ಉಡುಪಿ: ಸ್ವಾತಂತ್ರ್ಯ ಹೋರಾಟಗಾರರಾಗಿ, ಹರಿದಾಸರಾಗಿ, ಯಕ್ಷಗಾನದ ನವಯುಗದ ಪ್ರವರ್ತಕರಾದ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನವನ್ನು ಚಿತ್ರಿಸುವ, ದಿನೇಶ ಉಪ್ಪೂರ ವಿರಚಿತ “ದೊಡ್ಡ ಸಾಮಗರ ನಾಲ್ಮೊಗ” ಗ್ರಂಥ ಉಡುಪಿಯ ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಗೃಹದಲ್ಲಿ ಜೂನ್ 29ರಂದು ಮಧ್ಯಾಹ್ನ 3ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಇದನ್ನೂ ಓದಿ:Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್
ಕಾಸರಗೋಡಿನ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಪುಸ್ತಕವನ್ನು ಅನಾವರಣಗೊಳಿಸಲಿದ್ದಾರೆ. ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ. ಪ್ರಭಾಕರ ಜೋಶಿ ಮತ್ತು ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಸಾಮಗರ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಹೆ ಸಹಕುಲಾಧಿಪತಿ ಡಾ.ನಾರಾಯಣ ಸಭಾಹಿತ, ಮಣಿಪಾಲ ಯುನಿರ್ವಸಲ್ ಪ್ರೆಸ್ ನ ಪ್ರಧಾನ ಸಂಪಾದಕರಾದ ಪ್ರೊ.ನೀತಾ ಇನಾಂದಾರ್, ದ.ಕ. ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್ ಹಾಗೂ ಡಾ. ಕೊಳ್ಯೂರು ರಾಮಚಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಬಳಿಕ ಯಕ್ಷಗಾನ ತಾಳಮದ್ದಳೆ “ಶಲ್ಯ ಸಾರಥ್ಯ” ನಡೆಯಲಿದೆ. ಪ್ರಸಿದ್ಧ ಕಲಾವಿದರಾದ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯಕೃಷ್ಣ ಪದ್ಯಾಣ, ಪುತ್ತಿಗೆ ಕೌಶಿಕ್ ರಾವ್, ಡಾ.ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್ ಮತ್ತು ವಿ.ಹಿರಣ್ಯವೆಂಕಟೇಶ್ ಭಟ್ ತಾಳಮದ್ದಲೆ ನಡೆಸಿಕೊಡಲಿದ್ದಾರೆ ಎಂದು ಸಂಯೋಜಕ ಎಂ.ಎಲ್.ಸಾಮಗರು ತಿಳಿಸಿದ್ದಾರೆ.