Advertisement

ಉಡುಪಿ ಜಿಲ್ಲಾ ವಿಂಶತಿ ಸಂಭ್ರಮ: ಕೌಂಟ್‌ಡೌನ್‌

05:45 AM Aug 19, 2017 | |

ಉಡುಪಿ: ಉಡುಪಿ ಜಿಲ್ಲೆಗೆ 20ನೆಯ ವರ್ಷದ ಸಡಗರ….  1997 ಆಗಸ್ಟ್‌ 25 ರಂದು ಶ್ರೀಕೃಷ್ಣಜನ್ಮಾಷ್ಟಮಿಯ ಮರು ದಿನ ವಿಟ್ಲಪಿಂಡಿಯ ಸಡಗರವಾಗಿತ್ತು. ಈಗ ಆಗಸ್ಟ್‌ 25 ರಂದು ಗಣೇಶ ಚತುರ್ಥಿಯ ಸಡಗರ ಇದೆ. ಜಿಲ್ಲೆ ಉಗಮವಾಗಿ 14 ವರ್ಷಗಳ ಬಳಿಕ 2011 ರಲ್ಲಿ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆಯಾದದ್ದು ಕ್ರಿಸ್ತಜಯಂತಿ ಸಡಗರದಲ್ಲಿ…

Advertisement

1997 ಆಗಸ್ಟ್‌ 25 ಇತಿಹಾಸದಲ್ಲಿ ಅಚ್ಚಳಿಯದ ದಿನ. ಅಜ್ಜರಕಾಡು ಕ್ರೀಡಾಂಗಣದಲ್ಲಿ ಕಿಕ್ಕಿರಿದ ಜನಸ್ತೋಮ. ಆಗಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ಜಿಲ್ಲೆಯನ್ನು ಉದ್ಘಾಟಿಸಿ “ಆಡಳಿತಾತ್ಮಕ ಸುಧಾರಣೆ ದೃಷ್ಟಿಯಿಂದ ಹೊಸ ಜಿಲ್ಲೆಗಳನ್ನು ರಚಿಸುತ್ತಿದ್ದೇವೆ. ಇದರಿಂದ ಹೊಸ ಶಕೆ ಆರಂಭವಾಗಲಿ’ ಎಂದು ಹಾರೈಸಿದ್ದರು. 

ಪ್ರಥಮ ಸೇವಕರು
ಆಗ ಕೆ.ಜಯಪ್ರಕಾಶ ಹೆಗ್ಡೆ ಅವಿಭಜಿತ ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಸಂಸದರಾಗಿ ಆಸ್ಕರ್‌ ಫೆರ್ನಾಂಡಿಸ್‌, ಶಾಸಕರಾಗಿ ಯು.ಆರ್‌.ಸಭಾಪತಿ, ವಿಧಾನ ಪರಿಷತ್‌ ಸದಸ್ಯರಾಗಿ ಡಾ|ವಿ.ಎಸ್‌.ಆಚಾರ್ಯ ಪಾಲ್ಗೊಂಡಿದ್ದರು. ಪ್ರಥಮ ಜಿಲ್ಲಾಧಿಕಾರಿಯಾಗಿ ಜಿ.ಕಲ್ಪನಾ, ಪ್ರಥಮ ಎಸ್ಪಿಯಾಗಿ ಸವಿತಾ ಹಂಡೆ, ಪ್ರಥಮ ಜಿ.ಪಂ. ಅಧ್ಯಕ್ಷರಾಗಿ ರೆಮಿಡಿಯಾ ಡಿ’ಸೋಜ, ಪ್ರಥಮ ಸಿಇಒ ಆಗಿ ಬಿ.ಎಚ್‌.ಅನಿಲ್‌ಕುಮಾರ್‌ ಸೇವೆ ಸಲ್ಲಿಸಿದ್ದರು. 

ಜಿಲ್ಲಾ ಪುನರ್ವಿಂಗಡನೆ
1985ರವರೆಗೆ ರಾಜ್ಯದಲ್ಲಿದ್ದದ್ದು ಕೇವಲ 19 ಜಿಲ್ಲೆ. 1983ರಲ್ಲಿ ಡಾ|ವಿ.ಎಸ್‌.ಆಚಾರ್ಯ ಉಡುಪಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದಾಗ ವಿಧಾನಸಭೆಯಲ್ಲಿ ಸಣ್ಣ ಸಣ್ಣ ಜಿಲ್ಲೆಗಳನ್ನು ಸೃಷ್ಟಿಸುವುದರಿಂದ ಆಗುವ ಬಗೆಗೆ ನಿರರ್ಗಳವಾಗಿ ಮಾತನಾಡಿದ್ದು ಕಡತದಲ್ಲಿದೆ. ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಟಿ.ಎಂ.ಹುಂಡೇಕರ್‌ ನೇತೃತ್ವದಲ್ಲಿ ಜಿಲ್ಲಾ ಪುನರ್ವಿಂಗಡಣಾ ಸಮಿತಿಯನ್ನು ರಚಿಸಿದರು. 

ಹುಂಡೇಕರ್‌ ಅವರು ಬಾಗಲ ಕೋಟೆಯ ಹಿರಿಯ ವಕೀಲರು. ಇವರು ಸಲ್ಲಿಸಿದ ಮಧ್ಯಾಂತರ ವರದಿಯಂತೆ 1985ರಲ್ಲಿ ರಾಮಕೃಷ್ಣ ಹೆಗಡೆಯವರು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಾಗಿ ವಿಭಜನೆ ಮಾಡಿದರು. 1996 ರಿಂದ 1999 ರವರೆಗೆ ಜನತಾದಳ ಸರಕಾರವಿದ್ದಾಗ ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾಗಿದ್ದರು. ಹುಂಡೇಕರ್‌ ವರದಿಯಂತೆ 1997ರಲ್ಲಿ ಏಳು ಜಿಲ್ಲೆಗಳನ್ನು ಏಕಕಾಲದಲ್ಲಿ ಜೆ.ಎಚ್‌.ಪಟೇಲ್‌ ಉದ್ಘಾಟಿಸಿದರು. ಇದೊಂದು ಐತಿಹಾಸಿಕ ವರ್ಷವೆನ್ನಬಹುದು. ಆಗ ಏಳನೆಯ ಜಿಲ್ಲೆಯಾಗಿ ಹಾವೇರಿ ಉಗಮವಾದದ್ದು ಗದ್ದೀಗೌಡರ್‌ ಸಮಿತಿ ವರದಿಯಂತೆ. ಉಳಿದೆಲ್ಲವೂ ಹುಂಡೇಕರ್‌ ಸಮಿತಿ ವರದಿಯಂತೆ. ಇದೇ ಕಾರಣಕ್ಕಾಗಿ ಟಿ.ಎಂ.ಹುಂಡೇಕರ್‌ ಅವರನ್ನು ಉಡುಪಿ ಜಿಲ್ಲೆಯ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿ ಅವರನ್ನು ಜೆ.ಎಚ್‌.ಪಟೇಲ್‌ ಸಮ್ಮಾನಿಸಿದ್ದರು. ಹುಂಡೇಕರ್‌ ಮತ್ತು ಗದ್ದೀಗೌಡರ್‌ ಹಿರಿಯ ರಾಜಕಾರಣಿಗಳು.
  
ತಾಲೂಕು ಪುನರ್ವಿಂಗಡನೆ
1956ರಲ್ಲಿ ಅಖಂಡ ಕರ್ನಾಟಕ ಉದಯವಾಗುವಾಗ ಇದ್ದ ತಾಲೂಕು 175. ಅನಂತರ ಹೊಸದಾಗಿ ಆದ ತಾಲೂಕು ಒಂದೇ ಒಂದು. ಅದು ಬೆಂಗಳೂರು ದಕ್ಷಿಣ. ಹಿಂದೆ ಜಗದೀಶ ಶೆಟ್ಟರ್‌ ಅವರ ಸರಕಾರವಿದ್ದಾಗ 43 ತಾಲೂಕುಗಳ ಘೋಷಣೆಯಾಗಿದ್ದರೆ, ಈಗ ಸಿದ್ದರಾಮಯ್ಯನವರ ಸರಕಾರ 49 ಹೊಸ ತಾಲೂಕುಗಳನ್ನು ಘೋಷಿಸಿದೆ. ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಪು, ಬ್ರಹ್ಮಾವರ, ಬೈಂದೂರು ಸೇರಿವೆ. 

Advertisement

1862-1997: ಜಿಲ್ಲಾ ವಿಭಜನೆ
1860 ರ ಮೊದಲು ಕಾಸರಗೋಡಿನಿಂದ ಕಾರವಾರದವರೆಗೆ ಒಂದೇ ಜಿಲ್ಲೆ ಆಗಿತ್ತು. ಆಗ ಕರೆಯುತ್ತಿದ್ದುದು ಕೆನರಾ ಜಿಲ್ಲೆ ಎಂದು. ಅನಂತರ 1862ರಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಎಂದು ವಿಭಜನೆ ಮಾಡಿದಾಗ ದ.ಕ. ಮದ್ರಾಸ್‌ ಪ್ರಾಂತ್ಯದ ಅಧೀನಕ್ಕೂ ಉ.ಕ. ಜಿಲ್ಲೆ ಮುಂಬೈ ಪ್ರಾಂತ್ಯದ ಅಧೀನಕ್ಕೂ ಹೋಯಿತು. ಕುಂದಾಪುರ ತಾಲೂಕು ಮೊದಲು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿದ್ದದ್ದು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಸೇರಿತು. 1956 ರಲ್ಲಿ ರಾಜ್ಯ ಪುನರ್ವಿಂಗಡನೆಯಾಗುವಾಗ ಕಾಸರಗೋಡು ದ.ಕ. ಜಿಲ್ಲೆಯ ವ್ಯಾಪ್ತಿಯಿಂದ ತಪ್ಪಿ ಕೇರಳಕ್ಕೆ ಹೋಯಿತು. 1997 ರಲ್ಲಿ ಉಡುಪಿ ಜಿಲ್ಲೆ ದ.ಕ. ಜಿಲ್ಲೆಯಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ರೂಪುಗೊಂಡದ್ದು ಇತಿಹಾಸ. ಆಗ ಉಡುಪಿ, ಕುಂದಾಪುರ ಪೂರ್ಣ ತಾಲೂಕು ಮತ್ತು ಮೂಡಬಿದಿರೆ ಭಾಗವನ್ನು ದ.ಕ. ಜಿಲ್ಲೆಗೆ ಸೇರಿಸಿ ಉಳಿದ ಕಾರ್ಕಳ ತಾಲೂಕನ್ನು ಉಡುಪಿ ಜಿಲ್ಲೆಗೆ ಸೇರಿಸಲಾಯಿತು.

– ಮಟಪಾಡಿ ಕುಮಾರಸ್ವಾಮಿ 

Advertisement

Udayavani is now on Telegram. Click here to join our channel and stay updated with the latest news.

Next