Advertisement

ಉಡುಪಿ ಜಿಲ್ಲೆ: 1.51 ಲಕ್ಷ ಲಸಿಕೆಯ ಗುರಿ, ಉತ್ತಮ ಸಾಧನೆ

04:08 AM Mar 09, 2021 | Team Udayavani |

ಉಡುಪಿ: ಜಿಲ್ಲೆಯ ಎಲ್ಲ ಸರಕಾರಿ ಮತ್ತು 14 ಖಾಸಗಿ ಆಸ್ಪತ್ರೆಗಳಲ್ಲಿ ಮಾ. 8ರಂದು 60 ವರ್ಷ ಮೇಲ್ಪಟ್ಟವರು ಮತ್ತು 45ರಿಂದ 59 ವರ್ಷ ವಯಸ್ಸಿನ ಆರೋಗ್ಯ ಸಮಸ್ಯೆ ಇರುವವರಿಗೆ ಲಸಿಕೆ ನೀಡಲು ಆರಂಭಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈ ವರ್ಗದ 1,51,557 ಜನರನ್ನು ಗುರುತಿಸಲಾಗಿದ್ದು ಮೊದಲ ದಿನ 1,800 ಜನರಿಗೆ ಲಸಿಕೆ ನೀಡಲಾಗಿದೆ.

Advertisement

ಜಿಲ್ಲೆಗೆ ಕೊವಿಶೀಲ್ಡ್‌ ಲಸಿಕೆಯ 82,100 ಡೋಸ್‌ ಸರಬರಾಜಾಗಿದ್ದು, ಇದರಲ್ಲಿ ಹಿರಿಯ ನಾಗರಿಕರಿಗೆ 49,200 ಡೋಸ್‌ಗಳನ್ನು ಮೀಸಲಿರಿಸಲಾಗಿದೆ.

ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ
ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ.

ಖಾಸಗಿ ಆಸ್ಪತ್ರೆ: 250 ರೂ. ಶುಲ್ಕ
ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‌ಗೆ 250 ರೂ. ನಿಗದಿಪಡಿಸಲಾಗಿದೆ. ಇದರಲ್ಲಿ 100 ರೂ. ಆಸ್ಪತ್ರೆಯ ಸೇವಾ ಶುಲ್ಕ ಮತ್ತು 150 ರೂ. ಭಾರತ ಸರಕಾರದ ಖಾತೆಗೆ ಜಮೆಯಾಗಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಿಸಿ, ಸಿಇಒಗೆ 2ನೇ ಡೋಸ್‌
ಕೊರೊನಾ ಕಾರಣದಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿರುವ ಹಿರಿಯ ನಾಗರಿಕರು, ಇತರ ಕಾಯಿಲೆಯ ಮಧ್ಯವಯಸ್ಕರಿಗೆ ಸರಕಾರ ಲಸಿಕೆ ನೀಡಲು ಆದ್ಯತೆ ನೀಡಿದೆ. ನಾನು ಸಹಿತ ಜಿಲ್ಲೆಯ ಹಿರಿಯ ಅಧಿಕಾರಿಗಳು ಲಸಿಕೆಯನ್ನು ತೆಗೆದುಕೊಂಡಿದ್ದೇವೆ. ಪ್ರಧಾನಿಯವರೇ ಸ್ವತಃ ಲಸಿಕೆ ಸ್ವೀಕರಿಸಿದ್ದಾರೆ. ಈಗ 28 ದಿನಗಳಾ ಗಿರುವುದರಿಂದ ಎರಡನೆಯ ಡೋಸ್‌ ಅನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ನಗಣ್ಯ ಅಡ್ಡ ಪರಿಣಾಮ
ಆರೋಗ್ಯ ಸಿಬಂದಿ, ಮುಂಚೂಣಿ ಕಾರ್ಯಕರ್ತರಲ್ಲಿ ಶೇ.74ರಷ್ಟು ಲಸಿಕೆ ವಿತರಣೆಯಾಗಿದ್ದು ಕೇವಲ ಮೂವರಿಗೆ ಮಾತ್ರ ಸ್ವಲ್ಪ ಅಡ್ಡ ಪರಿಣಾಮ ಕಂಡುಬಂದಿದ್ದು ಬಳಿಕ ಸಹಜಸ್ಥಿತಿಗೆ ಬಂದರು. 31,000 ಜನರಿಗೆ ಲಸಿಕೆ ನೀಡಿರುವಾಗ ಮೂವರಿಗೆ ಮಾತ್ರ ಪರಿಣಾಮ ಕಂಡುಬಂದಿರುವುದು ದೊಡ್ಡ ವಿಷಯವಲ್ಲ ಎಂದು ಡಿಸಿ ಸ್ಪಷ್ಟಪಡಿಸಿದರು.

74 ಆಸ್ಪತ್ರೆಗಳಲ್ಲಿ ನಿರ್ವಹಣೆ
ಮಾ. 8ರಂದು 14 ಖಾಸಗಿ ಆಸ್ಪತ್ರೆ ಸೇರಿದಂತೆ ಒಟ್ಟು 67 ಆಸ್ಪತ್ರೆಗಳಲ್ಲಿ ಲಸಿಕೆ ನೀಡಿಕೆ ಆರಂಭಿಸಲಾಗಿದೆ. ಮಾ. 9ರಂದು ಮತ್ತೆ ನಾಲ್ಕು, ಮಾ. 10ರಂದು ಮತ್ತೆ ಮೂರು ಆಸ್ಪತ್ರೆಗಳಲ್ಲಿ ಸೇರಿ ಒಟ್ಟು 74 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು ಎಂದರು.

ಯಾವ ದಿನಗಳಲ್ಲಿ?
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಂಗಳವಾರ, ಗುರುವಾರ, ರಜಾ ದಿನಗಳನ್ನು ಬಿಟ್ಟು ಲಸಿಕೆ ನೀಡಲಾಗುವುದು. ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ರಜಾ ದಿನಗಳನ್ನು ಬಿಟ್ಟು, 2ನೇ ಮತ್ತು 4ನೇ ಶನಿವಾರವೂ ಸಹಿತ ಉಳಿದ ಎಲ್ಲ ದಿನಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಡಿಸಿ ತಿಳಿಸಿದರು.
ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಆರೋಗ್ಯಾಧಿಕಾರಿ ಡಾ| ಸುಧೀರ್‌ ಚಂದ್ರ ಸೂಡ, ಲಸಿಕಾಧಿಕಾರಿ ಡಾ| ಎಂ. ಜಿ. ರಾಮ, ನೋಡಲ್‌ ಅಧಿಕಾರಿಗಳಾದ ಡಾ| ಪ್ರಶಾಂತ ಭಟ್‌, ಡಾ| ಪ್ರೇಮಾನಂದ್‌ ಉಪಸ್ಥಿತರಿದ್ದರು.

ಹೇಗೆ ಪಡೆಯಬೇಕು?
ಫ‌ಲಾನುಭವಿಗಳು ಲಸಿಕೆ ಪಡೆಯಲು ಯಾವುದೇ ಆಸ್ಪತ್ರೆ ಗಳನ್ನು ಆನ್‌ಲೈನ್‌ನಲ್ಲಿ ಆಯ್ಕೆ ಮಾಡಿಕೊಳ್ಳಬಹುದು (ಸರಕಾರಿ ರಜಾ ದಿನ ಹೊರತುಪಡಿಸಿ). https://selfregistration.cowin.gov.in ಅಥವಾ aarogyasetu app ನಲ್ಲಿ ಲಸಿಕೆ ಪಡೆಯಲು ದಾಖಲಿಸಿಕೊಳ್ಳಬಹುದು. ನೇರವಾ ಗಿಯೂ ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ತಂದು ಲಸಿಕೆ ಪಡೆಯಬಹುದು. 45ರಿಂದ 59 ವರ್ಷ ವಯಸ್ಸಿನ ವರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖೀಸಿದ ವೈದ್ಯ ಕೀಯ ಪ್ರಮಾಣಪತ್ರವನ್ನು ತಂದಿರ ಬೇಕು. ಈಗಾಗಲೇ ನೀಡಲಾಗು ತ್ತಿರುವ ಲಸಿಕೆಯನ್ನು ಆರೋಗ್ಯ ಸಿಬಂದಿ ಮತ್ತು ಮುಂಚೂಣಿ ಕಾರ್ಯ ಕರ್ತರು ಸರಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಪಡೆಯಬಹುದು.

ಉಡುಪಿ ಜಿಲ್ಲೆ: ಹೆಚ್ಚುತ್ತಿರುವ ಸೋಂಕು, ಎಚ್ಚರಿಕೆ ಅಗತ್ಯ
ಉಡುಪಿ: ಈ ಒಂದು ವಾರದಲ್ಲಿ ಕೊರೊನಾ ಸೋಂಕು ಕಳೆದ ಒಂದು ತಿಂಗಳಲ್ಲಿ ಆಗಿರುವಷ್ಟು ದಾಖಲಾಗಿದೆ. ಎಷ್ಟೋ ಜನರು ಕೊರೊನಾ ಸೋಂಕು ನಿರ್ಮೂಲನ ವಾಗಿದೆ ಎಂದು ತಿಳಿದಿರ ಬಹುದು. ಆದರೆ ಪರಿಸ್ಥಿತಿ ಹಾಗಿಲ್ಲ. ಆದ್ದರಿಂದ ಮಾಸ್ಕ್, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಕಾಪಾಡುವಿಕೆ ಅತಿ ಅಗತ್ಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

ಗಡಿ ರಾಜ್ಯದವರಿಗೆ ಸೂಚನೆ
ಮಹಾರಾಷ್ಟ್ರ, ಕೇರಳಕ್ಕೆ ವ್ಯವಹಾರ ಸಂಬಂಧಿತವಾಗಿ ಹೋಗಿ ಬರು ವವರು, ಲಾರಿ ಚಾಲಕರು 15 ದಿನಗಳಿಗೊಮ್ಮೆ ಪರೀಕ್ಷೆ ಮಾಡಿಕೊಳ್ಳಬೇಕು. ಮೊದಲ ಬಾರಿ ಬರುವವರು 72 ಗಂಟೆಗಳ ಒಳಗಿನ ವರದಿ ತರಬೇಕು. ಸಭಾಂಗಣದಲ್ಲಿ ನೆರೆದಿರುವವರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಸಭಾಂಗಣ ಮೊದಲಾದ ಸಾರ್ವಜನಿಕ ಕೇಂದ್ರಗಳಲ್ಲಿ ಕೆಲಸ ಮಾಡುವವರೂ ಪರೀಕ್ಷೆ ಮಾಡಿಸಬೇಕು. ಪರೀಕ್ಷಾ ನಿಗದಿ ಗುರಿಯನ್ನು ಹೆಚ್ಚು ಮಾಡಲಾಗುತ್ತಿದೆ ಎಂದರು.

ಮಾಹಿತಿ: ಸಾರ್ವಜನಿಕರಿಗೆ ಮನವಿ
ಸಾರ್ವಜನಿಕರು ಮಹಾರಾಷ್ಟ್ರ, ಕೇರಳದಿಂದ ಬಂದವರಲ್ಲಿ ಪರೀಕ್ಷಾ ವರದಿ ತಾರದೆ ಇರುವುದು ಕಂಡುಬಂದರೆ ಜಿಲ್ಲಾಡಳಿತಕ್ಕೆ ತಿಳಿಸಬೇಕು. ಅಂತಹವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಮತ್ತು ಪರೀಕ್ಷೆಯನ್ನೂ ಮಾಡಿಸುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪರೀಕ್ಷೆ ಹೆಚ್ಚಳ
ಇತ್ತೀಚೆಗೆ ಹೆಚ್ಚಿದ ಸೋಂಕು ಪ್ರಾಥಮಿಕ ಸಂಪರ್ಕ ಹೊಂದಿದ ವರಿಂದ ಆಗಿದೆ. ಹೀಗಾಗಿ ಪರೀಕ್ಷೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳ
ಲಾಗಿದೆ. 1,050 ಪರೀಕ್ಷೆ ನಡೆಸುವ ಗುರಿ ಇದ್ದರೂ 1,200- 1,300ರಷ್ಟು ಪರೀಕ್ಷೆ ಮಾಡಲಾಗುತ್ತಿದೆ ಎಂದರು.
ಇಷ್ಟರವರೆಗೆ ಕೊರೊನಾದಿಂದ ಮೃತಪಟ್ಟವರಲ್ಲಿ 65 ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಹಿರಿಯರು ವಿಶೇಷವಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಜಾಗರೂಕ ರಾಗಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next