ಉಡುಪಿ: ಸ್ವತ್ಛತೆಯ ದೃಷ್ಟಿಯಲ್ಲಿ ಉಡುಪಿ ಜಿಲ್ಲೆಗೆ ವಿಶೇಷ ಸ್ಥಾನ ಮಾನಗಳಿವೆ. ಇದಕ್ಕೆ ಇಲ್ಲಿನ ಜನರ ಕಾಳಜಿ, ಸ್ವತ್ಛತೆಯ ಬಗ್ಗೆ ಸರಕಾರ ಮತ್ತು ಸರಕಾರೇತರ ಸಂಘ- ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಪೂರಕವಾಗಿ ಸಾರ್ವಜನಿಕ ಜನಸ್ಪಂದನೆ ಕಾರಣವಾಗಿದೆ. ಈ ಅನುಕೂಲಕರ ಪರಿಸ್ಥಿತಿಯನ್ನು ಬಳಸಿಕೊಂಡು ಜಿಲ್ಲೆಗೆ ದೇಶದಲ್ಲಿಯೇ ಹೆಸರು ತರುವಂತೆ ಮುಂದೆಯೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಗಳಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಗುರುವಾರ ಮಣಿಪಾಲ ಈಶ್ವರನಗರ ವಾರ್ಡ್‌ನ ಡಾ| ಸುರೇಶ್ ರಮಣ ಮಯ್ಯ ಅವರ ಮನೆಯಲ್ಲಿ ಈಶ್ವರನಗರ ರೆಸಿಡೆನ್ಶಿಯಲ್ ವೆಲ್ ಫೇರ್ ಅಸೋಸಿಯೇಷನ್, ಸ್ನೇಹಸಂಗಮ ಈಶ್ವರ ನಗರ, ರೋಟರಿ ಸಂಸ್ಥೆಗಳಾದ ಉಡುಪಿ ರಾಯಲ್, ಉಡುಪಿ ಮಣಿಪಾಲ, ಈಶ್ವರನಗರ ವಾರ್ಡ್ ಸಮಿತಿ, ಉಡುಪಿ ನಗರಸಭೆ, ಸಾಹಸ್ ಉಡುಪಿ, ಸಹಕಾರ ಭಾರತಿ ಇವರೆಲ್ಲರ ಜಂಟಿ ಆಶ್ರಯದಲ್ಲಿ ನೂರು ಮನೆಗಳಿಗೆ ಹಸಿ ತ್ಯಾಜ್ಯ ವಿಲೇವಾರಿ ಘಟಕ ಪೈಪ್ ಕಾಂಪೋಸ್ಟಿಂಗ್‌ನ್ನು ಅಳವಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ನಗರಸಭೆಯ ಆರೋಗ್ಯಾಧಿಕಾರಿ ಕರುಣಾಕರ್, ಸಾಹಸ್ ಸಂಸ್ಥೆಯ ಜಾನ್ ರತ್ನಾಕರ್ ಈ ಕಾರ್ಯಕ್ರಮವನ್ನು ಸಂಘಟಿಸಿದರು. ಡಾ| ಸುರೇಶ ರಮಣ್ ಮಯ್ಯ, ಹರೀಶ್ ಜಿ. ಕಲ್ಮಾಡಿ, ದಿನೇಶ್ ಹೆಗ್ಡೆ ಅತ್ರಾಡಿ, ಗಿರೀಶ್ ಭೋವಿ, ಡಾ| ಎಚ್.ಜಿ. ಗೌರಿ, ಎಚ್.ಎನ್.ಎಸ್.ರಾವ್, ಡಾ| ಯಜ್ಞೆàಶ್ ಶರ್ಮ, ಸುಧಾಕರ್‌ನಾಯಕ್, ರಾಜವರ್ಮ ಅರಿಗ, ದಿನೇಶ್ ಹೆಗ್ಡೆ ಅತ್ರಾಡಿ, ಶ್ರೀನಿವಾಸ್ ರಾವ್, ಎಚ್.ಕೆ.ವಿ.ರಾವ್, ರಾಘವೇಂದ್ರ ಕಾಮತ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಮೀಳಾ ನಾಯಕ್, ಸತೀಶ್ ಸಾಲಿಯಾನ್, ಸಾಲಿಕೇರಿ ಬ್ರಹ್ಮಲಿಂಗ ದುರ್ಗಾ
ಪರಮೇಶ್ವರಿ ದೇಗುಲದ ಆಡಳಿತ ಮೊಕ್ತೇ ಸರ ಬಾಲಕೃಷ್ಣ ಶೆಟ್ಟಿಗಾರ್, ನಾಗ ರಾಜ್ ಕೆ., ಸ್ವತ್ಛಮ್ ಕಾರ್ಯಕರ್ತರು ಹಾಜರಿದ್ದರು.
ಪೈಪ್ ಕಾಂಪೋಸ್ಟಿಂಗ್ ಅಳವಡಿಕೆಗೆ 50 ಶೇ. ಸಬ್ಸಿಡಿ
ಜಿಲ್ಲೆಯ ಎಲ್ಲ ಭಾಗಗಳಲ್ಲೂ ಪೈಪ್ ಕಾಂಪೋಸ್ಟಿಂಗ್ ಇತ್ತೀಚೆಗೆ ಪ್ರಚಲಿತವಾಗುತ್ತಿದ್ದು ಹಸಿ ತ್ಯಾಜ್ಯಗಳನ್ನು ಮನೆಯಲ್ಲಿಯೇ ವಿಲೇವಾರಿ ಮಾಡುವ ಉದ್ದೇಶದಿಂದ ಇದಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಉಡುಪಿ ನಗರ ಭಾಗದಲ್ಲಿ ಪೈಪ್ ಕಾಂಪೋಸ್ಟಿಂಗ್ ಅಳವಡಿಸುವ ಪ್ರತಿಯೊಬ್ಬರಿಗೂ 50 ಶೇ. ಸಬ್ಸಿಡಿ ನೀಡುವ ಯೋಜನೆಯನ್ನು ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ.
ನಮ್ಮ ಉದ್ದೇಶ ಒಟ್ಟಾರೆಯಾಗಿ ಹಸಿ ತ್ಯಾಜ್ಯಗಳನ್ನು ನೂರು ಶೇ. ಮನೆಯಿಂದಲೇ ವಿಲೇವಾರಿಗೊಳಿಸಿ ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆಯ ಮೇಲಿನ ಒತ್ತಡಗಳನ್ನು ಕಡಿಮೆ ಗೊಳಿಸುವುದು ಮತ್ತು ಇದಕ್ಕೆ ಸಾರ್ವಜನಿಕರ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರ ಆವಶ್ಯಕ.
-ಜಿ. ಜಗದೀಶ್, ಜಿಲ್ಲಾಧಿಕಾರಿ