ಉಡುಪಿ : ಕೋವಿಡ್ ಪರಿಹಾರ ಕಾರ್ಯಗಳಲ್ಲಿ ದೇಶದ ಮೂಲೆಮೂಲೆಗಳಲ್ಲಿ ಗುರುತಿಸಿಕೊಂಡಿರುವ ಇಂಡಿಯನ್ ಯುತ್ ಕಾಂಗ್ರೆಸ್ (ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರನ್ನು ದೆಹಲಿ ನಗರದ ಅಪರಾಧ ವಿಭಾಗದ ಪೊಲೀಸರು ವಿಚಾರಣೆ ನಡೆಸಿರುವುದನ್ನು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ದೀಪಕ್ ಕೋಟ್ಯಾನ್ ಖಂಡಿಸಿದ್ದಾರೆ.
ಕೋವಿಡ್ ಔಷಧಿಗಳ ಅಕ್ರಮ ಕಾನೂನುಬಾಹಿರ ವಿತರಣೆಯ ಆರೋಪದ ಹಿನ್ನಲೆಯಲ್ಲಿ ಐವೈಸಿ ಕಛೇರಿಗೆ ತೆರಳಿ ದೆಹಲಿ ಪೊಲೀಸರು ವಿಚಾರಣೆ ನಡೆಸಿರುವುದು ಪ್ರಶ್ನಾರ್ಹವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ನಿರಂತರ ಪ್ರತಿಭಟನೆ, ವಿಶೇಷವಾಗಿ ಲಾಕ್‌ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು ಹಾಗೂ ಜನ ಸಾಮಾನ್ಯರಿಗೆ ಯುವ ಕಾಂಗ್ರೆಸ್‌ನಿಂದ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ವಿಶೇಷವಾಗಿ ಕೆಲಸ ನಿರ್ವಹಣೆ ಮಾಡಿದ್ದ ಶ್ರೀನಿವಾಸ್ ರವರ ಕಾರ್ಯಕ್ಕೆ ಬಿಜೆಪಿ ಸರಕಾರ ತನಿಖೆಯ ನೇಪವೊಡ್ಡಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ : ಉತ್ತರ ಪ್ರದೇಶಕ್ಕೆ ಮತ್ತೆ ಬೀಗ : ಇನ್ನು 10 ದಿನ ಲಾಕ್ ಡೌನ್ ವಿಸ್ತರಣೆ
ಬಿಜೆಪಿ ಶಾಸಕರ ಬೆಡ್ ಬ್ಲಾಕಿಂಗ್ ದಂಧೆ ಬಯಲಾಗುತ್ತಿದ್ದಂತೆ ತಮ್ಮ ನಾಯಕರ ಭ್ರಷ್ಟತೆ ಮುಚ್ಚಿ ಹಾಕಲು ಸರಕಾರ ಕೇಂದ್ರದ ನೆರವು ಪಡೆದಂತಿದೆ. ತಲೆಬುಡವಿಲ್ಲದ ಲಾಕ್ಡೌನ್, ಹಸಿವಿನ ಹಾಹಾಕಾರ ಹಾಗೂ ಬೀದಿಗಳಲ್ಲಿ ಆಸ್ಪತ್ರೆ ಸೌಲಭ್ಯವಿಲ್ಲದೆ ಜನಸಾಮಾನ್ಯರು ಪ್ರಾಣ ಕಳೆದುಕೊಳ್ಳುತ್ತಿದ್ದು ತಮ್ಮ ಸರಕಾರ ವೈಫಲ್ಯಗಳ ಕುರಿತು ದಿಕ್ಕು ತಪ್ಪಿಸಲು ಶ್ರೀನಿವಾಸ್ ಮೇಲೆ ತನಿಖೆಯ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.
ಮೋದಿ ಸರಕಾರದ ಕುರಿತು ಧ್ವನಿ ಎತ್ತಿದ ಯುವ ನಾಯಕನ ಧ್ವನಿ ಅಡಗಿಸುವ ಪ್ರಯತ್ನ ನಿರರ್ಥಕ. ಅಷ್ಟೇಯಲ್ಲದೆ ನಿರಂತರ ಜನ ಸೇವೆ ಮಾಡುತ್ತಿರುವ ಶ್ರೀನಿವಾಸರ ಕಾರ್ಯ ದೇಶದೆಲ್ಲೆಡೆ ಚರ್ಚೆ ಆಗುತ್ತಿದ್ದು ಅವರನ್ನು ತನಿಖೆ ಮೂಲಕ ಜನಸೇವೆಗೆ ಅಡ್ಡಗಟ್ಟುವ ಸಂಪೂರ್ಣ ಪ್ರಯತ್ನ ಸರಕಾರ ನಡೆಸುತ್ತಿದೆ ಎಂದು ದೀಪಕ್ ಕೋಟ್ಯಾನ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.