ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಸಲು ಕ್ಷೇತ್ರಗಳನ್ನು ಪುನರ್ವಿಂಗಡಿಸಿ ಜಿಲ್ಲಾಡಳಿತ ವತಿಯಿಂದ ಅಂತಿಮ ಕರಡು ಪ್ರತಿಯನ್ನು ರಾಜ್ಯ ಚುನಾವಣ ಆಯೋಗಕ್ಕೆ ಕಳುಹಿಸಲಾಗಿದೆ. ಇದರಂತೆ ಉಡುಪಿ ಜಿಲ್ಲೆಯಲ್ಲಿ ಎರಡು ಜಿ.ಪಂ. ಕ್ಷೇತ್ರಗಳು ಹೆಚ್ಚಳವಾಗಿವೆ. ತಾ.ಪಂ. ಕ್ಷೇತ್ರ ಗಳ ಸಂಖ್ಯೆ ಹಿಂದಿನಂತೆ ಜಿಲ್ಲೆಯಲ್ಲಿ ಒಟ್ಟು 95 ಕ್ಷೇತ್ರಗಳು ಯಥಾಸ್ಥಿತಿಯಲ್ಲಿವೆ.
ಜಿಲ್ಲೆಯಲ್ಲಿ ಈ ಹಿಂದೆ 26 ಜಿ.ಪಂ. ಕ್ಷೇತ್ರಗಳಿದ್ದರೆ ಈ ಬಾರಿ ಈ ಸಂಖ್ಯೆ 28ಕ್ಕೇರಿದೆ. ಉಡುಪಿ, ಕಾರ್ಕಳ ತಾಲೂಕಿನಲ್ಲಿ ತಲಾ ನಾಲ್ಕು, ಕಾಪುವಿನಲ್ಲಿ ಮೂರು, ಬ್ರಹ್ಮಾವರದಲ್ಲಿ ಐದು, ಬೈಂದೂರು ಮೂರು, ಕುಂದಾಪುರದಲ್ಲಿ ಏಳು, ಹೆಬ್ರಿಯಲ್ಲಿ ಎರಡು ಕ್ಷೇತ್ರಗಳಿವೆ.
ಬ್ರಹ್ಮಾವರ ತಾಲೂಕಿನಲ್ಲಿ ಉಪ್ಪೂರು ಹೊಸ ಜಿ.ಪಂ. ಕ್ಷೇತ್ರವಾದರೆ, ಹೆಬ್ರಿ ತಾಲೂಕಿನಲ್ಲಿ ಚಾರ ಇನ್ನೊಂದು ಹೊಸ ಕ್ಷೇತ್ರವಾಗಿದೆ. ಕಳೆದ ಬಾರಿ ಹಿರಿಯಡಕ ಜಿ.ಪಂ. ಕ್ಷೇತ್ರವಿದ್ದರೆ ಈ ಬಾರಿ 80 ಬಡಗಬೆಟ್ಟು ಕ್ಷೇತ್ರವಾಗಿದೆ. ಹಿರಿಯಡಕ ಕ್ಷೇತ್ರದ ಕೆಲವಂಶ 80 ಬಡಗಬೆಟ್ಟು ಕ್ಷೇತ್ರಕ್ಕೆ ಸೇರಿದರೆ ಕೆಲವಂಶ ಪೆರ್ಡೂರು ಕ್ಷೇತ್ರಕ್ಕೆ ಹಂಚಿಕೆಯಾಗಿದೆ.
ಪೆರ್ಡೂರಿನಲ್ಲಿದ್ದ ಕೆಲವು ಭಾಗವನ್ನು ಹೊಸ ಕ್ಷೇತ್ರವಾದ ಉಪ್ಪೂರು ಕ್ಷೇತ್ರಕ್ಕೆ ಹಂಚಿ ಹಾಕಲಾಗಿದೆ. ಹಿಂದಿನ ಕಟಪಾಡಿ ಜಿ.ಪಂ. ಕ್ಷೇತ್ರ ಈಗ ಕುರ್ಕಾಲು ಕ್ಷೇತ್ರವಾಗಿದೆ. ಎಲ್ಲೂರು ಕ್ಷೇತ್ರವೀಗ ಶಿರ್ವ ಕ್ಷೇತ್ರವಾಗಿದೆ. ಮಂದಾರ್ತಿ ಮತ್ತು ಕೋಟದ ಕೆಲವು ಗ್ರಾಮಗಳನ್ನು ಹೊಸದಾಗಿ ಸೃಜಿಸಿದ ಶಿರಿಯಾರ ಜಿ.ಪಂ. ಕ್ಷೇತ್ರಕ್ಕೆ ಸೇರಿಸಲಾಗಿದೆ. ಈ ಹಿಂದೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದ್ದ ಜಿ.ಪಂ. ಕ್ಷೇತ್ರಗಳು ಈಗ ಒಂದೇ ವಿಧಾನಸಭಾ ಕ್ಷೇತ್ರದೊಳಗೆ ಬಂದಿದೆ.
ಬೈಂದೂರಿನ ಮೂರು ಗ್ರಾ.ಪಂ.ಗಳು ಲುಪ್ತಗೊಂಡು ಪಟ್ಟಣ ಪಂಚಾಯತ್ ಆದ ಕಾರಣ ಅಲ್ಲಿ ಬದಲಾವಣೆಗಳು ಕಂಡಿವೆ. ಕ್ಷೇತ್ರಗಳ ವ್ಯಾಪ್ತಿ ಬದಲಾವಣೆಯಾಗಿದೆ. ಬೈಂದೂರು ಕ್ಷೇತ್ರ ಲುಪ್ತಗೊಂಡು ಕೊಲ್ಲೂರು ಹೊಸ ಕ್ಷೇತ್ರವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳನ್ನು ರಚಿಸಲಾಗಿದೆ.
ತಾ.ಪಂ. ಕ್ಷೇತ್ರಗಳು ಪೂರ್ಣವಾಗಿ ಜಿ.ಪಂ. ಕ್ಷೇತ್ರದೊಳಗೆ ಇರಬೇಕೆಂಬ ಮತ್ತು ಗ್ರಾ.ಪಂ.ಗಳನ್ನು ವಿಭಜಿಸದೆ ತಾ.ಪಂ. ಕ್ಷೇತ್ರ ರಚಿಸಬೇಕೆಂಬ ಮಾನದಂಡ ಅನುಸರಿಸಲಾಗಿದೆ. ಚುನಾವಣ ಆಯೋಗವು ಇರಿಸಿಕೊಂಡ ಮಾನದಂಡವೆಂದರೆ ಆ ಕ್ಷೇತ್ರ ವ್ಯಾಪ್ತಿ ಅತೀ ದೊಡ್ಡ ಗ್ರಾ.ಪಂ./ಗ್ರಾಮಗಳ ಹೆಸರನ್ನೇ ಕ್ಷೇತ್ರಕ್ಕೆ ಹೆಸರಿಸುವುದು. ಜಿ.ಪಂ. ಕ್ಷೇತ್ರ 30ರಿಂದ 35,000 ಜನಸಂಖ್ಯೆಗೆ ಮತ್ತು ತಾ.ಪಂ. ಕ್ಷೇತ್ರ ದಲ್ಲಿ 10ರಿಂದ 12,000 ಜನ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ವಿಂಗಡಿಸಲಾಗಿದೆ. ಕೆಲವು ಕಡೆಗಳಲ್ಲಿ ಕ್ಷೇತ್ರಗಳ ಹೆಸರು ಬದಲಾಗಿವೆ. ತಾ.ಪಂ.ನಲ್ಲಿ ಕ್ಷೇತ್ರಗಳ ಹೆಸರು ಬದಲಾಗಿದೆಯಾದರೂ ಜಿ.ಪಂ.ಗೆ ಹೋಲಿಸಿದರೆ ಕಡಿಮೆ.
ಕುಂದಾಪುರ ತಾ| ಅತೀ ಹೆಚ್ಚು, ಹೆಬ್ರಿ ತಾ| ಅತೀ ಕಡಿಮೆ ಕ್ಷೇತ್ರಗಳು
ಅತೀ ಹೆಚ್ಚು ಕ್ಷೇತ್ರಗಳನ್ನು ಕುಂದಾಪುರ, ಅತೀ ಕಡಿಮೆ ಕ್ಷೇತ್ರಗಳನ್ನು ಹೆಬ್ರಿ ತಾಲೂಕು ಹೊಂದಿದೆ. ಕುಂದಾಪುರದಲ್ಲಿ ಏಳು ಜಿ.ಪಂ. ಕ್ಷೇತ್ರಗಳಿದ್ದರೆ, ಹೆಬ್ರಿ ತಾಲೂಕಿನಲ್ಲಿ ಎರಡು ಕ್ಷೇತ್ರಗಳಿವೆ. ಜಿ.ಪಂ.ನಂತೆ ತಾ.ಪಂ.ನಲ್ಲಿಯೂ ಕುಂದಾಪುರ ತಾಲೂಕು ಅತೀ ಹೆಚ್ಚು ತಾ.ಪಂ. ಕ್ಷೇತ್ರಗಳನ್ನೂ (20), ಹೆಬ್ರಿ ತಾಲೂಕು ಅತೀ ಕಡಿಮೆ ತಾ.ಪಂ. ಕ್ಷೇತ್ರಗಳನ್ನೂ (7) ಹೊಂದಿದೆ. ಈ ಹಿಂದೆ ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ, ಕಾರ್ಕಳ ಒಟ್ಟು ಮೂರು ತಾಲೂಕುಗಳಲ್ಲಿ 95 ಕ್ಷೇತ್ರಗಳಿದ್ದವು. ಬಳಿಕ ಏಳು ತಾಲೂಕುಗಳಿಗೆ ಇವುಗಳನ್ನು ಹಂಚಿ ಹಾಕಲಾಯಿತು.