Advertisement

Udupi: ಜಾನುವಾರುಗಳಿಗೆ ತುರ್ತು ಚಿಕಿತ್ಸೆ; 8 ಪಶು ಸಂಜೀವಿನಿ ಆ್ಯಂಬುಲೆನ್ಸ್‌ ಲಭ್ಯ

01:26 PM Mar 07, 2024 | Team Udayavani |

ಉಡುಪಿ: ಎರಡೂವರೆ ವರ್ಷದ ಹಿಂದೆ ಲೋಕಾರ್ಪಣೆಗೊಂಡು, ಕಾರಣಾಂತರಗಳಿಂದ ಸೇವೆಗೆ ಲಭ್ಯವಾಗದ ಪಶು ಸಂಜೀವಿನಿ ಆ್ಯಂಬುಲೆನ್ಸ್‌ ಕಳೆದ ಆಗಸ್ಟ್‌ನಿಂದ ಪ್ರಾಯೋಗಿಕವಾಗಿ ಜಾರಿಗೊಂಡು ಇದೀಗ ಪೂರ್ಣ ಪ್ರಮಾಣದಲ್ಲಿ ಜಾನುವಾರುಗಳ ಉಚಿತ
ಚಿಕಿತ್ಸೆಗೆ ಲಭ್ಯವಾಗುತ್ತಿದೆ. ಈಗಾಗಲೇ ಜಿಲ್ಲೆಯ 1,723 ಜಾನುವಾರುಗಳಿಗೆ ಈ ಮೂಲಕ ತುರ್ತು ಚಿಕಿತ್ಸಾ ಸೇವೆ ಒದಗಿಸಲಾಗಿದೆ.

Advertisement

ಕೇಂದ್ರ ಸರಕಾರದ “ಪಶು ಸಂಜೀವಿನಿ ಯೋಜನೆ’ಯ ಮೊಬೈಲ್‌ ವೆಟರ್ನರಿ ಕ್ಲಿನಿಕ್‌ (ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ) ಗ್ರಾಮೀಣ ಪ್ರದೇಶದ ಜಾನುವಾರುಗಳಿರುವ ಮನೆ ಹೋಗಿ ಚಿಕಿತ್ಸೆ ನೀಡುತ್ತಿದೆ.

ಪಶು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ 2022ರ ಜುಲೈನಲ್ಲಿ ಲೋಕಾರ್ಪಣೆಗೊಂಡಿದ್ದ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳು ಟೆಂಡರ್‌ ಸಹಿತ ಇನ್ನಿತರ ತಾಂತ್ರಿಕ ಸಮಸ್ಯೆಯಿಂದ ಸೇವೆ ಆರಂಭಿ ಸಲು ವಿಳಂಬವಾಗಿತ್ತು.
ಇದೀಗ ಎಲ್ಲ ಸಮಸ್ಯೆಗಳು ಬಗೆಹರಿದು ಜಾನುವಾರುಗಳ ಚಿಕಿತ್ಸೆಗೆ ಲಭ್ಯವಾಗಿದೆ. ಪ್ರತೀ ವಾಹನದಲ್ಲಿ ಒಬ್ಬರು ಪಶು ವೈದ್ಯರು, ಒಬ್ಬರು ಸಹಾಯಕ, ಚಾಲಕ ಸಹಿತ ಒಟ್ಟು ಮೂವರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಗೆ 8 ಪಶು ಸಂಜೀವಿನಿ ಆ್ಯಂಬುಲೆನ್ಸ್‌ ದೊರೆತಿದ್ದು, 7 ತಾಲೂಕಿಗೆ ತಲಾ ಒಂದು ಆ್ಯಂಬುಲೆನ್ಸ್‌ ಒದಗಿಸಲಾಗಿದ್ದು, ಒಂದು ಆ್ಯಂಬುಲೆನ್ಸ್‌ ಜಿಲ್ಲಾ ಕೇಂದ್ರಕ್ಕೆ ನೀಡಲಾಗಿದೆ. ಇದರಲ್ಲಿ ಎಲ್ಲ ರೀತಿಯ ಔಷಧ, ಶಸ್ತ್ರಚಿಕಿತ್ಸೆ ಪರಿಕರಗಳು ಲಭ್ಯವಿದೆ. ಡಿಸೆಂಬರ್‌ನಲ್ಲಿ 295, ಜನವರಿಯಲ್ಲಿ 497, ಫೆಬ್ರವರಿಯಲ್ಲಿ 591 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ.

1962ಕ್ಕೆ ಕರೆ ಮಾಡಿ
ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಗ್ರಾಮೀಣ ಪ್ರದೇಶದ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದಾಗ ಅವುಗಳಿಗೆ ತುರ್ತು ಸೇವೆ ನೀಡಲು 1962 ಸಂಖ್ಯೆಯ ಸಹಾಯವಾಣಿ ರೂಪಿಸಿದೆ. ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರು ಕಂಡು ಬಂದರೆ, ಕರೆ ಮಾಡಿದ ಕೆಲವೇ ಸಮಯದಲ್ಲಿ ವಾಹನಗಳು ಸಾಮಾನ್ಯ
ಆ್ಯಂಬುಲೆನ್ಸ್‌ನಂತೆ ಸ್ಥಳಕ್ಕೆ ಧಾವಿಸಿ, ಸ್ಥಳದಲ್ಲಿಯೇ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸಲಾಗುವುದು ಎಂದು ಪಶು ಸಂಜೀವಿನಿ ಜಿಲ್ಲಾ ಸಂಯೋಜಕ ಡಾ| ಸರ್ವೋತ್ತಮ ಉಡುಪ ತಿಳಿಸಿದ್ದಾರೆ.

ಪೂರ್ಣಪ್ರಮಾಣದಲ್ಲಿ ಸೇವೆ
ಜಿಲ್ಲೆಯ 7 ತಾಲೂಕು ಸಹಿತ ಜಿಲ್ಲಾ ಕೇಂದ್ರವು ಸೇರಿ 8 ಪಶು ಸಂಜೀವಿನಿ ಸಂಚಾರಿ ತುರ್ತು ಚಿಕಿತ್ಸ ವಾಹನಗಳು ಪೂರ್ಣ ಪ್ರಮಾಣದಲ್ಲಿ ಸೇವೆ ನೀಡುತ್ತಿದೆ. ಗ್ರಾಮೀಣ ಭಾಗದಿಂದ ಜಾನುವಾರುಗಳ ಅನಾರೋಗ್ಯಕ್ಕೆ ಸಂಬಂಧಿಸಿ ಕರೆಗಳೂ ಬರುತ್ತಿದ್ದು, ಪಶು ವೈದ್ಯರು, ಪ್ಯಾರಾ ಮೆಡಿಕಲ್‌ ಅಸಿಸ್ಟೆಂಟ್‌, ವಾಹನ ಚಾಲಕ ಸಹಿತ ಸಿಬಂದಿ ತಂಡವು ತುರ್ತಾಗಿ ಧಾವಿಸಿ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದೆ.
ಡಾ| ರೆಡ್ಡಪ್ಪ , ಉಪ ನಿರ್ದೇಶಕರು,
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

Advertisement

*ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next