Advertisement

ಉಡುಪಿ: ಜಲಕ್ಷಾಮದ ಆತಂಕ –ಬಜೆ ಡ್ಯಾಂ ತಗ್ಗಿದ ಸ್ವರ್ಣಾ ನದಿ ಒಳ ಹರಿವು

04:33 PM Mar 06, 2023 | Team Udayavani |

ಉಡುಪಿ: ಬೇಸಗೆ ಯಲ್ಲಿ ಉಡುಪಿ ನಗರಕ್ಕೆ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಈಗಿನಿಂದಲೇ ಮುಂಜಾಗ್ರತೆ ವಹಿಸದಿದ್ದರೆ ಜಲಕ್ಷಾಮ ಭೀತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನಗರಸಭೆ ಮುಂಜಾಗ್ರತಾ ಕ್ರಮಗಳನ್ನು ಆರಂಭಿಸಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಹಿರಿಯಡಕ ಸ್ವರ್ಣಾ ನದಿ ಬಜೆ ಅಣೆಕಟ್ಟಿನಲ್ಲಿ ತಿಂಗಳ ಹಿಂದೆ ಒಳ ಹರಿವು ನಿಂತಿದೆ. ಕಳೆದ ವರ್ಷ ಈ ಸಮಯದಲ್ಲಿ ಒಳ ಹರಿವು ಇತ್ತು. ಸದ್ಯ ನೀರಿನ ಪ್ರಮಾಣ ಮೇ ಮೊದಲ ವಾರದವರೆಗೆ ಸಾಕಾಗುವಷ್ಟು ಇದೆ.

Advertisement

ಹಿಂದಿನ ವರ್ಷಗಳಲ್ಲಿ ನಗರದ 35 ವಾರ್ಡ್‌ಗಳನ್ನು ಮೂರು ವಲಯ ಗಳಾಗಿ ವಿಂಗಡಿಸಿ ಪ್ರತಿದಿನಕ್ಕೆ 8 ಗಂಟೆ ಗಳಂತೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಐದಾರು ತಿಂಗಳ ಹಿಂದೆ ವಲಯ ವಾರು ಸ್ಥಗಿತಗೊಳಿಸಿ ಪ್ರಾಯೋಗಿಕ ದಿನದ 24 ಗಂಟೆ ನೀರು ಪೂರೈಕೆ ಮಾಡುವ ಯೋಜನೆಯೊಂದಿಗೆ ಪೂರೈಕೆ ಮಾಡಲಾಗುತ್ತಿದೆ. ಆದರೂ ಎತ್ತರ ಪ್ರದೇಶದ ಕೆಲವೆಡೆ ನೀರು ಸಮರ್ಪಕ ಪೂರೈಕೆಯಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.

ತುರ್ತು ನೀರಿನ ಸಮಸ್ಯೆ ಎದುರಾದರೆ ಕೊನೆಯ ಕ್ಷಣದಲ್ಲಿ ವಿಳಂಬವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸ್ವರ್ಣಾ ನದಿ ಗುಂಡಿಗಳಲ್ಲಿ ಪಂಪಿಂಗ್‌ ನಡೆಸಿ ಬಜೆ ಕಡೆಗೆ ನೀರು ಹರಿಸುವ ಯೋಜನೆಗೆ ಟೆಂಡರ್‌ ಪ್ರಕ್ರಿಯೆ ನಡೆದು, ವರ್ಕ್‌ ಆರ್ಡರ್‌ ಆಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಎಲ್ಲ ವಾರ್ಡ್‌ಗಳಿಗೆ ಏಕಕಾಲದಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ನಿತ್ಯ 30 ಎಂಎಲ್‌ಡಿ (ಮಿಲಿಯನ್‌ ಲೀ. ಪರ್‌ ಡೇ) ನೀರು ಪಂಪಿಂಗ್‌ ಮಾಡಲಾಗುತ್ತಿದೆ. ತಗ್ಗು  ಪ್ರದೇಶದಲ್ಲಿ ಸಾಕಷ್ಟು ಒತ್ತಡದಲ್ಲಿ ನೀರು ಪೂರೈಕೆಯಾಗುತ್ತದೆ. ಕೆಲವರು ಹೆಚ್ಚು ಬಳಸುವ ಕಾರಣ ಓವರ್‌ಹೆಡ್‌ ಟ್ಯಾಂಕ್‌ ಶೇಖರಣೆಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಎತ್ತರ ಪ್ರದೇಶಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ತಲೆದೋರಿದೆ.

ಜಲಮೂಲಗಳ ಬಳಕೆಗೂ ಕ್ರಮ
ಒಂದು ವೇಳೆ ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ನಗರ ವ್ಯಾಪ್ತಿಯಲ್ಲಿರುವ ಜಲಮೂಲಗಳ ಬಳಕೆ ಮಾಡಿಕೊಳ್ಳದಿದ್ದರೆ ಸಮಸ್ಯೆ ಎದುರಾಗಲಿದೆ. ನಗರದಲ್ಲಿರುವ 35ಕ್ಕೂ ಅಧಿಕ ಬೋರ್‌ವೆಲ್‌, ಬಾವಿಗಳನ್ನು ವ್ಯವಸ್ಥಿತವಾಗಿಸಿ ನೀರು ಪಡೆಯುವ ಯೋಜನೆ ರೂಪಿಸಲು ನಗರಸಭೆ ಮುಂದಾಗಿದೆ. ಪ್ರಸ್ತುತ ಬಜೆ ಡ್ಯಾಂ ಅಣೆಕಟ್ಟಿನ ಪಂಪಿಂಗ್‌ ಸ್ಟೇಶನ್‌ನಲ್ಲಿ 500 ಎಚ್‌ಪಿ ಸಾಮರ್ಥ್ಯದ ಹೊಸ ಪಂಪ್‌ ಅಳವಡಿಸಲಾಗಿದ್ದು, ಸದ್ಯಕ್ಕೆ ಪ್ರತೀದಿನ 24 ಗಂಟೆ ಪಂಪಿಂಗ್‌
ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಪಂಪಿಂಗ್‌ ಸಮಯವನ್ನು ಕಡಿಮೆಗೊಳಿಸುವ ಬಗ್ಗೆ ನಗರಸಭೆ ಚಿಂತಿಸಿದೆ.

Advertisement

ನೀರಿನ ಮಟ್ಟ- ಆ ವರ್ಷ, ಈ ವರ್ಷ
ಈ ಹಿಂದಿನ ಮೂರು ವರ್ಷಗಳಿಂದ ಮಳೆ ಉತ್ತಮವಾಗಿದ್ದ ಕಾರಣ ನಗರ ವ್ಯಾಪ್ತಿಗೆ ಕುಡಿಯುವ ನೀರಿಗೆ ಕೊರತೆ ಉಂಟಾಗಿಲ್ಲ. ಪ್ರಸ್ತುತ ಸ್ವರ್ಣಾ ನದಿ ಬಜೆ ಅಣೆಕಟ್ಟುವಿನಲ್ಲಿ ಮಾ. 5 ರಂದು 5.70 ಮೀಟರ್‌ ನೀರಿನ ಮಟ್ಟವಿದೆ. ಶಿರೂರು ಅಣೆಕಟ್ಟಿನಲ್ಲಿ 2 ಮೀ. ನೀರು ಪ್ರಮಾಣವಿದೆ. ಶಿರೂರು
ಡ್ಯಾಂನ ನೀರಿನ ಗೇಟ್‌ ಇನ್ನೂ ತೆರೆದಿಲ್ಲ. ಕಳೆದ ವರ್ಷ ಮಾ.5ರಂದು 5.90 ನೀರಿನ ಮಟ್ಟವಿತ್ತು. ಶಿರೂರು ಡ್ಯಾಂನಲ್ಲಿ ನೀರಿನ ಮಟ್ಟ 4.50 ಇತ್ತು.

ಬೇಸಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗದಂತೆ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಶಿರೂರು ಡ್ರೆಜ್ಜಿಂಗ್‌ ನಡೆಸಲು ಟೆಂಡರ್‌ ಪ್ರಕ್ರಿಯೆ ನಡೆದಿದೆ. ಅನಗತ್ಯ ಕುಡಿಯುವ ನೀರನ್ನು ತೋಟಗಳಿಗೆ ಮತ್ತು ವಾಹನ ತೊಳೆಯಲು ಬಳಕೆ ಮಾಡಬಾರದು.
-ಸುಮಿತ್ರಾ ನಾಯಕ್‌, ಅಧ್ಯಕ್ಷರು, ಉಡುಪಿ ನಗರಸಭೆ

ನೀರಿನ ಮಹತ್ವ ತಿಳಿದುಕೊಂಡು ಮಿತ ಬಳಕೆಗೆ ಸೂಕ್ತ ಕ್ರಮ ಈಗಿನಿಂದಲೇ ಆರಂಭಗೊಳ್ಳಬೇಕು.
-ಪ್ರೊ| ಉದಯ ಶಂಕರ್‌,ಭೂಗರ್ಭ ಶಾಸ್ತ್ರಜ್ಞರು, ಎಂಐಟಿ. ಮಣಿಪಾಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next