ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಅಂಗವಿಕಲರು ಮತ್ತು 80 ವರ್ಷ ಮೇಲ್ಪಟ್ಟವರಿಗೆ
ಮನೆಯಿಂದಲೇ ಮತ ಚಲಾಯಿಸಲು ವಿಶೇಷ ಸೌಲಭ್ಯ ಒದಗಿಸಿದ್ದರೂ, ಮತಗಟ್ಟೆಗೆ ಬರಲು ಹೆಚ್ಚಿನವರು ಆಸಕ್ತಿ ವಹಿಸಿದ್ದಾರೆ.
ಜಿಲ್ಲೆಯ ಬಹುತೇಕ ಅಂಗವಿಕಲರು ಮತ್ತು ಹಿರಿಯ ನಾಗರಿಕರು ಮತದಾನದ ದಿನದಂದು ಮತಗಟ್ಟೆಗೆ ಖುದ್ದಾಗಿ ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸುವ ಉತ್ಸಾಹ ಹೊಂದಿದ್ದಾರೆ.
ಮನೆಯಲ್ಲೇ ಮತದಾನ ಮಾಡಲು ಅರ್ಜಿ ಪಡೆದ ಹಿರಿಯ ನಾಗರಿಕರಲ್ಲಿ ಬೈಂದೂರು ಕ್ಷೇತ್ರದ 927, ಕುಂದಾಪುರದ
903, ಉಡುಪಿಯ 494, ಕಾಪುವಿನ 856, ಕಾರ್ಕಳದ 796 ಮಂದಿ ಸೇರಿದಂತೆ ಒಟ್ಟು 3,976 ಮಂದಿ ಮನೆಯಿಂದಲೇ ಮತದಾನ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು ಅಂಗವಿಕಲರಲ್ಲಿ ಬೈಂದೂರಿನಿಂದ 140, ಕುಂದಾಪುರದ 202, ಉಡುಪಿಯ 105, ಕಾಪುವಿನ 152 ಹಾಗೂ ಕಾರ್ಕಳದಲ್ಲಿ 31 ಸೇರಿದಂತೆ ಒಟ್ಟು 630 ಅಂಗವಿಕಲರಲ್ಲಿ ಈ ಸೌಲಭ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಮತದಾನ ದಿನದಂದು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುವ ಸಂಭ್ರಮವನ್ನು ಆಚರಿಸಿಕೊಳ್ಳಲು ಜಿಲ್ಲೆಯ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಉತ್ಸಾಹ ತೋರಿದ್ದು, ಅದರಲ್ಲಿ ತೀರಾ ಆವಶ್ಯಕತೆಯಿರುವ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯವನ್ನು ಕಲ್ಪಿಸಲು ಜಿಲ್ಲಾಡಳಿತ ಈಗಾಗಲೇ ಯೋಜನೆ ರೂಪಿಸಿದೆ.
ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಅಚರಿಸುವಂತೆ ಚುನಾವಣ ಆಯೋಗ ತಿಳಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಸುಗಮ ಮತ್ತು ಶಾಂತಿಯುತ ಚುನಾವಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಬಹುತೇಕ ಹಿರಿಯ ನಾಗರಿಕರು ಮತ್ತು ಅಂಗವಿಕಲರು ತಮಗೆ ಚುನಾವಣ ಆಯೋಗ ಮನೆಯಿಂದಲೇ ಮತದಾನ ಮಾಡಲು ನೀಡಿರುವ ಸೌಲಭ್ಯದ ಬದಲು ಮತಗಟ್ಟೆಗೆ ಬಂದು ಮತ ಚಲಾಯಿಸಲು ಹೆಚ್ಚಿನ ಉತ್ಸಾಹ ತೋರಿರುವುದು ಇತರ ಮತದಾರರಿಗೂ
ಪ್ರೇರಣೆಯಾಗಲಿದೆ.
ಕೂರ್ಮಾರಾವ್ ಎಂ.,ಜಿಲ್ಲಾಧಿಕಾರಿ