ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಅಧೀನದಲ್ಲಿದ್ದ ದಾನಿ ದಿ| ಹಾಜಿ ಅಬ್ದುಲ್ಲಾ ಸಾಹೇಬ್ ಅವರು ದಾನ ಮಾಡಿದ್ದರೆನ್ನಲಾದ ಮಹಿಳಾ ಮತ್ತು ಮಕ್ಕಳ ವಿಭಾಗ ಮತ್ತು ಅದರ ಜಾಗವನ್ನು ಸರಕಾರಕ್ಕೆ ದಾನ ಮಾಡಿರುವುದರಲ್ಲಿ ನಿಯಮ ಉಲ್ಲಂಘೀಸಿದ್ದಾರೆ ಎಂದು ಆರೋಪಿಸಿ ಅಬ್ದುಲ್ಲಾ ಸಾಹೇಬ್ ಅವರ ಸಂಬಂಧಿಕರು ಮತ್ತು ಸಾರ್ವಜನಿಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಡುಪಿಯ 3ನೇ ಎಡಿಶನಲ್ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.
ದೂರುದಾರರ ಪರ ವಕೀಲರು ಹಾಗೂ ಪ್ರತಿವಾದಿ ವಕೀಲರು ವಾದ-ಪ್ರತಿವಾದ ಮಂಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮ್‌ಪ್ರಶಾಂತ್ ವಿ.ಎಸ್. ಅವರು ಮಂಗಳವಾರ ಆದೇಶ ಪ್ರಕಟಿಸಿದ್ದಾರೆ.
ಜಾಗವು ಹಾಜಿ ಅಬ್ದುಲ್ಲಾ ಸಾಹೇಬ್ ಅವರಿಗೆ ಸೇರಿದ್ದು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಹಾಗೂ ಸರಕಾರ ಮಾಡಿಕೊಂಡಿರುವ ಒಪ್ಪಂದದಲ್ಲಿ ಯಾವುದೇ ನಿಯಮ ಮೀರಿಲ್ಲ. ವ್ಯಾಜ್ಯ ಮುಂದುವರಿಸಲು ಸೂಕ್ತವಾದ ಕಾರಣಗಳಿಲ್ಲದ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದು ವಕೀಲರು ಹೇಳಿದ್ದಾರೆ.
“ವಜಾ ಪ್ರಶ್ನಿಸಿ ಮೇಲ್ಮನವಿ’
ನಮ್ಮ ಪರವಾಗಿ ಪೂರಕ ದಾಖಲೆಗಳಿದ್ದ ಕಾರಣ ಈ ರೀತಿಯಾಗಿ ತೀರ್ಪು ಬರಬಹುದೆಂದು ನಾವು ನಿರೀಕ್ಷಿಸಿಯೇ ಇರಲಿಲ್ಲ. ನ್ಯಾಯಾಧೀಶರ ಆದೇಶಕ್ಕೆ ತಲೆಬಾಗುತ್ತೇವೆ. ಅಡಿಶನಲ್ ಸಿವಿಲ್ ಕೋರ್ಟ್ ನೀಡಿದ ಆದೇಶವನ್ನು ಸೀನಿಯರ್ ಡಿವಿಶನ್‌ಗೆ ಮೇಲ್ಮನವಿ ಸಲ್ಲಿಸಿ ಪ್ರಶ್ನಿಸಲಿದ್ದೇವೆ.
ಅಗತ್ಯ ಬಿದ್ದಲ್ಲಿ ಹೈಕೋರ್ಟಿಗೂ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ದೂರುದಾರರು ತಿಳಿಸಿದ್ದಾರೆ.