ಕೋಟ: ಅಭಿವೃದ್ಧಿ ಸಮಸ್ಯೆಗಳಿಗೆ ಸಂಬಂಧಿಸಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಕೋಡಿಕನ್ಯಾಣಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಗುರುವಾರ ಅಧಿಕಾರಿಗಳೊಂದಿಗೆ ನೇರ ಭೇಟಿ ನೀಡಿ ಚರ್ಚಿಸಿ ಮನವೊಲಿಸಲು ಯತ್ನಿಸಿದರು.
ಸಮಸ್ಯೆಗಳ ಪರಿಹಾರಕ್ಕೆ ಚುನಾವಣೆ ಬಹಿಷ್ಕಾರ ಪರಿಹಾರವಲ್ಲ. ಚುನಾವಣೆ ಬಹಿಷ್ಕರಿಸಿದರೆ ಮುಂದೆ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ತೊಂದರೆಯಾಗಲಿದೆ. ನಿಮ್ಮ ಸಮಸ್ಯೆ ಬಗೆಹರಿಸಲು ಈಗಾಗಲೇ ಪ್ರಕ್ರಿಯೆಗಳು ನಡೆಯುತ್ತಿದ್ದು ಜನಪ್ರತಿನಿಧಿಗಳು ಕೂಡ ಶ್ರಮಿಸುತ್ತಿದ್ದಾರೆ. ಆದ್ದರಿಂದ ದಯವಿಟ್ಟು ತಮ್ಮ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
ಗ್ರಾಮಸ್ಥರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ, ಹಕ್ಕು ಪತ್ರ ಸಮಸ್ಯೆ, ಜೆಟ್ಟಿ ಕಾಮಗಾರಿ ಸ್ಥಗಿತ, ಕೃಷಿಗೆ ಉಪ್ಪು ನೀರಿನ ಸಮಸ್ಯೆ, ಜನಪ್ರತಿನಿಧಿಗಳ ಅಸಹಕಾರ ಮುಂತಾದ ಕಾರಣಗಳಿಗಾಗಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದೇವೆ. ಜೆಟ್ಟಿ ಹೊಳೆತ್ತಲು ಎಲ್ಲಾ ಕಡೆಗಳಲ್ಲಿ ಸಾಧ್ಯವಾದರೂ ಕೋಡಿಕನ್ಯಾಣದಲ್ಲಿ ಕೆಲಸವಾಗಿಲ್ಲ. ಉಪ್ಪು ನೀರಿನ ತಡೆಗೆ ವ್ಯವಸ್ಥೆ ಇಲ್ಲದೆ ಪ್ರತಿ ವರ್ಷ ನಮ್ಮ ಕೃಷಿ ಹಾನಿಯಾಗುತ್ತಿದೆ. ಹತ್ತಾರು ವರ್ಷಗಳ ನಮ್ಮ ಸಮಸ್ಯೆಗೆ ಸರಕಾರ ಪೂರಕವಾಗಿ ಸ್ಪಂದನೆ ನೀಡದಿರುವುದರಿಂದ ಈ ಬಾರಿ ಚುನಾವಣೆ ಬಹಿಷ್ಕರಿಸುತ್ತೇವೆ. ನಮ್ಮ ಸಮಸ್ಯೆಗಳನ್ನು ಆಲಿಸಬೇಕಾದ ಜನಪ್ರತಿನಿಧಿಗಳು ಮೌನವಾಗಿರುವುದು ಖಂಡನೀಯ ಎಂದರು.
ಸಿ.ಆರ್.ಝಡ್. ನಿಯಮಗಳನ್ನು ಪರಿಶೀಲಿಸಿ ಹಕ್ಕುಪತ್ರ ನೀಡುವಂತೆ ಈ ಹಿಂದೆ ಸರಕಾರ ಆದೇಶದಲ್ಲಿ ತಿಳಿಸಿದ್ದರಿಂದ ಹಿನ್ನಡೆಯಾಗಿದೆ. ನಿಮ್ಮ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪೊರಂಬೋಕು ಶೀಷಿಕೆಯನ್ನು ಕಡಿತಗೊಳಿಸುವ ಸಲುವಾಗಿ ಸರಕಾರಕ್ಕೆ ಮನವಿ ಸಲ್ಲಿಸುವ ಕಾರ್ಯ 15 ದಿನಗಳಲ್ಲಿ ನಡೆಯಲಿದೆ. ಸರ್ವೆ ನಂಬರ್ ಸೃಷ್ಟಿಸುವ ಸಲುವಾಗಿ ಸರ್ವೆ ನಡೆಸಿದ್ದು ಹೊಸ ನಂಬರ್ ನೀಡಿ ಹಕ್ಕುಪತ್ರ ವಿತರಿಸಲಾಗುತ್ತದೆ. ಕೃಷಿಭೂಮಿಗೆ ಹಕ್ಕುಪತ್ರ ನೀಡಲು ಸಿ.ಆರ್.ಝಡ್.ನಲ್ಲಿ ಯಾವುದೇ ಸಮಸ್ಯೆ ಇಲ್ಲ ಈ ಬಗ್ಗೆ ಕ್ರಮೈಗೊಳ್ಳಲಾಗುವುದು. ಹಕ್ಕು ಪತ್ರಕ್ಕಾಗಿ ಪಾವತಿಸಬೇಕಾದ ಮೊತ್ತವನ್ನು ಕಡಿತಗೊಳಿಸಲು ಸೂಚಿಸಿದ್ದು ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲಾಗಿದೆ. ಜೆಟ್ಟಿ ಸಮಸ್ಯೆಗೆ ಸಂಬಂಧಿಸಿ ತಜ್ಞರೊಂದಿಗೆ ಮಾತುಕತೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಹೀಗೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಚುನಾವಣೆ ಬಹಿಷ್ಕಾರದ ನಿರ್ಧಾರದಿಂದ ಹೊರಬಂದು ಜನಪ್ರತಿನಿಧಿಗಳ ಆಯ್ಕೆಯಾಗುವಂತೆ ಸಹಕರಿಸಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಮ್ಮ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯಲಿ. ಮರು ಚುನಾವಣೆಯಲ್ಲಿ ನಾವೆಲ್ಲ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ನಮ್ಮ ಈ ಸಮಸ್ಯೆ ಹತ್ತಾರು ವರ್ಷಗಳಿಂದ ಇದ್ದು ಐದಾರು ಜಿಲ್ಲಾಧಿಕಾರಿಗಳು ಬದಲಾವಣೆಯಾಗಿದ್ದಾರೆ. ಆದರೆ ನಿಮ್ಮಷ್ಟು ಕಾಳಜಿಯಿಂದ, ಸ್ನೇಹಯುತವಾಗಿ ಸಮಸ್ಯೆಯನ್ನು ಆಲಿಸಿದ ಅಧಿಕಾರಿಗಳು ತೀರ ಅಪರೂಪ. ಹೀಗಾಗಿ ತಾವು ನಮ್ಮ ಸಮಸ್ಯೆಯನ್ನು ಪರಿಹರಿಸವ ನಿಟ್ಟಿನಲ್ಲಿ ಪ್ರಾಮಾಣಿಕ ಕ್ರಮಗಳನ್ನು ಕೈಗೊಂಡಿರುವಿರಿ ಎನ್ನುವ ಸಂಪೂರ್ಣ ಭರವಸೆ ಇದೆ. ತಹಶೀಲ್ದಾರ್ ಕಿರಣ್ ಗೋರಯ್ಯ ಅವರು ಕೂಡ ಉತ್ತಮವಾಗಿ ಸ್ಪಂದಿಸಿದ್ದಾರೆ. ಆದರೆ ಈ ಚುನಾವಣೆ ಬಹಿಷ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಈ ಬಗ್ಗೆ ಇನ್ನೊಮ್ಮೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕು. ಸ್ವಯಂಪ್ರೇರಿತವಾಗಿ ನಾಮಪತ್ರ ಸಲ್ಲಿಸಲು ಮುಂದಾದವರಿಗೆ ಅಡ್ಡಿಪಡಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಕುಂದಾಪುರ ಸಹಾಯಕ ಉಪವಿಭಾಗಧಿಕಾರಿ ರಾಜು, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಕೋಟ ಕಂದಾಯ ಅಧಿಕಾರಿ ರಾಜು, ಸಿ.ಆರ್.ಝಡ್. ಅಧಿಕಾರಿ ಸವಿತಾ ಖಾದ್ರಿ, ಮೀನುಗಾರಿಕೆ ಇಲಾಖೆಯ ದಿವಾಕರ ಖಾರ್ವಿ ಉಪಸ್ಥಿತರಿದ್ದರು.