ಉಡುಪಿ: ನವರಾತ್ರಿ ಪ್ರಯುಕ್ತ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಎಂಜಿಎಂ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 6ನೇ ವರ್ಷದ ಉಡುಪಿ ದಾಂಡಿಯಾ- 2023ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ಸಾಂಪ್ರದಾಯಿಕ ಶೈಲಿಯ ದಿರಿಸಿನೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು.
ಶಾಸಕ ಯಶ್‌ಪಾಲ್ ಎ. ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಚಾಲನೆ ನೀಡಿದರು.
ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿತ್ತು. ಪ್ರವೇಶ ದ್ವಾರಕ್ಕೆ ಸಾಂಪ್ರದಾಯಿಕ ಸ್ಪರ್ಶ ನೀಡಿದ್ದರಿಂದ ಬಹುತೇಕರು ಅಲ್ಲಿ ಸೆಲ್ಫಿ ತೆಗೆದುಕೊಂಡರು. 7 ಆಹಾರ ಮಳಿಗೆಗಳು ಮತ್ತು ಕೂಪನ್ ವ್ಯವಸ್ಥೆಯೂ ಇತ್ತು. ಕೂಪನ್ ವಿಜೇತರಿಗೆ ಬಹುಮಾನ ನೀಡಲಾಯಿತು. ಸಾರ್ವಜನಿಕ ರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಸೆಲ್ಫಿ ಪಾಯಿಂಟ್ ಕೂಡ ಇತ್ತು. ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನೃತ್ಯ ತಂಡಗಳು, ಉಡುಪಿ ಸಹಿತ ಬೇರೆ ಬೇರೆ ಭಾಗದಿಂದಲೂ ದಾಂಡಿಯಾ ನೃತ್ಯಕ್ಕೆ ಬಂದಿದ್ದು ವಿಶೇಷವಾಗಿತ್ತು.
ಜಯಲಕ್ಷ್ಮೀ ಸಿಲ್ಕ್ಸ್ ನ ಜಯಲಕ್ಷ್ಮೀ ಬಿ. ಹೆಗ್ಡೆ, ಅಪರ್ಣಾ ಆರ್. ಹೆಗ್ಡೆ, ಆಭರಣ ಜುವೆಲರ್ನ ಸಂಧ್ಯಾ ಎಸ್. ಕಾಮತ್, ಪವರ್ ಸಂಸ್ಥೆಯ ಅಧ್ಯಕ್ಷೆ ಸುವರ್ಷ ಮಿಂಜ್ ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ. ವಸಂತ್ ಭಟ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ವಲ್ಲಭ್ ಭಟ್ ಉಪಸ್ಥಿತರಿದ್ದರು.
ಸುಜಲಾ ಎಸ್. ಸುವರ್ಣ ಸ್ವಾಗತಿಸಿ, ಉಜ್ವಲಾ ಪೈ ವಂದಿಸಿ, ಅಕ್ಷತಾ ನಿತೀನ್ ನಿರೂಪಿಸಿದರು.
ರಿದಂ ಮ್ಯೂಸಿಕ್ ಟೀಮ್‌ನ ಸತೀಶ್ ಬನ್ನಂಜೆಯವರ ಸಂಗೀತ ದೊಂದಿಗೆ ದಾಂಡಿಯಾ ನಡೆಯಿತು.