Advertisement

ಉಡುಪಿ ಜಿಲ್ಲೆ: ಮತ್ತೆ 3 ಕೈಗಾರಿಕಾ ವಲಯ

01:31 AM Sep 11, 2019 | mahesh |

ಉಡುಪಿ: ಜಿಲ್ಲೆಯಲ್ಲಿ ಕೈಗಾರಿಕಾ ಚಟುವಟಿಕೆ ಹೆಚ್ಚಿಸುವ ಉದ್ದೇಶದಿಂದ ಮತ್ತೆ ಮೂರು ಕೈಗಾರಿಕಾ ವಲಯಗಳಿಗೆ ಪ್ರಸ್ತಾವನೆ ಸಿದ್ಧವಾಗಿದೆ. ಜತೆಗೆ ಜಿಲ್ಲಾ ಪ್ರಯೋಗಾಲಯ ಕೂಡ ಮಣಿಪಾಲದಲ್ಲಿ ಶೀಘ್ರ ಆರಂಭಗೊಳ್ಳುವ ನಿರೀಕ್ಷೆ ಇದ್ದು, ಕೈಗಾರಿಕೋದ್ಯಮಿಗಳಲ್ಲಿ ಉತ್ಸಾಹ ಮೂಡಿಸಿದೆ.

Advertisement

ಪ್ರಸ್ತುತ ಮಣಿಪಾಲ, ನಂದಿ ಕೂರು, ಬೆಳಪುವಿನಲ್ಲಿ ಕೈಗಾರಿಕಾ
ವಲಯಗಳಿವೆ. ಇತ್ತೀಚೆಗೆ ಕಾರ್ಕಳಮಿಯಾರಿನಲ್ಲಿ ಆರಂಭಿಸಲಾಗಿದೆ. ಉಪ್ಪೂರು, ಬೈಂದೂರು, ತೆಕ್ಕಟ್ಟೆಯಲ್ಲಿ ಜಮೀನು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೆ 11 ಸಾವಿರಕ್ಕೂ ಅಧಿಕ ಗೃಹೋದ್ಯಮಗಳು, ಸಣ್ಣ, ಅತಿ ಸಣ್ಣ ಕೈಗಾರಿಕೆಗಳು ನೋಂದಣಿಯಾಗಿದ್ದು, ಸುಮಾರು 7 ಸಾವಿರ ಕೈಗಾರಿಕೆ ಮತ್ತು ಕಾರ್ಖಾನೆಗಳಿವೆ. ಈ ಪೈಕಿ 480 ಕೈಗಾರಿಕಾ ಕಾಯ್ದೆಯಡಿ ನೋಂದಣಿಯಾಗಿವೆ. ಇವುಗಳಲ್ಲಿ 17 ಅಪಾಯಕಾರಿ ಮತ್ತು 1 ಅತೀ ಅಪಾಯಕಾರಿ.

ಲ್ಯಾಬ್‌ ನಿರೀಕ್ಷೆ
ಕೈಗಾರಿಕೆಗಳಿಂದ ಹೊರಬರುವ ನೀರು, ಕೊಳವೆ ಬಾವಿಗಳ ನೀರು ಸೇರಿದಂತೆ ನೀರಿನ ಶುದ್ಧತೆಯನ್ನು ಪರೀಕ್ಷಿಸಲು ಪರಿಸರ ಇಲಾಖೆಗೆ ಅನುಕೂಲವಾಗುವ ಜಿಲ್ಲಾ ಪ್ರಯೋಗಾಲಯಕ್ಕೆ ಈಗಾಗಲೇ ಪರಿಸರ ನಿಯಂತ್ರಣ ಮಂಡಳಿಯ ರಾಜ್ಯ ಮಟ್ಟದ ಪ್ರಯೋಗಾಲಯ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಪ್ರತಿನಿಧಿಗಳು ಮಣಿಪಾಲದ ಕೈಗಾರಿಕಾ ವಲಯದಲ್ಲಿರುವ ಪರಿಸರ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಗತ್ಯವಿರುವ 200 ಚದರ ಮೀಟರ್‌ ಸ್ಥಳಾವಕಾಶ ಮತ್ತು ಇತರ ಸೌಕರ್ಯಗಳು ಅಲ್ಲಿ ಲಭ್ಯವಿವೆ. ಹಾಗಾಗಿ ಸುಮಾರು 1 ಕೋ.ರೂ. ವೆಚ್ಚದಲ್ಲಿ ವಾಟರ್‌ ಕ್ವಾಲಿಟಿ ಲ್ಯಾಬ್‌ ಅನುಷ್ಠಾನಗೊಳ್ಳಲಿದೆ ಎಂಬ ವಿಶ್ವಾಸ ಅಧಿಕಾರಿಗಳದ್ದು.

Advertisement

ಶೀಘ್ರ ವರದಿ
ಇಂಥ ಲ್ಯಾಬ್‌ ಜಿಲ್ಲೆಯಲ್ಲಿಯೇ ಇದ್ದರೆ ಅನುಕೂಲ. ಪ್ರಸ್ತುತ ನೀರನ್ನು ಪರೀಕ್ಷಿಸಲು ಬೈಕಂಪಾಡಿಯ ಲ್ಯಾಬ್‌ ಅವಲಂಬಿಸಬೇಕಾಗಿದೆ ಎನ್ನುತ್ತಾರೆ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್‌. ವಾಟರ್‌ ಕ್ವಾಲಿಟಿ ಲ್ಯಾಬ್‌ ಕೇಳಲಾಗಿದೆ. ಅದರೊಂದಿಗೆ ಏರ್‌ ಕ್ವಾಲಿಟಿ ಲ್ಯಾಬ್‌ ಕೊಟ್ಟರೆ ಇನ್ನೂ ಅನುಕಾಲವಾಗಲಿದೆ. ಈಗ ತಿಂಗಳಿಗೆ 100ರಿಂದ 150ರಷ್ಟು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ.

ಆದರೆ ವರದಿ ಬರುವಾಗ ವಿಳಂಬವಾಗುತ್ತಿದೆ. ನಮ್ಮಲ್ಲೇ ಲ್ಯಾಬ್‌ ಇದ್ದರೆ ಶೀಘ್ರ ವರದಿ ಪಡೆದು ಶೀಘ್ರ ಕ್ರಮ ಕೈಗೊಳ್ಳಲು ಸಾಧ್ಯ ಎನ್ನುತ್ತಾರವರು.

ಕಾಯಿದೆ ಸರಳೀಕರಣ
ಕೈಗಾರಿಕೆಗಳಿಗೆ ಸಂಬಂಧಿಸಿದ ಕೆಲವು ನಿಯಮಗಳ ಸರಳೀಕರಣ ಪ್ರಕ್ರಿಯೆ ನಡೆಯುತ್ತಿದೆ. ಉಡುಪಿಯ 4 ಕೈಗಾರಿಕಾ ವಲಯಗಳ ಜತೆಗೆ ಉಪ್ಪೂರಿನಲ್ಲಿ 150 ಎಕರೆ ಜಾಗ ಗುರುತಿಸಲಾಗಿದೆ. ತೆಕ್ಕಟ್ಟೆಯಲ್ಲಿ ಖಾಸಗಿಯವರು 300 ಎಕರೆ ಜಾಗ ನೀಡುವ ಭರವಸೆ ನೀಡಿದ್ದಾರೆ. ಬೈಂದೂರಿನಲ್ಲಿ 70 ಎಕರೆ ಲಭ್ಯವಾಗಲಿದೆ.
– ರಮಾನಂದ ನಾಯಕ್‌
ಜಂಟಿ ನಿರ್ದೇಶಕರು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಉಡುಪಿ

ಖಾಸಗಿ ವಲಯ ಮಾಡಿ
ಜಿಲ್ಲೆಯಲ್ಲಿ ಒಂದೆರಡು ಬೃಹತ್‌ ಕೈಗಾರಿಕೆಗಳಿಗೆ ಮಾತ್ರ ಬೇಕಾಬಿಟ್ಟಿ ಜಾಗ ನೀಡಲಾಗಿದೆ. ವ್ಯವಸ್ಥಿತ ಕೈಗಾರಿಕಾ ವಲಯದ ಕೊರತೆ ಇದೆ. ಒಂದೋ ಸರಕಾರ ಸೂಕ್ತ ಜಾಗ, ಮೂಲಸೌಕರ್ಯ ಒದಗಿಸಬೇಕು. ಇಲ್ಲವಾದರೆ ಖಾಸಗಿ ಕೈಗಾರಿಕಾ ವಲಯ ಸ್ಥಾಪನೆಗೆ ಒಪ್ಪಿಗೆ ನೀಡಬೇಕು.
– ಶ್ರೀ ಕೃಷ್ಣ ರಾವ್‌ ಕೊಡಂಚ
ಅಧ್ಯಕ್ಷರು ಚೇಂಬರ್ ಆಫ್ ಕಾಮರ್ ಆ್ಯಂಡ್‌ ಇಂಡಸ್ಟ್ರೀಸ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next