Advertisement

ಉಡುಪಿ ಜಿಲ್ಲೆ: 24ನೇ ವರ್ಷಕ್ಕೆ ಇಂದು ಪಾದಾರ್ಪಣೆ

09:26 PM Aug 24, 2020 | mahesh |

ಉಡುಪಿ: ಉಡುಪಿ ಜಿಲ್ಲೆ 24ನೇ ವರ್ಷಕ್ಕೆ ಆ. 25ರಂದು ಪಾದಾರ್ಪಣೆಯಾಗುತ್ತಿದೆ. 1997 ಆಗಸ್ಟ್‌ 25ರಂದು ಶ್ರೀಕೃಷ್ಣಜನ್ಮಾಷ್ಟಮಿಯ ಮರುದಿನ ವಿಟ್ಲಪಿಂಡಿಯ ಸಡಗರವಾಗಿತ್ತು. ಈಗ ಗಣೇಶ ಚತುರ್ಥಿಯ ಸಡಗರ ಮುಗಿದು ಮೂರು ದಿನಗಳಾಗುತ್ತಿವೆ. ಜಿಲ್ಲೆ ಉಗಮವಾಗಿ 14 ವರ್ಷಗಳ ಬಳಿಕ 2011ರ ಡಿಸೆಂಬರ್‌ 25ರಂದು ಮಣಿಪಾಲದಲ್ಲಿ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆಯಾದದ್ದು ಕ್ರಿಸ್ತಜಯಂತಿ ಸಡಗರದಲ್ಲಿ…

Advertisement

1997 ಆಗಸ್ಟ್‌ 25 ಇತಿಹಾಸದಲ್ಲಿ ಅಚ್ಚಳಿಯದ ದಿನ. ಅಂದು ಅಪರಾಹ್ನ ರಥಬೀದಿಯಲ್ಲಿ ವಿಟ್ಲಪಿಂಡಿ ಹಬ್ಬಕ್ಕೆ ಜನರು ಕಿಕ್ಕಿರಿದು ಸೇರಿದ್ದರೆ, ಪೂರ್ವಾಹ್ನ ಅಜ್ಜರಕಾಡು ಕ್ರೀಡಾಂಗಣದಲ್ಲಿ ಕಿಕ್ಕಿರಿದ ಜನಸ್ತೋಮ ಸೇರಿತ್ತು. ಆಗಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ಜಿಲ್ಲೆಯನ್ನು ಉದ್ಘಾಟಿಸಿ “ಆಡಳಿತಾತ್ಮಕ ಸುಧಾರಣೆ ದೃಷ್ಟಿಯಿಂದ ಹೊಸ ಜಿಲ್ಲೆಗಳನ್ನು ರಚಿಸುತ್ತಿದ್ದೇವೆ. ಇದರಿಂದ ಹೊಸ ಶಕೆ ಆರಂಭವಾಗಲಿ’ ಎಂದು ಹಾರೈಸಿದ್ದರು.

ಪ್ರಥಮ ಸೇವಕರು
ಆಗ ಕೆ.ಜಯಪ್ರಕಾಶ ಹೆಗ್ಡೆ ಅವಿಭಜಿತ ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಜಿಲ್ಲೆಯಾದ ಬಳಿಕ ಪ್ರಥಮ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿದ್ದೂ ಹೆಗ್ಡೆಯವರಿಗೆ. ಆಗ ಸಂಸದರಾಗಿ ಆಸ್ಕರ್‌ ಫೆರ್ನಾಂಡಿಸ್‌, ಶಾಸಕರಾಗಿ ಯು.ಆರ್‌.ಸಭಾಪತಿ, ವಿಧಾನ ಪರಿಷತ್‌ ಸದಸ್ಯರಾಗಿ ಡಾ| ವಿ.ಎಸ್‌. ಆಚಾರ್ಯ ಪಾಲ್ಗೊಂಡಿದ್ದರು. ಪ್ರಥಮ ಜಿಲ್ಲಾಧಿಕಾರಿಯಾಗಿ ಜಿ.ಕಲ್ಪನಾ, ಪ್ರಥಮ ಎಸ್ಪಿಯಾಗಿ ಸವಿತಾ ಹಂಡೆ, ಪ್ರಥಮ ಜಿ.ಪಂ. ಅಧ್ಯಕ್ಷರಾಗಿ ರೆಮಿಡಿಯಾ ಡಿ’ಸೋಜಾ, ಪ್ರಥಮ ಸಿಇಒ ಆಗಿ ಬಿ.ಎಚ್‌.ಅನಿಲ್‌ಕುಮಾರ್‌ ಸೇವೆ ಸಲ್ಲಿಸಿದ್ದರು.

ಜಿಲ್ಲಾ ಪುನರ್ವಿಂಗಡಣೆ
1985ರವರೆಗೆ ರಾಜ್ಯದಲ್ಲಿದ್ದದ್ದು ಕೇವಲ 19 ಜಿಲ್ಲೆ. 1983ರಲ್ಲಿ ಡಾ| ವಿ.ಎಸ್‌.ಆಚಾರ್ಯ ಉಡುಪಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದಾಗ ವಿಧಾನಸಭೆಯಲ್ಲಿ ಸಣ್ಣ ಸಣ್ಣ ಜಿಲ್ಲೆಗಳನ್ನು ಸೃಷ್ಟಿಸುವುದರಿಂದ ಆಗುವ ಬಗೆಗೆ ನಿರರ್ಗಳವಾಗಿ ಮಾತನಾಡಿದ್ದರು. ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಟಿ.ಎಂ. ಹುಂಡೇಕರ್‌ ನೇತೃತ್ವದಲ್ಲಿ ಜಿಲ್ಲಾ ಪುನರ್ವಿಂಗಡಣೆ ಸಮಿತಿಯನ್ನು ರಚಿಸಿದರು. ಹುಂಡೇಕರ್‌ ಅವರು ಬಾಗಲಕೋಟೆಯ ಹಿರಿಯ ವಕೀಲರು. ಇವರು ಸಲ್ಲಿಸಿದ ಮಧ್ಯಾಂತರ ವರದಿ ಯಂತೆ 1985ರಲ್ಲಿ ರಾಮಕೃಷ್ಣ ಹೆಗಡೆಯವರು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಾಗಿ ವಿಭಜನೆ ಮಾಡಿದರು. 1996ರಿಂದ 1999ರ ವರೆಗೆ ಜನತಾದಳ ಸರಕಾರವಿದ್ದಾಗ ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿಯಾಗಿದ್ದರು. ಹುಂಡೇಕರ್‌ ವರದಿ ಯಂತೆ 1997ರಲ್ಲಿ ಏಳು ಜಿಲ್ಲೆಗಳನ್ನು ಏಕಕಾಲದಲ್ಲಿ ಜೆ.ಎಚ್‌.ಪಟೇಲ್‌ ಉದ್ಘಾಟಿಸಿದರು. ಇದೊಂದು ಐತಿಹಾಸಿಕ ವರ್ಷ. ಆಗ ಏಳನೆಯ ಜಿಲ್ಲೆಯಾಗಿ ಹಾವೇರಿ ಉಗಮವಾದದ್ದು ಗದ್ದೀಗೌಡರ್‌ ಸಮಿತಿ ವರದಿಯಂತೆ. ಉಳಿದೆಲ್ಲವೂ ಹುಂಡೇಕರ್‌ ಸಮಿತಿ ವರದಿಯಂತೆ. ಇದೇ ಕಾರಣಕ್ಕಾಗಿ ಟಿ.ಎಂ.ಹುಂಡೇಕರ್‌ ಅವರನ್ನು ಉಡುಪಿ ಜಿಲ್ಲೆಯ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿ ಅವರನ್ನು ಜೆ.ಎಚ್‌. ಪಟೇಲ್‌ ಸಮ್ಮಾನಿಸಿದ್ದರು. ಹುಂಡೇಕರ್‌ ಮತ್ತು ಗದ್ದೀಗೌಡರ್‌ ಹಿರಿಯ ರಾಜಕಾರಣಿಗಳು.

ಹೊಸ ಜಿಲ್ಲೆಗೆ ಸಾಮಾನ್ಯ ಜನರ ಸಂಭ್ರಮ
ಬೈಂದೂರು, ಕೊಲ್ಲೂರು, ಶೀರೂರು, ಅಮಾಸೆಬೈಲು, ಮಾಳ ಕಡೆಯಿಂದ ಜಿಲ್ಲಾ ಕೇಂದ್ರಕ್ಕೆ ಒಂದು ಕೆಲಸಕ್ಕಾಗಿ ಹೋದರೆ ಅಂದು ರಾತ್ರಿಯೊಳಗೆ ವಾಪಸು ಮನೆಗೆ ಬರುವುದು ಕಷ್ಟ ಸಾಧ್ಯ. ಜನರ ಪರದಾಟದ ಜತೆಗೆ ಹಣಕಾಸು, ಸಮಯ ವ್ಯರ್ಥ ಹೀಗೆ ನಾನಾ ತರಹದ ಸಮಸ್ಯೆಗಳನ್ನು ಇದಿರಿಸಬೇಕಾಗಿತ್ತು. ಹೀಗಾಗಿ ಸಣ್ಣ ಸಣ್ಣ ಜಿಲ್ಲೆಗಳ ಸ್ಥಾಪನೆಯ ಕಲ್ಪನೆ ಮೂಡಿತು. ಸರಕಾರದ ಅನುದಾನಗಳು ಬರಬೇಕಾದರೆ ರಾಜ್ಯ ಕೇಂದ್ರದಿಂದ ಜಿಲ್ಲಾವಾರು ವಿಂಗಡನೆಯಾಗುತ್ತದೆ. ಕೋರ್ಟಿನ ಕೆಲಸಕ್ಕಾಗಿ ಮಂಗಳೂರಿಗೆ ಹೋಗುವುದೆಂದರೆ ಒಂಥರ ಶಿಕ್ಷೆಯೇ ಸರಿ ಎಂಬ ಕಾಲವಿತ್ತು. ಒಂದು ವೇಳೆ ಉಡುಪಿ ಜಿಲ್ಲೆಯಾಗಿ ರೂಪುಗೊಳ್ಳದೆ ಇರುತ್ತಿದ್ದರೆ ಈಗ ಕಾಣುತ್ತಿರುವ ಉಡುಪಿ ಆಗಲು ಸಾಧ್ಯವಿರಲಿಲ್ಲ.

Advertisement

ತಾಲೂಕು ಕೇಂದ್ರಗಳ ವಿಂಗಡನೆ ಹಿಂದೆಯೂ ಇದೇ ಕಲ್ಪನೆ ಇದೆ. ಇದು ಹೋಬಳಿ, ಗ್ರಾಮಗಳಿಗೂ ಅನ್ವಯ. ಯಾವುದೋ ಕಾಲದಲ್ಲಿ ಒಂದೊಂದು ಹೋಬಳಿಗೆ ಸುಮಾರು 30 ಗ್ರಾಮಗಳು ಇದ್ದದ್ದು ಈಗಲೂ ಹಾಗೆಯೇ ಮುಂದುವರಿಯುತ್ತಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಹೋಬಳಿ ಸ್ತರದ ರೆವೆನ್ಯೂ ಇನ್‌ಸ್ಪೆಕ್ಟರ್‌ರನ್ನು ಸಂಪರ್ಕಿಸಲು ಬಂದರೆ ಅವರು ಸುಲಭದಲ್ಲಿ ಸಿಗುವ ಸ್ಥಿತಿ ಈಗಲೂ ಇಲ್ಲ. ಅವರು ತಹಶೀಲ್ದಾರರ ಮೀಟಿಂಗ್‌, ಜಿಲ್ಲಾಧಿಕಾರಿಗಳ ಮೀಟಿಂಗ್‌, ಸಚಿವರ ಆಗಮನ, ಸ್ಥಳ ಪರಿಶೀಲನೆ ಎಂದು ಇರುವಾಗ ಜನಸಾಮಾನ್ಯರ ಕೆಲಸ ಸುಲಲಿತವಾಗಿ ಆಗುವುದು ಹೇಗೆ ಸಾಧ್ಯ? ಜಿಲ್ಲಾ ಮಟ್ಟದಲ್ಲಿ ಇದರ ಸಮಸ್ಯೆ ಇನ್ನಷ್ಟು ಗಂಭೀರವಾಗಿರುತ್ತದೆ, ಈಗಲೂ ಸಹ.

ಹೀಗಾಗಿ ಕುಂದಾಪುರ, ಕಾರ್ಕಳ ತಾಲೂಕಿನ ಮೂಲೆಮೂಲೆಯವರು ತಮ್ಮ ಇಡೀ ದಿನವನ್ನು ಜಿಲ್ಲಾ ಮಟ್ಟದ ಕೆಲಸಕ್ಕಾಗಿ ಮೀಸಲಿಡುವ ಅನಿವಾರ್ಯತೆಯಿಂದ ಬೇಸತ್ತು ಹೋಗಿದ್ದರು. ಉಡುಪಿ ಜಿಲ್ಲೆಯಾಗಿ ರೂಪುಗೊಂಡಾಗ ಹೆಚ್ಚು ಸಂತಸಪಟ್ಟವರು ಸಾಮಾನ್ಯ ಜನರು.

1799-1997: ಜಿಲ್ಲಾ ವಿಭಜನೆ
1799ರಲ್ಲಿ ಬ್ರಿಟಿಷ್‌ ಅಧಿಕಾರಿ ಸರ್‌ ಥಾಮಸ್‌ ಮನ್ರೊà ಪ್ರಥಮ ಜಿಲ್ಲಾಧಿಕಾರಿಯಾಗಿ ಮಂಗಳೂರಿಗೆ ಬಂದಾಗ ಕಾಸರಗೋಡು ತುದಿಯಿಂದ ಕಾರವಾರದವರೆಗೆ ಹರಡಿತ್ತು ಕೆನರಾ ಜಿಲ್ಲೆ. ಅನಂತರ 1862ರಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಎಂದು ವಿಭಜನೆ ಮಾಡಿದಾಗ ದ.ಕ. ಮದ್ರಾಸ್‌ ಪ್ರಾಂತ್ಯದ ಅಧೀನಕ್ಕೂ ಉ.ಕ. ಜಿಲ್ಲೆ ಮುಂಬೈ ಪ್ರಾಂತ್ಯದ ಅಧೀನಕ್ಕೂ ಹೋಯಿತು. ಕುಂದಾಪುರ ತಾಲೂಕು ಮೊದಲು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿದ್ದದ್ದು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಸೇರಿತು. 1956ರಲ್ಲಿ ರಾಜ್ಯ ಪುನರ್ವಿಂಗಡಣೆಯಾಗುವಾಗ ಕಾಸರಗೋಡು ದ.ಕ. ಜಿಲ್ಲೆಯ ವ್ಯಾಪ್ತಿಯಿಂದ ತಪ್ಪಿ ಕೇರಳಕ್ಕೆ ಹೋಯಿತು. 1997ರಲ್ಲಿ ಉಡುಪಿ ಜಿಲ್ಲೆ ದ.ಕ. ಜಿಲ್ಲೆಯಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ರೂಪುಗೊಂಡದ್ದು ಇತಿಹಾಸ. ಆಗ ಉಡುಪಿ, ಕುಂದಾಪುರ ಪೂರ್ಣ ತಾಲೂಕು ಮತ್ತು ಮೂಡುಬಿದಿರೆ ಭಾಗವನ್ನು ದ.ಕ. ಜಿಲ್ಲೆಗೆ ಸೇರಿಸಿ ಉಳಿದ ಕಾರ್ಕಳ ತಾಲೂಕನ್ನು ಉಡುಪಿ ಜಿಲ್ಲೆಗೆ ಸೇರಿಸಲಾಯಿತು.

ಸಣ್ಣ ಜಿಲ್ಲೆ ಎಂಬ ಆಕ್ಷೇಪ
ಸಚಿವ ಸಂಪುಟದಲ್ಲಿ ಹೊಸ ಜಿಲ್ಲೆಯ ಪ್ರಸ್ತಾವವಾದಾಗ ಸಹೋದ್ಯೋಗಿಗಳು ಸಣ್ಣ ಜಿಲ್ಲೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಭೌಗೋಳಿಕ ಅಳತೆಗೋಲಿನಲ್ಲಿ ಜಿಲ್ಲೆಯನ್ನು ಪುನರ್ವಿಂಗಡಿಸುವುದಕ್ಕಿಂತ ಜನಸಂಖ್ಯೆಯನ್ನು ನೋಡಿ ವಿಂಗಡಿಸಿ ಎಂದು ಹೇಳಿದ್ದೆ. ದೂರದೂರುಗಳಿಂದ ಜನರು ಮಂಗಳೂರಿಗೆ ಹೋಗಿ ಬರುವುದು ಬಹಳ ಕಷ್ಟ ಎಂದು ಪ್ರತಿಪಾದಿಸಿದೆ. ಮುಖ್ಯಮಂತ್ರಿಯಾಗಿದ್ದ ಜೆ.ಎಚ್‌.ಪಟೇಲ್‌ ಒಪ್ಪಿ ಹೊಸ ಜಿಲ್ಲೆಗಳನ್ನು ಘೋಷಿಸಿದರು ಎನ್ನುತ್ತಾರೆ ಪ್ರಥಮ ಜಿಲ್ಲಾ ಉಸ್ತುವಾರಿ ಸಚಿವ ಜಯಪ್ರಕಾಶ್‌ ಹೆಗ್ಡೆಯವರು. ಆಗಲೂ ಇಡೀ ಜಿಲ್ಲೆಗೆ ಒಬ್ಬರು ಸಹಾಯಕ ಕಮಿಷನರ್‌, ಒಬ್ಬರು ಉಪ ಅರಣ್ಯ ಸಂರಕ್ಷಣಾಧಿಕಾರಿ ಇದ್ದರು. ಈಗಲೂ ಹಾಗೆಯೇ ಇದೆ. ಈಗ ತಾಲೂಕುಗಳು ಜಾಸ್ತಿಯಾದಂತೆ ಜಿಲ್ಲೆಗೆ ಮೂವರು ಸಹಾಯಕ ಕಮಿಷನರ್‌, ಮೂವರು ಉಪ ಅರಣ್ಯ ಸಂರಕ್ಷಣಾಧಿಕಾರಿ ಬೇಕು. ಉದ್ಯೋಗ ಸೃಷ್ಟಿಯಾಗಬೇಕಾದರೆ ಹೂಡಿಕೆಯಾಗಬೇಕು. ಇದು ಆಗಬೇಕಾದರೆ ಸುಲಲಿತವಾಗಿ ಬಂದು ಹೋಗಲು ವಿಮಾನ ನಿಲ್ದಾಣದ ಅಗತ್ಯವಿದೆ. ಉಡುಪಿ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಅನುಕೂಲವಾಗಿ ಒಂದು ವಿಮಾನ ನಿಲ್ದಾಣವನ್ನು ಸಂಸದ ರಾಘವೇಂದ್ರ ಅವರು ಪ್ರಯತ್ನಿಸಿದರೆ ಉತ್ತಮ. ಹೆಜಮಾಡಿ, ಗಂಗೊಳ್ಳಿ, ಕೋಡಿಕನ್ಯಾಣದ ಬಂದರಿನ ಕೆಲಸ ಶೀಘ್ರಗತಿಯಲ್ಲಿ ಆಗಬೇಕಾಗಿದೆ. ಜಿಲ್ಲೆಯ ರಜತ ಮಹೋತ್ಸವ ನಡೆಯುವುದರೊಳಗಾದರೂ ಈ ಎಲ್ಲ ಜನಹಿತ ಕೆಲಸಗಳು ನಡೆಯುವಂತಾಗಲಿ ಎಂದು ಹಾರೈಸುತ್ತಾರೆ ಹೆಗ್ಡೆಯವರು.

ತಾಲೂಕು ಪುನರ್ವಿಂಗಡಣೆ
1956ರಲ್ಲಿ ಅಖಂಡ ಕರ್ನಾಟಕ ಉದಯವಾಗುವಾಗ ಇದ್ದ ತಾಲೂಕು 175. ಅನಂತರ ಹೊಸದಾಗಿ ಆದ ತಾಲೂಕು ಒಂದೇ ಒಂದು. ಅದು ಬೆಂಗಳೂರು ದಕ್ಷಿಣ. ಹಿಂದೆ ಜಗದೀಶ ಶೆಟ್ಟರ್‌ ಅವರ ಸರಕಾರವಿದ್ದಾಗ 43 ತಾಲೂಕುಗಳ ಘೋಷಣೆಯಾಗಿದ್ದರೆ, ಸಿದ್ದರಾಮಯ್ಯ ಅವರ ಸರಕಾರ 49 ಹೊಸ ತಾಲೂಕುಗಳನ್ನು ಘೋಷಿಸಿತು. ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಪು, ಬ್ರಹ್ಮಾವರ, ಬೈಂದೂರು ಸೇರಿತು, ಬಳಿಕ ಹೆಬ್ರಿಯೂ ತಾಲೂಕಾಯಿತು. ಉಡುಪಿ ಜಿಲ್ಲೆಯ ಉದಯವಾಗುವಾಗ ಮೂರು ತಾಲೂಕುಗಳಿದ್ದರೆ ಈಗ ಏಳು ತಾಲೂಕುಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next