ಕಾಪು: ಕೇರಳದಿಂದ ಮಲ್ಪೆಗೆ ಬೂತಾಯಿ ಸಹಿತ ತ್ಯಾಜ್ಯ ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಹಾರಿಕೊಂಡು ಬಂದು ಚರಂಡಿಗೆ ಬಿದ್ದ ಘಟನೆ ರವಿವಾರ ಬೆಳಗ್ಗೆ ಕಾಪುವಿನಲ್ಲಿ ಸಂಭವಿಸಿದೆ.
ರಾ. ಹೆ. 66ರ ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಬಳಿಯ ಡೈವರ್ಷನ್ ಬಳಿಯಿಂದ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸುಮಾರು 100 ಮೀಟರ್ ವರೆಗೆ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದ್ದು, ಬಳಿಕ ಪಕ್ಕದ ಚರಂಡಿಗೆ ಉರುಳಿ ಬಿದ್ದಿದೆ. ಅಪಘಾತದಿಂದ ಲಾರಿ ಚಾಲಕ ಅಖೀಲ್ ಮತ್ತು ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಾಣ ಹಾನಿ ಸಂಭವಿಸಿಲ್ಲವಾದರೂ ಲಾರಿಯ ಒಂದು ಪಾರ್ಶ್ವ ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿಯೊಳಗೆ ತುಂಬಿದ್ದ ಬಾಕ್ಸ್‌ಗಳು ಒಡೆದು ಮೀನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಹೆದ್ದಾರಿ ಕಾಮಗಾರಿಗೆ ಹಾನಿ: ಅಪಘಾತದ ಪರಿಣಾಮ ರಾ. ಹೆ. 66ರಲ್ಲಿ ನವಯುಗ ಕಂಪೆನಿ ನಡೆಸಿರುವ ಹೆದ್ದಾರಿ ಕಾಮಗಾರಿಗೆ ಹಾನಿ ಯಾಗಿದೆ. ಸುಮಾರು 90,000 ರೂ. ನಷ್ಟ ಉಂಟಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ರವಿವಾರದ ಕಾರಣ ತಪ್ಪಿದ ದುರಂತ: ಈ ಅಪಘಾತ ಸಂಭವಿಸಿದ ಪ್ರದೇಶದಲ್ಲೇ ಶಾಲೆ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಶಿಕ್ಷಕರು ರಸ್ತೆ ದಾಟಲು ಅವಕಾಶವಿದ್ದು, ರವಿವಾರವಾಗಿದ್ದರಿಂದ ಸಂಭವನೀಯ ಅವಘಡ ತಪ್ಪಿ ಹೋಗಿದೆ.
ಬೆಳಗ್ಗೆ 8.15ರಿಂದ 9 ಗಂಟೆಯ ನಡುವೆ ಇಲ್ಲಿ ಭಾರೀ ಜನ ಸಂಚಾರವಿರುತ್ತಿದ್ದು, ರವಿವಾರ ವಾಗಿದ್ದ ಕಾರಣ ಜನ ಸಂಚಾರ ವಿರಳವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.