಿಳಂಬವಾಗಿರುವ ಸಾಧ್ಯತೆಯಾಗಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ ಅಥವಾ ಸರಕಾರದ ವಿವಿಧ ತಾಂತ್ರಿಕ ಸಮಸ್ಯೆಗಳಿಂದಲೂ ವಿಳಂಬವಾಗಿರಬಹುದು ಎನ್ನಲಾಗುತ್ತಿದೆ.

Advertisement

ಪ್ರಶಸ್ತಿ ರೇಸ್‌ನಲ್ಲಿ ಟಾಪ್‌ ಗ್ರಾ.ಪಂ.
– 80 ಬಡಗಬೆಟ್ಟು
– ಬಡಾ
– ಕಾಡೂರು
– ತಲ್ಲೂರು
– ನಾಡ
– ಪಳ್ಳಿ
– ಮುದ್ರಾಡಿ

ಸರಕಾರಕ್ಕೆ ವರದಿ
ಗಾಂಧಿ ಗ್ರಾಮ ಪುರಸ್ಕಾರ ನೀಡುವ ನಿಟ್ಟಿನಲ್ಲಿ ತಾಲೂಕು ಸಮಿತಿ, ಜಿಲ್ಲಾ ಸಮಿತಿ ವ್ಯವಸ್ಥಿತವಾಗಿ ಪರಿಶೀಲನೆ ನಡೆಸಿ ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡಿದೆ. ಈ ಬಗ್ಗೆ ಎಲ್ಲ ಗ್ರಾ. ಪಂ.ಗಳಿಗೆ ಪರಿಶೀಲಿಸಲು ಮುಕ್ತ ಅವಕಾಶ ನೀಡಲಾಗಿದ್ದು, ನೀತಿ ಸಂಹಿತೆ ಮುಗಿದ ಬಳಿಕ ಸರಕಾರಕ್ಕೆ ವರದಿ ಕಳುಹಿಸಲಾಗುತ್ತದೆ.
– ಪ್ರತೀಕ್‌ ಬಯಾಲ್‌, ಸಿಇಒ, ಉಡುಪಿ ಜಿ. ಪಂ.

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next