ಉಡುಪಿ : ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ 1,962 ಕೋ.ರೂ. ಮೌಲ್ಯದ ಸಿಗಡಿ ಮತ್ತು ಇತರ ಮೀನುಗಳು ರಫ್ತಾಗಿವೆ ಎಂದು ಮೀನುಗಾರಿಕೆ ಇಲಾಖೆ ತಿಳಿಸಿದೆ.
ಇದರಲ್ಲಿ ಸಮುದ್ರದ ಮೀನುಗಾರಿಕೆ ಇಳುವರಿ ಹಾಗೂ ಒಳನಾಡು ಮೀನುಗಾರಿಕೆಯಿಂದ ಸಿಗಡಿ ಕೃಷಿ, ಮೀನು ಕೃಷಿ ಇಳುವರಿಯ ರಫ್ತು ಸೇರಿಕೊಂಡಿದೆ.
ಹಿನ್ನೀರು ಮೀನು /ಸಿಗಡಿ ಕೃಷಿಗೆ ಹೊಸ ಕೊಳ ನಿರ್ಮಾಣ, ಚೌಳು ಅಥವಾ ಜೌಗು ಪ್ರದೇಶದಲ್ಲಿ ಮೀನು/ ಸಿಗಡಿ ಕೃಷಿಗೆ ಹೊಸ ಕೊಳ ನಿರ್ಮಾಣಕ್ಕೆ ಪ್ರತಿ ಹೆಕ್ಟರ್‌ಗೆ ಘಟಕ ವೆಚ್ಚ 8 ಲಕ್ಷ ರೂ.ಗಳಲ್ಲಿ ಸಾಮಾನ್ಯ ವರ್ಗಕ್ಕೆ 3.20 ಲಕ್ಷದ ವರೆಗೆ ಹಾಗೂ ಪರಿಶಿಷ್ಟ ಜಾತಿ/ ಪಂಗಡದವರಿಗೆ 4.80 ಲಕ್ಷದ ವರೆಗೂ ಸಹಾಯಧನ ಸರಕಾರದಿಂದ ನೀಡಲಾಗುತ್ತದೆ. ಮೀನು ರಫ್ತಿಗೆ ಅನುಕೂಲವಾಗುವಂತೆ ಶೀತಲೀಕರಣ ವಾಹನ ಖರೀದಿ, ಶಾಖ ನಿರೋಧಕ ವಾಹನ, ಮೀನಿನ ಮೌಲ್ಯವರ್ಧನೆ ಘಟಕ ಹಾಗೂ ಮೀನುಗಾರಿಕೆ ದೋಣಿಗಳ ರಫ್ತು ಸಾಮರ್ಥ್ಯ ಉನ್ನತೀಕರಣಕ್ಕೂ ಸಹಾಯಧನ ಒದಗಿಸಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಸರಕಾರಕ್ಕೆ ಆದಾಯ
ಮೀನುಗಾರಿಕೆ ಇಲಾಖೆ ವ್ಯಾಪ್ತಿಯ ಕೆರೆ/ ಜಲಾಶಯ, ನದಿ ಭಾಗಗಳ ಮೀನು ಹಕ್ಕಿನ ಗುತ್ತಿಗೆ ಇತ್ಯಾದಿಗಳಿಂದ 2021-22ನೇ ಸಾಲಿನಲ್ಲಿ 3,531 ಜಲಸಂಪನ್ಮೂಲಗಳ ವಿಲೇವಾರಿಯಿಂದ 10.35 ಕೋ.ರೂ.ಗಳಿಗೂ ಅಧಿಕ ಆದಾಯ ಬಂದಿದೆ. 2022-23ನೇ ಸಾಲಿನಲ್ಲಿ 15.89 ಕೋ.ರೂ.ಗಳಿಗೂ ಅಧಿಕ ಆದಾಯ ಬಂದಿದೆ.