ಮಣಿಪಾಲ: ಉಡುಪಿ ಜಿಲ್ಲೆಯಲ್ಲಿ 5 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಒಂದು ಗ್ರಾಮವನ್ನು ಗುರುತಿಸಿ ಅದನ್ನು ಸೋಲಾರ್ ಗ್ರಾಮವಾಗಿಸಲು 5 ಎಕ್ರೆ ಸರಕಾರಿ ಜಾಗವನ್ನು ಮೀಸಲಿಡುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜರಗಿದ ಪ್ರಧಾನ ಮಂತ್ರಿ “ಸೂರ್ಯ ಘರ್’ ಯೋಜನೆ ಮಾಹಿತಿ ಕಾರ್ಯಾಗಾರ ಮತ್ತು ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂಧನದ ಕೊರತೆಯಿಂದ ನಾವು ಜಲವಿದ್ಯುತ್ ಮತ್ತು ಉಷ್ಣ ವಿದ್ಯುತ್‌ಗಳ ಮೇಲೆ ಅವಲಂಬಿತರಾಗಿದ್ದೇವೆ. ಕೈಗಾರಿಕೆಗಳ ಬೆಳವಣಿಗೆ, ಆಧುನಿಕ ಜೀವನ ಶೈಲಿಯಿಂದ ವಿದ್ಯುತ್ ಬಳಕೆ ಹೆಚ್ಚುತ್ತಿದೆ. ಹಾಗಾಗಿ ಸುಲಭವಾಗಿ ದೊರೆಯುವ ಸೋಲಾರ್ ವಿದ್ಯುತ್ ಉತ್ಪತ್ತಿಯತ್ತ ಗಮನ ಹರಿಸಬೇಕು. ಪರಿಸರಕ್ಕೆ ಯಾವುದೇ ಹಾನಿ ಇಲ್ಲದ ಈ ಸಾಂಪ್ರದಾಯಿಕ ಹಸುರು ವಿದ್ಯುತ್ ಯೋಜನೆ ಸಹಕಾರಿ ಎಂದರು.
7,521 ಕೋ.ರೂ. ಯೋಜನೆ
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರತಿಯೊಂದು ಗ್ರಾಮಕ್ಕೂ ಬೆಳಕು ನೀಡುವ ಉದ್ದೇಶದಿಂದ ಕೇಂದ್ರ ಸರಕಾರ 7,521 ಕೋ. ರೂ.ಗಳ ಸೂರ್ಯ ಘರ್ ಯೋಜನೆಯನ್ನು ರೂಪಿಸಿದೆ. ಜನಸಾಮಾನ್ಯರಿಗೆ ಈ ಯೋಜನೆ ತಲುಪಿಸುವಲ್ಲಿ ಗ್ರಾ.ಪಂ. ಅಧಿಕಾರಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.ಶಾಸಕ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ., ಮೆಸ್ಕಾಂ ಮುಖ್ಯ ಎಂಜಿನಿಯರ್ ರವಿಕಾಂತ್ ಆರ್. ಕಾಮತ್ ಉಪಸ್ಥಿತರಿದ್ದರು. ಮೆಸ್ಕಾಂ ನಿರ್ದೇಶಕ ಮಹಾದೇವ ಸ್ವಾಮಿ ಪ್ರಸನ್ನ ಪ್ರಸ್ತಾವಿಸಿ, ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ದಿನೇಶ್ ಉಪಾಧ್ಯಾಯ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಪಾವಂಜೆ ನಿರೂಪಿಸಿ, ಲೆಕ್ಕಾಧಿಕಾರಿ ಗಿರೀಶ್ ವಂದಿಸಿದರು.
ವರ್ಚುವಲ್ ಸಂದೇಶ
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ವರ್ಚುವಲ್ ಮೂಲಕ ಸಂದೇಶ ನೀಡಿ, ಸೂರ್ಯಘರ್ ಯೋಜನೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಹೇಳಿದರು.