Advertisement

ಉಡುಪಿ ಜಿಲ್ಲೆ: ಸ್ವೀಪ್‌ ಚಟುವಟಿಕೆ ಆರಂಭ

03:56 AM Feb 15, 2019 | |

ಉಡುಪಿ: ಜಿಲ್ಲೆಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಭಾಗವಹಿಸುವಿಕೆ ಕಾರ್ಯಕ್ರಮ) ಸಮಿತಿ ವತಿಯಿಂದ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ, ಆ ಮೂಲಕ ಮತದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಜಿ.ಪಂ. ಸಿಇಒ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ. ಅವರು ಗುರುವಾರ ಜಿ.ಪಂ. ಸಭಾಂಗಣದಲ್ಲಿ ಸ್ವೀಪ್‌ ಕಾರ್ಯಕ್ರಮದ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಈ ಬಾರಿಯೂ ಸಹ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಮಿತಿಯ ಎಲ್ಲ ಸದಸ್ಯರು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಿದರು. ಈ ಬಾರಿಯ ಸ್ವೀಪ್‌ ಕಾರ್ಯಕ್ರಮದಲ್ಲಿ ವಿವಿ ಪ್ಯಾಟ್‌ ಯಂತ್ರದ ಬಗ್ಗೆ ಮತ್ತು ಇವಿಎಂ ಕಾರ್ಯ ನಿರ್ವಹಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.

ಎಲ್ಲರಲ್ಲೂ ಒಳಗೊಳ್ಳುವ, ಸುಗಮ, ನೈತಿಕ ಚುನಾವಣೆ, ಚುನಾವಣಾ ಆಯೋಗದ ಉದ್ದೇಶವಾಗಿದ್ದು, ಸಮಾಜದಲ್ಲಿನ ಲಿಂಗತ್ವ ಅಲ್ಪಸಂಖ್ಯಾಕರು, ಅಂಗವಿಕಲರು ಸೇರಿದಂತೆ ಎಲ್ಲ ವರ್ಗದ ಜನರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲ ರೀತಿಯ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುವಂತೆ ಸೂಚಿಸಿದರು. ಜಿಲ್ಲೆಗೆ 2 ದಿನಗಳಲ್ಲಿ ವಿವಿ ಪ್ಯಾಟ್‌ ಯಂತ್ರಗಳು ಬರಲಿದ್ದು, ಜಿಲ್ಲೆಯಾದ್ಯಂತ ಪ್ರಾತ್ಯಕ್ಷಿಕೆ ನೀಡುವಂತೆ  ತಿಳಿಸಿದರು.ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 ಹ್ಯಾಕ್‌ ಅಸಾಧ್ಯ
ಇವಿಎಂ ಮತ ಯಂತ್ರಗಳಿಗೆ ಕನೆಕ್ಟಿವಿಟಿ ಇಲ್ಲದಿರುವುದರಿಂದ ಯಾರೂ ಈ ಯಂತ್ರವನ್ನು ಹ್ಯಾಕ್‌ ಮಾಡಿ ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಯಂತ್ರದ ಮೂಲಕ ಪಾರದರ್ಶಕವಾಗಿ ಮತದಾನ ನಡೆಯುತ್ತದೆ. ಪ್ರತಿಯೊಬ್ಬರ ಮತವೂ ಸುರಕ್ಷಿತವಾಗಿರುತ್ತದೆ. ಇದುವರೆಗೆ ಇವಿಎಂ ಮತ ಯಂತ್ರದ ಬಗ್ಗೆ ದಾಖಲಾದ ದೂರುಗಳಲ್ಲಿ ಯಾವುದೇ ಯಂತ್ರಗಳು ದುರ್ಬಳಕೆಯಾದ ಬಗ್ಗೆ ಸಾಬೀತು ಆಗಿಲ್ಲ. ಅಲ್ಲದೆ ವಿವಿ ಪ್ಯಾಟ್‌ ಮೂಲಕ ಈಗ ತಾವು ಮತ ಹಾಕಿದ ಕುರಿತು ಸ್ವಯಂ ದೃಢಪಡಿಸಿಕೊಳ್ಳಲು ಸಹ ಸಾಧ್ಯವಿದೆ. ಆದ್ದರಿಂದ ಮತದಾರರು ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸಿಇಒ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next