Advertisement

ಉಡುಪಿಯಲ್ಲಿ ಕೋವಿಡ್ ರೋಗಿ ಸಾವು: ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳುವುದೇನು?

08:22 AM May 17, 2020 | Hari Prasad |

ಉಡುಪಿ: ಮುಂಬಯಿಂದ ಕುಂದಾಪುರಕ್ಕೆ ಬಂದಿದ್ದ ವ್ಯಕ್ತಿ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ಆ ವ್ಯಕ್ತಿ ಕೋವಿಡ್ ಸೋಂಕಿತರಾಗಿದ್ದರು ಎಂಬ ವಿಚಾರದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಉಡುಪಿ ಜಿಲ್ಲೆಯ ಜನತೆಗೆ ಮಹತ್ವದ ವಿಚಾರಗಳನ್ನು ತಿಳಿಸಿದ್ದಾರೆ.

Advertisement

ಕುಂದಾಪುರಕ್ಕೆ ಬಂದಿದ್ದ ಈ ವ್ಯಕ್ತಿ ಜಿಲ್ಲಾಡಳಿತದ ನಿಗಾದಲ್ಲಿ ಕ್ವಾರೆಂಟೈನ್ ನಲ್ಲಿದ್ದರು. ಅವರಿಗೆ ಹೃದಯಾಘಾತ ಸಂಭವಿಸಿದ ತಕ್ಷಣ ಅವರನ್ನು ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಅಲ್ಲಿ ಅವರ ದೇಹಸ್ಥಿತಿ ಗಂಭೀರವಾಗಿದ್ದುದರಿಂದ ಜಿಲ್ಲಾಡಳಿತದ ನಿಗಾದಲ್ಲೇ ಅವರನ್ನು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಿದ್ದರು.

ಆದರೆ ಶಸ್ತ್ರಚಿಕಿತ್ಸೆಯ ಬಳಿಕ ಆ ವ್ಯಕ್ತಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದಕ್ಕೂ ಮುಂಚೆ ಅವರು ಮುಂಬಯಿಂದ ಬಂದಿದ್ದ ಕಾರಣ ಅವರಿಗೆ ಕೋವಿಡ್ ಪರೀಕ್ಷೆ ಮಾಡಲೇಬೇಕಿದ್ದುದರಿಂದ ಆ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು ಮತ್ತು ಅದರಲ್ಲಿ ಅವರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು.

ಇದೀಗ ಈ ವ್ಯಕ್ತಿಯ ಜೊತೆ ಪ್ರಯಾಣ ಮಾಡಿರುವಂತಹ ಐವರನ್ನು ಕ್ವಾರೆಂಟೈನ್ ಮಾಡಲಾಗಿದೆ ಮತ್ತು ಕೆ.ಎಂ.ಸಿ.ಯಲ್ಲಿ ಮೂವರು ಸುರಕ್ಷತಾ ಕ್ರಮಗಳಿಲ್ಲದೆ ಇವರ ಸಂಪರ್ಕಕ್ಕೆ ಬಂದಿರುವುದರಿಂದ ಅವರನ್ನೂ ಸಹ ಇದೀಗ ಕ್ವಾರೆಂಟೈನ್ ಮಾಡಲಾಗಿದೆ.

Advertisement

ಈ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರ ಸಹಿತ ಉಳಿದವರೆಲ್ಲರೂ ಸುರಕ್ಷಿತ ಸಾಧನಗಳನ್ನು ಧರಿಸಿಯೇ ವೈದ್ಯಕೀಯ ಪ್ರಕ್ರಿಯೆ ನಡೆಸಿದ್ದಾರೆ. ಇದಕ್ಕೂ ಮೊದಲು ಕುಂದಾಪುರ ತಾಲೂಕು ಆಸ್ಪತ್ರೆಯಲ್ಲೂ ಸಹ ಇವರನ್ನು ಪರೀಕ್ಷಿಸಿದ ವೈದ್ಯರ ಸಹಿತ ಎಲ್ಲರೂ ಪಿಪಿಇ ಕಿಟ್ ಧರಿಸಿಯೇ ತಮ್ಮ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.

ಇದೀಗ ಸಾವನ್ನಪ್ಪಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 57 ವ್ಯಕ್ತಿಗಳನ್ನು ಗುರುತಿಸಲಾಗಿದೆ. ಇವರೆಲ್ಲರೂ ಕುಂದಾಪುರದಲ್ಲಿ ಇವರ ಜೊತೆ ಕ್ವಾರೆಂಟೈನ್ ಗೊಳಗಾದವರೇ ಆಗಿದ್ದಾರೆ. ಇನ್ನು ಸೆಕಂಡರಿ ಕಾಂಟ್ಯಾಕ್ಟ್ ಎಂದು 38 ಜನರನ್ನು ಗುರುತಿಸಲಾಗಿದೆ.

ಮೃತ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ಕೋವಿಡ್ ಸೋಂಕಿಗೊಳಗಾಗಿ ಮೃತಪಟ್ಟ ವ್ಯಕ್ತಿಗಳನ್ನು ಅಂತ್ಯಸಂಸ್ಕಾರ ಮಾಡಬೇಕಾಗಿರುವ ಮಾರ್ಗಸೂಚಿಗಳಿಗನುಗುಣವಾಗಿಯೇ ನಡೆಸಲು ಸೂಚನೆಯನ್ನು ನೀಡಲಾಗಿದ್ದು ಆ ಪ್ರಕಾರವೇ ನಡೆಯಲಿದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next