ಉಡುಪಿ: ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ ಪ್ರಧಾನ ಸಿ.ಜೆ.ಮತ್ತು ಸಿ.ಜೆ.ಎಂ. ನ್ಯಾಯಾಲಯ ತೀರ್ಪು ನೀಡಿದೆ.
2021ರ ನ.17ರಂದು ರಾತ್ರಿ ಸುಕೇಶ್ ನಾಯ್ಕ ಎಂಬಾತ ಗುಂಡಿಬೈಲು ದುಗ್ಗಣ್ಣ ಬೆಟ್ಟು ಮಾರ್ಗದ ಜುಮಾದಿಕಟ್ಟೆ ದೇವಸ್ಥಾನದ ಹಿಂಬದಿ ರಸ್ತೆಯ ಬಾಬು ಆಚಾರ್ಯ ಅವರ ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿ, ಕಪಾಟಿನ ಲಾಕರ್‌ನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿರುವ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ದೋಷಾ ರೋಪಣ ಪಟ್ಟಿಯನ್ನು ನ್ಯಾಯಾ ಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಸಿ.ಜೆ.ಮತ್ತು ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶೆ ಶಕುಂತಲಾ ಅವರು ಸುಕೇಶ್ ನಾಯ್ಕನಿಗೆ ಒಟ್ಟು 10 ವರ್ಷಗಳ ಕಾಲ ಕಠಿನ ಸಜೆ ಹಾಗೂ 5,000 ರೂ. ದಂಡ ವಿಧಿಸಿದ್ದಾರೆ.
ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ವಾದ ಮಂಡಿಸಿದ್ದಾರೆ.