ಮಂಗಳೂರು : ಜಿಲ್ಲೆಯ ವಿಕಲಚೇತನರ ಸಮಸ್ಯೆಗಳನ್ನು ಬಗೆಹರಿಸಲು ಪ್ರತೀ ತಿಂಗಳ 3ನೇ ಸೋಮವಾರ ಸಭೆಯನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅವರು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಅವರಿಗೆ ಸೂಚಿಸಿದ್ದಾರೆ.
ಮೇ 16ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರ ಕುಂದುಕೊರತೆ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ವಿಕಲಚೇತನರ ಸಮಸ್ಯೆಗಳನ್ನು ಪರಿಹರಿಸುವ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಬೇಕು. ಸಭೆಯಲ್ಲಿ ಕುಂದು ಕೊರತೆ ಅಥವಾ ಅಹವಾಲುಗಳು ಇತ್ಯರ್ಥವಾಗಬೇಕು, ಜಿಲ್ಲೆಯ ಎಲ್ಲ ತಾಲೂಕುಗಳ ವಿ.ಆರ್.ಡಬ್ಲ್ಯು. ಮತ್ತು ಎಂ.ಆರ್.ಡಬ್ಲ್ಯು.ಗಳು ಆಯಾ ತಾಲೂಕಿನ ಸಿ.ಡಿ.ಪಿ.ಒ. ಕಚೇರಿಗಳಲ್ಲಿರುವ ಕಂಪ್ಯೂಟರ್ ಬಳಸಿ ಕೊಂಡು ಆನ್‌ಲೈನ್ ಮೂಲಕ ಭಾಗವಹಿಸಬೇಕು ಅಥವಾ ಜೂಮ್ ಆ್ಯಪ್ ಮೂಲಕ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಲಿಂಕ್‌ಅನ್ನು ಸೃಷ್ಟಿಸಿ ಕೊಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಲು ತಿಳಿಸಬೇಕು. ಸರಕಾರದಿಂದ ನೀಡಲಾಗುತ್ತಿರುವ ಸೌಲಭ್ಯಗಳು, ಅವರ ಸಮಸ್ಯೆಗಳು, ಇತ್ಯಾದಿಗಳನ್ನು 3ನೇ ಸೋಮವಾರದ ಸಭೆಯಲ್ಲಿ ಇತ್ಯರ್ಥಪಡಿಸಲಾಗುವುದು. ಈ ಸಭೆಯನ್ನು ನಿಯಮಿತವಾಗಿ ಆಯೋಜಿಸದಿದ್ದರೆ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬುದ್ಧಿಮಾಂದ್ಯ ಮಕ್ಕಳ ಪಿಂಚಣಿಯನ್ನು 800 ರೂ.ನಿಂದ 1,400 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಾಗೂ ಮಕ್ಕಳ ಪೋಷಣ ಭತ್ತೆಯನ್ನು 2,000 ರೂ.ಗಳಿಗೆ ಹೆಚ್ಚಿಸಲಾಗಿದ್ದು, ಈ ಮೊತ್ತ ಅರ್ಹರಿಗೆ ಸಂದಾಯವಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವಂತೆ ಸೂಚಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ವಿಕಲಚೇತನರ ಸಂಘದ ಅಧ್ಯಕ್ಷ ಮುರಳೀಧರ ನಾಯಕ್, ಸಾನ್ನಿಧ್ಯ ವಿದ್ಯಾ ಸಂಸ್ಥೆ, ಚೇತನ ವಿದ್ಯಾ ಸಂಸ್ಥೆ, ಸೈಂಟ್ ಆಗ್ನೆಸ್ ವಿಶೇಷ ಶಾಲೆಯ ಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.