Advertisement

ಉಡುಪಿ ಜಿಲ್ಲೆ: 8 ಲಕ್ಷ ಕೋವಿಡ್‌ ಮುಂಜಾಗ್ರತೆ ಡೋಸ್‌ ಲಸಿಕೆ ನೀಡಿಕೆ ಗುರಿ: ಜಿಲ್ಲಾಧಿಕಾರಿ

11:46 PM Jul 18, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌-19 ಸಂಭಾವ್ಯ ನಾಲ್ಕನೇ ಅಲೆಯಿಂದ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 18ರಿಂದ 59 ವರ್ಷದೊಳಗಿನ 8 ಲಕ್ಷ ಸಾರ್ವಜನಿಕರಿಗೆ ಸೆ.30ರೊಳಗೆ ಕೋವಿಡ್‌-19 ಮುಂಜಾಗ್ರತೆ ಡೋಸ್‌ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಹೇಳಿದರು.

Advertisement

ಜಿಲ್ಲಾ ಆಯುಷ್‌ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಉಚಿತ ಮುನ್ನೆಚ್ಚರಿಕೆ ಡೋಸ್‌ ನೀಡುವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಮತ್ತು 2ನೇ ಡೋಸ್‌ ಲಸಿಕೆ ನೀಡುವಲ್ಲಿ ಶೇ. 100 ಸಾಧನೆಯಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್‌ ನೀಡಲಾಗುತ್ತಿದ್ದು, ಎರಡನೇ ಡೋಸ್‌ ಪಡೆದು 6 ತಿಂಗಳು ದಾಟಿದ ಸಾರ್ವಜನಿಕರು ತಮ್ಮ ಸಮೀಪದ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್‌ ಪಡೆಯಬಹುದು ಎಂದರು.

ಸಹಕಾರ ಅಗತ್ಯ
ಸಾರ್ವಜನಿಕರು ಕೋವಿಡ್‌ 19 ಪ್ರಥಮ ಮತ್ತು 2ನೇ ಡೋಸ್‌ನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದಿದ್ದ ಕಾರಣ ಕೋವಿಡ್‌ 3ನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆ ದಾಖಲಾತಿ ಪ್ರಕರಣಗಳು ಕಂಡುಬರಲಿಲ್ಲ. ಸಂಭಾವ್ಯ ನಾಲ್ಕನೇ ಅಲೆಯಿಂದ ಉಂಟಾಗಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಪ್ಪದೇ ಮುನ್ನೆಚ್ಚರಿಕೆ ಡೋಸ್‌ ಪಡೆಯಬೇಕು. ಜಿಲ್ಲೆಯಲ್ಲಿ ಕೋವಿಡ್‌ ಲಸಿಕಾಕರಣದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ವಿವಿಧ ಸಂಘ-ಸಂಸ್ಥೆಗಳು ಹಾಗೂ ನಾಗರಿಕರು ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡಿದ್ದು , ಮುನ್ನೆಚ್ಚರಿಕೆ ಡೋಸ್‌ ನೀಡಿಕೆಯಲ್ಲಿ ಶೇ.100 ಪ್ರಗತಿ ಸಾಧಿಸುವಲ್ಲಿ ಕೂಡ ಅಗತ್ಯ ಸಹಕಾರ ನೀಡುವಂತೆ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ನಾಗಭೂಷಣ ಉಡುಪ ಸ್ವಾಗತಿಸಿದರು. ಜಿಲ್ಲಾ ಸರ್ಜನ್‌ ಡಾ| ಮಧುಸೂದನ ನಾಯಕ್‌ ವಂದಿಸಿದರು.

Advertisement

ಜಿಲ್ಲಾ ಕೋವಿಡ್‌ ಲಸಿಕಾ ಉಸ್ತುವಾರಿ ಡಾ| ಎಂ.ಜಿ. ರಾಮ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ| ಕೀರ್ತಿನಾಥ ಬಲ್ಲಾಳ್‌, ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಸತೀಶ್‌ ಆಚಾರ್ಯ ಉಪಸ್ಥಿತರಿದ್ದರು.

ಡೋಸ್‌ ಪಡೆಯದಿದ್ದರೂ ಸಂದೇಶ
ಉಡುಪಿ: ಜಿಲ್ಲಾದ್ಯಂತ ಕೊರೊನಾ ಮುನ್ನೆಚ್ಚರಿಕೆ ಲಸಿಕೆ ನೀಡುವ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಿದೆ. ಈ ಮಧ್ಯೆ ಮುನ್ನೆಚ್ಚರಿಕೆ ಡೋಸ್‌ ಪಡೆಯದೇ ಇರುವ ಅನೇಕರಿಗೆ ಮುನ್ನೆಚ್ಚರಿಕೆ ಡೋಸ್‌ ಪಡೆದಿರುವ ಬಗ್ಗೆ ಸಂದೇಶ ಬರುತ್ತಿದೆ.

ಕೊರೊನಾ ಲಸಿಕೆ ಮೊದಲ ಮತ್ತು 2ನೇ ಡೋಸ್‌ ಪಡೆಯುವ ಸಂದರ್ಭದಲ್ಲೂ ಹಲವರಿಗೆ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಈಗ ಮುನ್ನೆಚ್ಚರಿಕೆ ಡೋಸ್‌ ಪಡೆಯುವ ಮೊದಲೇ ಪಡೆದಿರುವ ಬಗ್ಗೆ ಸಂದೇಶ ಬರುತ್ತಿದೆ. ಅಲ್ಲದೆ, ಕೋವಿನ್‌ ವೆಬ್‌ಸೈಟ್‌ ಮೂಲಕ ಡೋಸ್‌ ಪಡೆದಿ ರುವ ಬಗ್ಗೆ ಪ್ರಮಾಣಪತ್ರ ಡೌನ್‌ಲೋಡ್‌ ಮಾಡಿದಾಗಲೂ ಮೂರು ಡೋಸ್‌ ಆಗಿದೆ ಎಂದೇ ಬರುತ್ತಿದೆ. ಇದರಿಂದ ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಸಾಧ್ಯವೇ? ಇಲ್ಲವೇ? ಎಂಬ ಭಯ ಅನೇಕರಲ್ಲಿದೆ.

ನಾನಿನ್ನೂ ಮುನ್ನೆಚ್ಚರಿಕೆ ಡೋಸ್‌ ಪಡೆದುಕೊಂಡಿಲ್ಲ. ಆದರೆ ಮುನ್ನೆಚ್ಚರಿಕೆ ಡೋಸ್‌ ಪಡೆದುಕೊಂಡಿದ್ದೀರಿ ಎಂದು ಸಂದೇಶ ಬಂದಿದೆ. ಅಲ್ಲದೆ, ಕೋವಿನ್‌ ವೆಬ್‌ಸೈಟ್‌ ಮೂಲಕ ಪಡೆದ ಪ್ರಮಾಣ ಪತ್ರದಲ್ಲೂ ಮೂರು ಡೋಸ್‌ ಪಡೆಯಲಾಗಿದೆ ಎಂದಿದೆ. ಕೆಲವೇ ದಿನದಲ್ಲಿ ಮುನ್ನೆಚ್ಚರಿಕೆ ಡೋಸ್‌ ಪಡೆಯಬೇಕು ಎಂದಿದ್ದೇನೆ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಕಟಪಾಡಿಯ ಬಿ.ಕೆ.ಪ್ರಭು ಅವರು ಹೇಳಿಕೊಂಡಿದ್ದಾರೆ.
ಸಮಸ್ಯೆಗೆ ಪರಿಹಾರವಿದೆ

ಈ ರೀತಿ ಅನೇಕರಿಗೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಕೋವಿನ್‌ ವೆಬ್‌ಸೈಟ್‌ನಲ್ಲೂ ತಿದ್ದುಪಡಿಗೆ ಅವಕಾಶವಿದೆ. ತಿದ್ದುಪಡಿ ಮಾಡಿಕೊಳ್ಳಬಹುದು ಅಥವಾ ಲಸಿಕೆ ಕೇಂದ್ರಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಸಿಬಂದಿಗೆ ಸಮಸ್ಯೆ ಬಗ್ಗೆ ಸರಿಯಾದ ವಿವರ ನೀಡಿದರೆ, ಖಂಡಿತವಾಗಿಯೂ ಸಹಕಾರ ನೀಡುತ್ತಾರೆ ಎಂದು ಉಡುಪಿ ಜಿಲ್ಲಾ ಲಸಿಕೆ ಅಧಿಕಾರಿ ಡಾ| ಎಂ.ಜಿ.ರಾಮ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next