Advertisement

ಸವಲತ್ತು ಒದಗಿಸುವುದಕ್ಕೆ ಆದ್ಯತೆ

01:21 PM Aug 06, 2018 | Team Udayavani |

ಉಡುಪಿ: ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿರುವುದು ಯೋಗಾ ಯೋಗ. ನೀವು ಸೋತು ನನ್ನನ್ನು ಗೆಲ್ಲಿಸಿದ್ದೀರಿ. ಜಿಲ್ಲೆಯ ಜನರಿಗೆ ಏನು ಬೇಕು ಎಂಬುದನ್ನು ತಿಳಿದು ಸರಕಾರದ ಸವಲತ್ತುಗಳನ್ನು ಒದಗಿಸಿಕೊಡುವುದು ನನ್ನ ಆದ್ಯತೆ ಎಂದು ಸಚಿವೆ ಡಾ| ಜಯಮಾಲಾ ಹೇಳಿದರು.

Advertisement

ಉಡುಪಿ ಜಿಲ್ಲೆಗೆ ರವಿವಾರ ಭೇಟಿ ನೀಡಿದ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಲ್ಲಿ ಈ ಹಿಂದೆ ಅನೇಕ ಜನನಾಯಕರು ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲ ನಾಯಕರು, ಜನರ ಅಭಿಪ್ರಾಯ ಪಡೆದು ಮುಂದುವರಿಯುತ್ತೇನೆ. ಒಗ್ಗಟ್ಟಿನಿಂದ ಒಳ್ಳೆಯ ಕೆಲಸ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದರು.

“ಮಾತೃಪೂರ್ಣ’ ರದ್ದಾಗದು
ಮಾತೃಪೂರ್ಣ ಯೋಜನೆ ರದ್ದಾಗದು. ಇದು ರಾಜ್ಯದ ಅತ್ಯಂತ ಯಶಸ್ವೀ ಯೋಜನೆ. ಮಂಗಳೂರು, ಉಡುಪಿ, ರಾಮನಗರ ಮತ್ತು ಕೊಡಗು ಹೊರತುಪಡಿಸಿ ಇತರ ಎಲ್ಲ ಜಿಲ್ಲೆಗಳಲ್ಲಿ ಯಶಸ್ವಿಯಾಗಿದೆ. ಮಲೆ ನಾಡು ಮತ್ತು ಕರಾವಳಿ ಭಾಗದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಬರಲು ಸಾಧ್ಯವಾಗದ ಗರ್ಭಿಣಿಯರ ಮನೆ ಯವರೇ ಬಂದು ಪೌಷ್ಟಿಕ ಆಹಾರ ಒಯ್ಯುತ್ತಿದ್ದಾರೆ. ಅಪೌಷ್ಟಿಕತೆ ದೂರ ಮಾಡುವಲ್ಲಿ ಈ ಯೋಜನೆ ನೆರವಾಗುತ್ತಿದೆ ಎಂದು ಉತ್ತರಿಸಿ ಹೇಳಿದರು.

ಸೋತು ಗೆಲ್ಲಿಸಿದರು
ಪಕ್ಷದ ಕಚೇರಿಯಲ್ಲಿ ಜರಗಿದ ಸಭೆಯಲ್ಲಿ ಮಾತನಾಡಿದ ಜಯಮಾಲಾ, ಜಿಲ್ಲೆಯ ಉಸ್ತುವಾರಿ ಸಚಿವ ಹುದ್ದೆ ಲಭಿಸಿದ್ದು ಯೋಗಾಯೋಗ. ವಿನಯ ಕುಮಾರ್‌ ಸೊರಕೆ ಈ ಚುನಾವಣೆಯಲ್ಲಿ ಗೆದ್ದಿದ್ದರೆ, ನಮ್ಮ ಸಮುದಾಯದ ನಾಯಕರು, ಸಾಗರದಲ್ಲಿ ಕಾಗೋಡು ತಿಮ್ಮಪ್ಪ, ಮಧು ಬಂಗಾರಪ್ಪ ಗೆದ್ದಿದ್ದರೆ ಅಥವಾ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಯಿಂದ ಗೆದ್ದವರು ಕಾಂಗ್ರೆಸ್‌ನಲ್ಲೇ ಇದ್ದು ಗೆದ್ದಿದ್ದರೆ ಖಂಡಿತ ನನಗೆ ಈ ಸ್ಥಾನ ಸಿಗುತ್ತಿರಲಿಲ್ಲ. ನೀವು ಸೋತು ನನ್ನನ್ನು ಗೆಲ್ಲಿಸಿದ್ದೀರಿ, ಹೆಣ್ಣುಮಕ್ಕಳಿಗೆ ಅವಕಾಶ ಕೊಟ್ಟಿದ್ದೀರಿ. ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಒಂದು ಸಮುದಾಯ ಮತ್ತು ಮಹಿಳೆಗೆ ಆದ್ಯತೆ ಬೇಕು ಎಂದಿರುವುದರಿಂದ ಈ ಅವಕಾಶ ದೊರೆತಿದೆ ಎಂದರು.

ಸ್ತ್ರೀಗೆ ಸಚಿವ ಸ್ಥಾನ: ಯಾಕೆ ಪ್ರಶ್ನೆ?
1992ರಿಂದ ನಾನು ಕಾಂಗ್ರೆಸ್‌ನಲ್ಲಿ ದುಡಿಯುತ್ತಿದ್ದೇನೆ. ನಾವು ನಾಲ್ವರು ಹೆಣ್ಮಕ್ಕಳು ಗೆದ್ದಿದ್ದೆವು. ಎಲ್ಲರೂ ಅರ್ಹ  ರಿದ್ದೆವು. ಆದರೆ 22 ಮಂದಿ ಪುರುಷರಿಗೆ ಸಚಿವ ಸ್ಥಾನ ಕೊಡುವಾಗ ಯಾರೂ ಪ್ರಶ್ನೆ ಮಾಡಿಲ್ಲ. ಆದರೆ ಹೆಣ್ಮಕ್ಕಳಿಗೆ ಕೊಡುವಾಗ ಯಾಕೆ ಪ್ರಶ್ನೆ? ನಾವು ಹೋರಾಟ ಮಾಡುತ್ತಿರಬೇಕಾ? ಎಂದು ಸಚಿವೆ ಡಾ| ಜಯಮಾಲಾ ಪ್ರಶ್ನಿಸಿದರು.

Advertisement

ವಾರಕ್ಕೆ  3 ದಿನ ಉಡುಪಿಯಲ್ಲಿ 
ನಾನು ವಾರಕ್ಕೆ 3 ದಿನ ಉಡುಪಿಯಲ್ಲಿ ಇರುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಜನರ ಹಿತ, ಜಿಲ್ಲೆಯ ಅಭಿವೃದ್ಧಿ, ಶಾಂತಿ, ನೆಮ್ಮದಿ ಮುಖ್ಯ. ಎಲ್ಲರ ಸಹಕಾರ ಬೇಕು. ಒಬ್ಬರಿಂದ ಈ ಜಗತ್ತಿನಲ್ಲಿ ಏನೂ ಆಗದು. ಎಲ್ಲರೂ ಒಂದಾಗಿ ಒಂದೇ ಸಂಕಲ್ಪ ತೊಡಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದೇ ಗೆಲ್ಲುತ್ತದೆ ಎಂದು ಜಯಮಾಲಾ ಹೇಳಿದರು. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳದ ಕುರಿತು ಪ್ರಶ್ನಿಸಿದಾಗ “ಪ್ರಕರಣಗಳು ಪೊಲೀಸ್‌ ತನಿಖೆ ಹಂತದಲ್ಲಿವೆ. ಈ ಸಂದರ್ಭದಲ್ಲಿ  ಮಾತನಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next