Advertisement

Udupi, D.K.: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ಮೆರವಣಿಗೆ, ಮುಷ್ಕರ

12:08 AM Aug 18, 2024 | Team Udayavani |

ಮಂಗಳೂರು: ಕೋಲ್ಕತಾದ ಆರ್‌.ಜಿ. ಕಾರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ದೇಶದೆಲ್ಲೆಡೆ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ಸಹಿತ ವಿವಿಧ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ನಗರದ ಐಎಂಎ ಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಶಾಂತಿಯುತ ಮೆರವಣಿಗೆ ನಡೆಯಿತು.

Advertisement

ಐಎಂಎ ಅಧ್ಯಕ್ಷ ಡಾ| ರಂಜನ್‌ ಆರ್‌.ಕೆ. ಮಾತನಾಡಿ, ವೈದ್ಯರ ಮೇಲೆ ನಡೆದ ಈ ಕೃತ್ಯ ಖಂಡನೀಯ. ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಸುರಕ್ಷಿತ ವಾತಾ ವರಣ ಕಲ್ಪಿಸಿಕೊಡಬೇಕು. ವೈದ್ಯರ ಮೇಲಿನ ಹಲ್ಲೆ ತಡೆಗೆ ಪ್ರತ್ಯೇಕ ನಿಯಮ ಜಾರಿಯಾಗಬೇಕು ಎಂದು ಆಗ್ರಹಿಸಿದರು.

ಶಾಸಕ ಡಾ| ವೈ. ಭರತ್‌ ಶೆಟ್ಟಿ ಮಾತನಾಡಿ, ನಮ್ಮ ನೋವನ್ನು ನಾಗರಿಕರ ಸಮಾಜಕ್ಕೆ ತೋರ್ಪಡಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ವೈದ್ಯರು ಮತ್ತು ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸ ಆಗಬೇಕು ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ವೈದ್ಯರು ಸಾರ್ವಜನಿಕರ ಜೀವ ರಕ್ಷಣೆ ಮಾಡುವವರು. ಈ ಕೃತ್ಯದ ಮೂಲಕ ವೈದ್ಯರಿಗೇ ರಕ್ಷಣೆ ಇಲ್ಲದ ವಾತಾವರಣ ಸೃಷ್ಟಿಯಾಗಿದೆ. ಕೃತ್ಯ ಎಸಗಿದ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

Advertisement

ಐಎಂಎ ಮಂಗಳೂರು ಚುನಾಯಿತ ಅಧ್ಯಕ್ಷೆ ಡಾ| ಜೆಸ್ಸಿ ಮರಿಯ ಡಿ’ಸೋಜಾ ಮಾತನಾಡಿ, ಸಿಬಿಐಯಿಂದ ಈ ತನಿಖೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು. ಈ ಕೃತ್ಯ ಎಸಗಿದವರಿಗೆ ಕಠಿನ ಶಿಕ್ಷೆ ನೀಡಬೇಕು ಎಂದು ಹೇಳಿದರು.
ಸಂಸದ ಕ್ಯಾ| ಬ್ರಿಜೇಶ್‌ ಚೌಟ, ಐಎಂಎ ಕಾರ್ಯದರ್ಶಿ ಡಾ| ಅವಿನ್‌ ಬಿ.ಆರ್‌. ಆಳ್ವ, ಕೋಶಾಧಿಕಾರಿ ಡಾ| ಪ್ರಶಾಂತ್‌ ಬಿ., ಆಯುಷ್‌, ಇಂಡಿ ಯನ್‌ ಡೆಂಟಲ್‌ ಅಸೋಸಿಯೇಶನ್‌, ಪಿಸಿಯೋಥೆರಪಿ, ರೆಡ್‌ಕ್ರಾಸ್‌, ವಿವಿಧ ಸಂಘಟನೆಗಳು ಸಹಿತ ಸಾವಿರಾರು ಮಂದಿ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಸ್ಥಳಕ್ಕೆ ಬರಲು ಪಟ್ಟು
ಅತ್ತಾವರ ಬಳಿಯ ಐಎಂಎ ಭವನದಿಂದ ಬಂದ ಶಾಂತಿಯುತ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯತ್ತ ಬರುತ್ತಿದ್ದಂತೆ ಪೊಲೀಸರು ತಡೆದರು. ಬಳಿಕ ಪ್ರತಿಭಟನಕಾರರ ಮನವಿಯಂತೆ ಜಿಲ್ಲಾಧಿಕಾರಿ ಮುಲ್ಲೆ çಮುಗಿಲನ್‌ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಒಪಿಡಿ ಸೇವೆಯಲ್ಲಿ ವ್ಯತ್ಯಯ
ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಶನಿವಾರ ವಿವಿಧ ಆಸ್ಪತ್ರೆಗಳ ಹೊರ ರೋಗಿ ವಿಭಾಗದ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆಯನ್ನು ಪೂರ್ಣರೂಪದಲ್ಲಿ ಸ್ಥಗಿತ ಮಾಡಲಾಗಿದ್ದು, ಆದರೆ ಕೆಲವು ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯಲ್ಲಿ ತೊಂದರೆ ಆಗಬಾರದು ಎಂದು ಸೀಮಿತ ಸಂಖ್ಯೆಯ ವೈದ್ಯರು ಕರ್ತವ್ಯ ನಿರ್ವಹಿಸಿದರು. ವೆನ್ಲಾಕ್‌ ಆಸ್ಪತ್ರೆಯಲ್ಲಿ ತುರ್ತು ಸೇವೆಗಳು ಮಾತ್ರವೇ ಲಭ್ಯವಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ದೊಡ್ಡ ಮಟ್ಟಿನ ಸಮಸ್ಯೆ ಉಂಟಾಗಲಿಲ್ಲ. ತುರ್ತು ಸೇವೆಯಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು. ಜಿಲ್ಲೆಯ ಹೆಚ್ಚಿನ ಕ್ಲಿನಿಕ್‌ಗಳು ಬಂದ್‌ ಆಗಿ‌ದ್ದವು.

ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ಕರೆಯಂತೆ ಉಡುಪಿ ಜಿಲ್ಲಾದ್ಯಂತ ವೈದ್ಯರು ಬೆಳಿಗ್ಗೆ 6 ಗಂಟೆಯಿಂದ ತುರ್ತು ಸೇವೆಗಳನ್ನು ಹೊರತುಪಡಿಸಿ ಇತರ ಎಲ್ಲಾ ವೈದ್ಯಕೀಯ ಸಂಸ್ಥೆಗಳನ್ನು ಮುಚ್ಚಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.

ಉಡುಪಿ ಕರಾವಳಿ ಶಾಖೆಯ ವ್ಯಾಪ್ತಿಯ 250 ಕ್ಕೂ ಹೆಚ್ಚು ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಆ.17ರ ಶನಿವಾರ ಬೆಳ್ಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಆಸ್ಪತ್ರೆ ಹಾಗೂ ಕ್ಲಿನಿಕ್‌ ಗಳ ಸೇವೆಗಳನ್ನು ಸ್ಥಗಿತಗೊಳಿಸಲಿದ್ದಾರೆ ಎಂದು ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ರಾಜಲಕ್ಷ್ಮಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next